ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ: ಸಿಟಿ ರವಿ ಆಪ್ತ ಸೇರಿದಂತೆ 6 ಮಂದಿ ಬಂಧನ

Spread the love

ಕ್ರಿಕೆಟ್‌ ಬೆಟ್ಟಿಂಗ್‌ ದಂಧೆ: ಸಿಟಿ ರವಿ ಆಪ್ತ ಸೇರಿದಂತೆ 6 ಮಂದಿ ಬಂಧನ

ಚಿಕ್ಕಮಗಳೂರು: ಕ್ರಿಕೆಟ್‌ ಬೆಟ್ಟಿಂಗ್‌ ದಂದೆ ನಡೆಸುತ್ತಿದ್ದ ಆರೋಪದ ಮೇರೆಗೆ ನಗರಸಭೆ ಬಿಜೆಪಿ ಸದಸ್ಯ ಸಿ.ಎಸ್‌.ರವಿಕುಮಾರ್‌ ಸೇರಿದಂತೆ 6 ಮಂದಿ ಆರೋಪಿಗಳನ್ನು ಜಿಲ್ಲಾ ಅಪರಾಧ ತನಿಖಾ ವಿಭಾಗದ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಬಂಧಿತರನ್ನು ರವಿಕುಮಾರ್‌ ಆಪ್ತ ಅಭಿ, ಕೋಟೆ ನಿವಾಸಿ ಪ್ರಶಾಂತ್‌, ಲಾರಿ ಮಾಲೀಕ ವೆಂಕಟೇಶ, ರಸಗೊಬ್ಬರ ಮಾರಾಟಗಾರ ಮೋಹನ, ಪ್ರಾರ್ಥನಾ ಮಂದಿರವೊಂದರ ಕಾರ್ಯದರ್ಶಿ ಅಫ್ಜಲ್‌ ಎಂದು ಗುರುತಿಸಲಾಗಿದೆ.

ಬಂಧಿತರಿಂದ ರೂ. 1.90 ಲಕ್ಷ ನಗದು, ಚೆಕ್‌, ಬೆಟ್ಟಿಂಗ್‌ಗೆ ಬಳಸುತ್ತಿದ್ದ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ತಲೆಮರೆಸಿಕೊಂಡಿರುವ ಗ್ರಾಮ ಪಂಚಾಯಿತಿ ಸದಸ್ಯನೊಬ್ಬನಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಆರೋಪಿಗಳು ರಾಜ್ಯ ಮತ್ತು ಹೊರ ರಾಜ್ಯದ ಬುಕ್ಕಿಗಳೊಂದಿಗೆ ಸಂಪರ್ಕ ಹೊಂದಿರುವುದು ತನಿಖೆಯಿಂದ ದೃಢಪಟ್ಟಿದೆ. ಜಿಲ್ಲೆಯ ಕೆಲ ಜನಪ್ರತಿನಿಧಿಗಳು ಈ ಜಾಲದಲ್ಲಿ ತೊಡಗಿರುವ ಬಗ್ಗೆ ಮಹತ್ವದ ಸುಳಿವು ಸಿಕ್ಕಿವೆ. ಕ್ರಿಕೆಟ್‌ ಬಗ್ಗೆ ಎಲ್ಲರಿಗೂ ಆಸಕ್ತಿ ಸಹಜ. ಆದರೆ, ಅದನ್ನೇ ಹಣ ಸಂಪಾದನೆಗೆ ಬೆಟ್ಟಿಂಗ್‌ ದಂದೆ ಮಾಡಿಕೊಂಡವರಿಂದ ಸಮಾಜದಲ್ಲಿ ಕ್ರಿಮಿನಲ್‌ ಪ್ರಕರಣಗಳು ಹೆಚ್ಚುತ್ತಿವೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಮಾಧ್ಯಮಗಳಿಗೆ ತಿಳಿಸಿದ್ದಾರೆ.

‘ಕ್ರಿಕೆಟ್‌ ಬೆಟ್ಟಿಂಗ್‌ ದಂದೆಗೆ ಸುಧಾರಿತ ತಂತ್ರಜ್ಞಾನ ಬಳಸಿಕೊಂಡಿದ್ದಾರೆ. ಬೆಂಗಳೂರು ಹಾಟ್‌ಲೈನ್ ಹಾಗೂ ಸಕಲೇಶಪುರ ಹಾಟ್‌ಲೈನ್ ಮೂಲಕ ಬೆಟ್ಟಿಂಗ್ ನಡೆಸಿದ್ದಾರೆ. ಈ ದಂಧೆಯ ಜಾಲ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ನಗರಗಳಿಗೆ ಹರಡಿದೆ. ಪ್ರಕರಣವನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಇಬ್ಬರು ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ತನಿಖೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ತಿಳಿಸಿದರು.

‘ಕ್ರಿಕೆಟ್‌ ಬೆಟ್ಟಿಂಗ್‌ ದಂದೆ ಜಿಲ್ಲೆಯಲ್ಲಿ 2014ರಿಂದಲೂ ನಡೆಯುತ್ತಿದೆ. ನಗರದಲ್ಲಿ ನಡೆಯುತ್ತಿದ್ದ ದಂಧೆಗೆ ಸೂತ್ರಧಾರನಾಗಿರುವ ರವಿಕುಮಾರ್‌ ಬೆಟ್ಟಿಂಗ್‌ ದಂದೆಗಾಗಿಯೇ ವಾಟ್ಸ್‌ಆ್ಯಪ್‌ ಗ್ರೂಪ್‌ ರಚಿಸಿಕೊಂಡು, ಬೆಟ್ಟಿಂಗ್‌ಗೆ ಸದಸ್ಯರನ್ನು ಸೆಳೆಯುತ್ತಿದ್ದ. ಆತನ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಎಷ್ಟು ಜನರಿದ್ದಾರೆನ್ನುವುದರ ಬಗ್ಗೆ ಇನ್ನಷ್ಟು ತನಿಖೆ ನಡೆಯಬೇಕಿದೆ. ಎಂದು ತಿಳಿಸಿದರು.

ಆರೋಪಿಗಳು ಆನ್‌ಲೈನ್‌ನಲ್ಲಿ ಬೆಟ್ಟಿಂಗ್‌ ವ್ಯವಹಾರ ನಡೆಸಿ, ಬೆಟ್ಟಿಂಗ್‌ನಲ್ಲಿ ಕಳೆದುಕೊಂಡ ಮತ್ತು ಸಂಪಾದಿಸಿದ ಹಣವನ್ನು ಆನ್‌ಲೈನ್‌ ಮತ್ತು ಚೆಕ್‌ ಮೂಲಕ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಬಿಗ್‌ಬ್ಯಾಷ್‌ ಲೀಗ್‌, ಇಂಗ್ಲೆಂಡ್‌ ಮತ್ತು ಭಾರತ ನಡುವಿನ ಟ್ವೆಂಟಿ–20 ಟೂರ್ನಿ, ಸೈಯದ್‌ ಮುಸ್ತಾಕ್‌ ಅಲಿ ಟ್ರೋಫಿಯಲ್ಲಿ ನಡೆಸಿರುವ ಬೆಟ್ಟಿಂಗ್‌ ದಂದೆಯಲ್ಲಿ ಈ ಆರೋಪಿಗಳು ಸುಮಾರು ರೂ 50 ಲಕ್ಷದವರೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಬೆಟ್ಟಿಂಗ್‌ ದಂದೆಗೆ ತಂತ್ರಜ್ಞಾನ ಬಳಸಿಕೊಂಡಿರುವುದರಿಂದ ಆರೋಪಿಗಳ ವಿರುದ್ಧ 2000ನೇ ಇಸವಿಯ ಮಾಹಿತಿ ತಂತ್ರಜ್ಞಾನ ಕಾಯ್ದೆ ದುರುಪಯೋಗ ಆರೋಪದ ಪ್ರಕರಣವನ್ನೂ ದಾಖಲಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ತಿಳಿಸಿದ್ದಾರೆ.

ಬಂಧಿತ ರವಿಕುಮಾರ್ ಬಿಜೆಪಿ ಶಾಸಕ ಸಿ.ಟಿ.ರವಿ ಆಪ್ತ?

ನಗರಸಭೆಯ 29ನೇ ವಾರ್ಡ್‌ ಪ್ರತಿನಿಧಿಯಾಗಿರುವ ಸಿ.ಎಸ್‌.ರವಿಕುಮಾರ್‌ ನಗರಸಭೆ ಮಾಜಿ ಸದಸ್ಯ ಶ್ರೀನಿವಾಸ್‌ ಅವರ ಪುತ್ರ. ಈತನ ತಂದೆ ಸಿಪಿಐ ಪಕ್ಷದಿಂದ ರಾಜಕೀಯ ಪ್ರವೇಶಿಸಿದ್ದರು.  ಈತ ಕಟ್ಟಾ ಬಿಜೆಪಿ ಕಾರ್ಯಕರ್ತ. ಶಾಸಕ ಸಿ.ಟಿ.ರವಿ ಅವರಿಗೂ ಆಪ್ತ. ಮೊದಲ ಬಾರಿಗೆ ನಗರಸಭೆಗೆ ಆಯ್ಕೆಯಾಗಿದ್ದ ಈತನಿಗೆ 10 ತಿಂಗಳ ಅವಧಿಗೆ ನಗರಸಭೆ ಉಪಾಧ್ಯಕ್ಷನಾಗಿ ಅಧಿಕಾರ ನಡೆಸುವ ಅವಕಾಶವನ್ನು ಪಕ್ಷ ನೀಡಿತ್ತು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಗರದ ವಿಜಯಪುರದಲ್ಲಿ ನಡೆದ ಗಲಾಟೆಯಲ್ಲಿ ವಿಧಾನ ಪರಿಷತ್‌ ಮಾಜಿ ಸದಸ್ಯೆಯೊಬ್ಬರು ಈತನ ವಿರುದ್ಧ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

 


Spread the love