ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಸ್ಥಿರ ಜಲಕೃಷಿ ಮತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ 

Spread the love

ಕೃಷಿ ವಿಜ್ಞಾನ ಕೇಂದ್ರದಲ್ಲಿ ಸುಸ್ಥಿರ ಜಲಕೃಷಿ ಮತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ 

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರಿಗೆ, ನಿರುದ್ಯೋಗಿ ಪದವಿದರರಿಗೆ ಹಾಗೂ ರೈತ-ಮಹಿಳೆಯರಿಗೆ ಫೆಬ್ರವರಿ 22 ರಂದು ಸುಸ್ಥಿರ ಮೀನು ಕೃಷಿ ಕುರಿತು ಮೂರು ದಿನದ ತರಬೇತಿ ಕಾರ್ಯಾಗಾರವನ್ನು ಪ್ರಾರಂಭಿಸಲಾಯಿತು.

ಈ ಕಾರ್ಯಗಾರವನ್ನು 3 ದಿನಗಳವರೆಗೆ ಭಾರತೀಯ ಕೃಷಿ ಸಂಶೋಧನಾ ಪರಿಷತ್‍ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ ಮತ್ತು ಕಾರವಾರದ ವಾಣಿಜ್ಯ ನಿರ್ದೇಶನಾಲಯದಡಿ ಕಾರ್ಯನಿರ್ವಹಿಸುತ್ತಿರುವ ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ ಇವರ ಸಹಯೋಗದಿಂದ ನಡೆಸಲಾಯಿತು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಡೀನ್ ಡಾ| ಎಚ್. ಶಿವಾನಂದ ಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಕಾರ್ಯಾಗಾರವು ನಿರುದ್ಯೋಗಿಗಳಿಗೆ, ರೈತ ಬಾಂಧವರಿಗೆ ಅನುಕೂಲವಾಗಲಿದೆ ಎಂದು ಹೇಳಿದರು. ಮೀನಿನ ಜೊತೆ ಇತರೆ ಕೃಷಿಯೇತರ ಬೆಳೆಗಳಾದ, ಹೈನುಗಾರಿಕೆ, ಕೋಳಿ, ಹಂದಿ, ತೋಟಗಾರಿಕೆ ಬೇಳೆಗಳು, ಮುಂತಾದವುಗಳನ್ನು ಸಮಗ್ರ ಬೇಸಾಯ ಪದ್ದತಿಯಲ್ಲಿ ಅಳವಡಿಸಿ ಮಾಡಿದರೆ ಜಲಕೃಷಿಯಲ್ಲಿ ಪ್ರಧಾನ ಕೃಷಿಯೊಂದಿಗೆ ಉಪಕಸುಬಾಗಿ ಮಾಡಬಹುದಾಗಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ| ಎ.ಟಿ. ರಾಮಚಂದ್ರ ನಾಯ್ಕ ರವರು, ಕೇಂದ್ರದ ಸವಲತ್ತುಗಳ ಬಗ್ಗೆ ವಿವರಿಸಿ, ವೈಜ್ಞಾನಿಕವಾಗಿ ಸಂಶೋದನೆಯಿಂದ ಹೊರಬಂದ ತಾಂತ್ರಿಕತೆಗಳನ್ನು ಬಳಸಿ ಕೃಷಿಯನ್ನು ಮಾಡಿದರೆ ಆದಾಯದಲ್ಲಿ ನಿರಂತರವಾಗಿ ಗಣನೀಯ ಆದಾಯಗಳಿಸಲು ಅನುಕೂಲವಾಗುತ್ತದೆಂದು ಹೇಳಿದರು.

ಸಿಹಿನೀರಿನಲ್ಲಿ ಬೆಳಸಲ್ಪಡುವ ವಿವಿಧ ಮೀನು ತಳಿಗಳಾದ ಕಾಟ್ಲಾ, ರೋಹು, ಮೃಗಾಲ ಮತ್ತು ಸಾಮನ್ಯಗೆಂಡೆ ಮೀನುಗಳ ಬೆಳೆಸುವ ಪದ್ದತಿಗಳನ್ನು ವಿಜ್ಞಾನಿಗಳ ಸಲಹೆಯ ಮೇರೆಗೆ ಅಳವಡಿಸಿದರೆ ಲಾಭಗಳಿಸಬಹುದಾದ ಅಂಶಗಳನ್ನು ವಿವರವಾಗಿ ತಿಳಿಸಿದರು.

ಸಾಗರೋತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕ ವಿಜಯಕುಮಾರ್ ಯರಗಲ್ ರವರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ, ಪ್ರಾಧಿಕಾರದ ಸೌಲಭ್ಯಗಳನ್ನು ವಿವರಿಸಿ, ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು. ಜಲಕೃಷಿಯಲ್ಲಿ ಹೊಸ ಆವಿಷ್ಕಾರಗಳನ್ನು ಅಳವಡಿಸಿ ಸುಸ್ಥಿರ ಕೃಷಿ ಪದ್ದತಿಗಳನ್ನು ಅನುಸರಿಸಿದರೆ ಲಾಭಗಳಿಸ ಬಹುದಾಗಿದೆಯೆಂದು ಹೇಳಿದರು.

ಭಾರತ ಮುಂದುವರೆದ ದೇಶವಾಗಬೇಕಾದರೆ, ಅಮದಿಗಿಂತ ರಫ್ತನ್ನು ಹೆಚ್ಚಿಸಿದರೆ ಮಾತ್ರ ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಮೀನು ಕೃಷಿಯನ್ನು ಬಲಪಡಿಸಿಲು ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕಾರ್ಯಗಾರವನ್ನು ರೈತರಿಗಾಗಿ ಆಯೋಜಿಸಲಾಗಿದೆಯೆಂದು ಹೇಳಿದರು.

ಗೌರವಾನ್ವಿತ ಅತಿಥಿಗಳಾದ ಪ್ರಾದೇಶಿಕ ನಿರ್ದೇಶಕರ ಪರಿಸರ ರವರ ಕಛೇರಿಯ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್ ಯು. ರವರು ಭಾಗವಹಿಸಿದ್ದರು.

ಇನ್ನೋರ್ವ ಗೌರವಾನ್ವಿತ ಅತಿಥಿಯಾದ ಮೀನುಗಾರಿಕಾ ಮಹಾವಿದ್ಯಾಲಯದ ಸಹ ವಿಸ್ಥರಣಾ ನಿರ್ದೇಶಕ ಡಾ| ಶಿವಕುಮಾರ್ ಎಂ. ಮಾತನಾಡಿ ಕೃಷಿಯಲ್ಲಿ ಉತ್ಪಾದನೆಯ ಲೆಕ್ಕಾಚಾರ ಮಾಡಿ ಕೃಷಿ ಕೈಗೊಂಡರೆ, ರೈತರು ಹಾಕುವ ಬಂಡವಾಳ ಮತ್ತು ಆದಾಯದ ಪರಿಜ್ಞಾನ ಅರಿತುಕೊಳ್ಳುವುದು ಅನಿವಾರ್ಯವಾಗಿರುತ್ತದೆ ಎಂದು ಹೇಳಿದರು.

ಒಟ್ಟು 40 ಜನ ರೈತರು, ರೈತ ಮಹಿಳೆಯರು, ನಿರುದ್ಯೋಗಿ ಯುವಕ-ಯುವತಿಯರು ಈ ಕಾರ್ಯಾಗಾರದ ಪ್ರಯೋಜನ ಪಡೆದರು.

ಬೇಸಾಯಶಾಸ್ತ್ರದ ವಿಜ್ಞಾನಿ ಹರೀಶ್ ಶೆಣೈ ಸ್ವಾಗತಿಸಿದರು. ಮೀನುಗಾರಿಕಾ ವಿಜ್ಞಾನಿ ಗಣೇಶ್‍ಪ್ರಸಾದ್ ಎಲ್. ನಿರೂಪಿಸಿದರು. ಯಶಶ್ರೀ ವಂದಿಸಿದರು. ದೀಪಾ ಪ್ರಾರ್ಥಿಸಿದರು.


Spread the love