ಕೋಟ್ಪಾ-2003 ಉನ್ನತ ಅನುಷ್ಠಾನ ಜಿಲ್ಲೆಯಾಗಿ ಉಡುಪಿ ಘೋಷಣೆ

Spread the love

ಕೋಟ್ಪಾ-2003 ಉನ್ನತ ಅನುಷ್ಠಾನ ಜಿಲ್ಲೆಯಾಗಿ ಉಡುಪಿ ಘೋಷಣೆ

ಉಡುಪಿ : ಉಡುಪಿ ಜಿಲ್ಲೆಯನ್ನು ಕೋಟ್ಪಾ 2003 ಉನ್ನತ ಅನುಷ್ಟಾನ ಜಿಲ್ಲೆಯಾಗಿ ಇಂದು ಜಿಲ್ಲಾಧಿಕಾರಿಗಳು ಘೋಷಿಸಿದರು. ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕುರಿತು ಸಾಕಷ್ಟು ಜಾಗೃತಿ ಕಾರ್ಯಕ್ರಮಗಳಾಗಿದ್ದು, ವಿವಿಧೆಡೆಗಳಲ್ಲಿ ದಾಳಿಗಳನ್ನು ಸಹ ಆಯೋಜಿಸಲಾಗಿತ್ತು. ನಿರಂತರ ಇಂತಹ ಕಾರ್ಯಕ್ರಮಗಳಿಂದ ಜಿಲ್ಲೆ ಕೋಟ್ಪಾ ಅನುಷ್ಥಾನದಲ್ಲಿ ಯಶಸ್ವಿಯಾಗಿದೆ.

ಈ ಸಂಬಂದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು, ಉಡುಪಿಯಲ್ಲಿ,  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಉಡುಪಿ ಜಿಲ್ಲೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಜಿಲ್ಲಾ ಸರ್ವೇಕ್ಷಣಾ ಘಟಕ, ಅಜ್ಜರಕಾಡು ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ತಂಬಾಕು ನಿಯಂತ್ರಣ ಕುರಿತು ಗುಲಾಬಿ ಆಂದೋಲನ-2017 ಮತ್ತು COTPA 2003 ಉನ್ನತ ಅನುಷ್ಠಾನ ಜಿಲ್ಲೆ ಘೋಷಣೆ ಕಾರ್ಯಕ್ರಮ ನಡೆಯಿತು.

ಈ ಸಂಬಂಧ ಅನುಷ್ಠಾನಕ್ಕೆ ಶ್ರಮಿಸಿದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಸನ್ಮಾನ ಮತ್ತು ಜಿಲ್ಲಾಧಿಕಾರಿಗಳ ಸಹಿಯಿರುವ ಘೋಷಣಾ ಪತ್ರವನ್ನು ಅಪರ ಜಿಲ್ಲಾಧಿಕಾರಿ ಅನುರಾಧ ಅವರು ಎಲ್ಲರಿಗೂ ವಿತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷರಾದ ಮೀನಾಕ್ಷಿ ಮಾಧವ ಬನ್ನಂಜೆ ಅವರು, ಸಮಾಜ ಮುಖಿ ಚಿಂತನೆಗಳು ಮತ್ತು ದುಶ್ಚಟ, ದುವ್ರ್ಯಸನಗಳ ಬಗ್ಗೆ ಮಾಹಿತಿ   ಮಕ್ಕಳಿಂದ ಮನೆಗೆ ತನ್ಮೂಲಕ ಸಮಾಜಕ್ಕೆ ಹೋಗುವುದರ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದರು.

ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮಕ್ಕಳು ಮತ್ತು ಯುವಕರ ಪಾತ್ರ ಬಹಳ ಮುಖ್ಯವಾಗಿದ್ದು, ಜಿಲ್ಲೆಯ ಯಾವುದೇ ಭಾಗದಲ್ಲಿ ಶಾಲೆಗಳ ಬಳಿಯಲ್ಲಿ ಅನಧಿಕೃತ ತಂಬಾಕು ಮಾರಾಟ ಕಂಡು ಬಂದರೆ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಪೊಲೀಸ್ ಇಲಾಖೆಗೆ ತಿಳಿಸಬೇಕೆಂದು ಅಪರ ಜಿಲ್ಲಾಧಿಕಾರಿ ಅನುರಾಧ ಹೇಳಿದರು.

ವಿವಿಧ ಕಾರಣಗಳಿಂದ ದುಶ್ಚಟಗಳಿಗೆ ಬಲಿಯಾಗುವ ಯುವಶಕ್ತಿ, ಆರೋಗ್ಯವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ತಂಬಾಕಿನಲ್ಲಿರುವ ನಿಕೋಟಿನ್ ಜೊತೆಗೆ ಆರು ಸಾವಿರ ರಾಸಾಯನಿಕಗಳು ನಮ್ಮ ದೇಹವನ್ನು ಸೇರಿ ಕ್ಯಾನ್ಸರ್‍ಗೆ ನೂಕುತ್ತಿದೆ, ಇದರಿಂದ ಎಚ್ಚೆತ್ತುಕೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್ ಹೇಳಿದರು.

ಭಾರತದಲ್ಲಿ ಅತೀ ಹೆಚ್ಚು ಜನರು ಬಾಯಿ ಕ್ಯಾನ್ಸರ್‍ನಿಂದ  ಬಳಲುತ್ತಿದ್ದು, ಪ್ರತೀ ದಿನಕ್ಕೆ 2,500 ಜನ ರೋಗಿಗಳು ಸಾವನ್ನಪ್ಪುತ್ತಿರುವ ವರದಿಗಳಿದ್ದು,  ತಂಬಾಕು ಉತ್ಪನ್ನವು ಮಾರಕವಾಗಿ ರೋಗವನ್ನು ಹರಡುತ್ತಿದೆ ಎಂದು ಎಸ್ಪಿ ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟು, ಗುಟ್ಕಾ ಮುಂತಾದ ಸೇವನೆ ಕಂಡು ಬಂದಲ್ಲಿ ಇಲಾಖೆಯು 200 ರೂ ದಂಡ ಮತ್ತು ಕ್ರಮವನ್ನು ತೆಗೆದುಕೊಳ್ಳುತ್ತಿದೆ. ಜಿಲ್ಲಾ ಮಟ್ಟ, ತಾಲೂಕು ಮಟ್ಟಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣದತ್ತ ಪರಿಣಾಮಕಾರಿ ಹೆಜ್ಜೆಯನ್ನಿಟ್ಟಿದೆ ಎಂದರು.

ಕಾರ್ಯಕ್ರಮದಲ್ಲಿ ನಗರ ಸಭೆ ಸದಸ್ಯ ಯಶಪಾಲ್ ಸುವರ್ಣ, ರಾಜ್ಯ ತಂಬಾಕು ನಿಯಂತ್ರಣಾ ಘಟಕದ ಉಪನಿರ್ದೇಶಕ ಡಾ.ಎಂ.ಸೆಲ್ವರಾಜನ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶೇಷಶಯನ ಕಾರಿಂಜ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರೋಹಿಣಿ, ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್‍ಕುಮಾರ್, ರಾಜ್ಯ ತಂಬಾಕು ನಿಯಂತ್ರಣಾ ಘಟಕದ ರಾಜ್ಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್, ವಿಭಾಗೀಯ ನಿಯಂತ್ರಕ ಮಹಾಂತೇಶ್, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಸ್ ಡಿ ಎಂ ಸಿ ಉಪಾಧ್ಯಕ್ಷ ಪ್ರಕಾಶ್ ಅಂದ್ರಾದೆ  ಮತ್ತಿತರರು ಉಪಸ್ಥಿತರಿದ್ದರು.

ಡಾ ಸರ್ವೇಶ್ವರ್ ಉಪಾಧ್ಯಾಯ ಸ್ವಾಗತಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ರೋಹಿಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿ ಕೃತಿ ವಂದಿಸಿದರು. ರಾಮಕೃಷ್ಣ ನಾಯಕ್ ಕಾರ್ಯಕ್ರಮ ನಿರೂಪಿಸಿದರು.


Spread the love