ಕ್ರೀಡಾಂಗಣಗಳ ಸಮರ್ಪಕ ನಿರ್ವಹಣೆಗೆ ಸಚಿವ ರಮಾನಾಥ ರೈ ಸೂಚನೆ

Spread the love

ಕ್ರೀಡಾಂಗಣಗಳ ಸಮರ್ಪಕ ನಿರ್ವಹಣೆಗೆ ಸಚಿವ ರಮಾನಾಥ ರೈ ಸೂಚನೆ

ಮಂಗಳೂರು:   ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಕ್ರೀಡಾಂಗಣಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಸೂಚಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ಕ್ರೀಡಾಂಗಣ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ರೀಡಾಂಗಣಗಳಲ್ಲಿ ಮೂಲಸೌಕರ್ಯಗಳನ್ನು ಆದ್ಯತೆಯಲ್ಲಿ ಒದಗಿಸಬೇಕು. ಕ್ರೀಡಾಪಟುಗಳ ಅಭ್ಯಾಸಕ್ಕೆ ಯಾವುದೇ ತೊಂದರೆಯಾಗದಂತೆ ಗುಣಮಟ್ಟ ಕಾಪಾಡಬೇಕು. ನಗರದ ಮಂಗಳಾ ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣದಲ್ಲಿ ಯಾವುದೇ ಲೋಪಗಳಾಗದಂತೆ ನಿರ್ವಹಣೆ ಕಾಪಾಡಿಕೊಳ್ಳಲು ಸಚಿವರು ತಿಳಿಸಿದರು.

ಮಂಗಳೂರು ಎಮ್ಮೆಕೆರೆಯಲ್ಲಿ ಅಂತಾರಾಷ್ಟ್ರೀಯ ಈಜುಕೊಳ ನಿರ್ಮಾಣಕ್ಕೆ ಈಗಾಗಲೇ ರಾಜ್ಯ ಸರಕಾರ 5 ಕೋಟಿ ಬಿಡುಗಡೆ ಮಾಡಿದೆ. ಈ ಬಗ್ಗೆ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಅನುಷ್ಠಾನಗೊಳಿಸಲು ಅವರು ತಿಳಿಸಿದರು.

 ಇದೇ ಸಂದರ್ಭದಲ್ಲಿ ಸಭೆಯಲ್ಲಿ ವಿವಿಧ ಕ್ರೀಡಾ ಯೋಜನೆಗಳಿಗೆ ಅನುಮತಿ ನೀಡಲಾಯಿತು. ಜಿಲ್ಲಾ ಕ್ರೀಡಾಂಗಣ ಸಮಿತಿಯಿಂದ ಮಂಗಳಾ ಕ್ರೀಡಾಂಗಣದ ಸುತ್ತ ಚೈನ್ ಲಿಂಕ್ ಆವರಣ-25 ಲಕ್ಷ ರೂ., ಮಂಗಳಾ ಕ್ರೀಡಾಂಗಣದಲ್ಲಿ ಮಹಾನಗರಪಾಲಿಕೆ ವತಿಯಿಂದ ಹೈಮಾಸ್ಟ್ ದೀಪ ಅಳವಡಿಕೆ -16.25 ಲಕ್ಷ ರೂ., ಸೌರಶಕ್ತಿ ವ್ಯವಸ್ಥೆ,  ಕರಾವಳಿ ಮೈದಾನದಲ್ಲಿ ಕಬಡ್ಡಿ ಪಿಚ್ ಅಭಿವೃದ್ಧಿ, ಮಂಗಳಾ ಕ್ರೀಡಾಂಗಣ ಮತ್ತು ಒಳಾಂಗಣ ಕ್ರೀಡಾಂಗಣದಲ್ಲಿ ಜಲ ಮರುಪೂರಣ ವ್ಯವಸ್ಥೆ, ಒಳಾಂಗಣ ಕ್ರೀಡಾಂಗಣದ ಆವರಣದಲ್ಲಿ ಇಂಟರ್‍ಲಾಕ್ ಅಳವಡಿಕೆಗೆ ಸಭೆಯಲ್ಲಿ ನಿರ್ಧರಿಸಲಾಯಿತು. ನಗರದ ಫುಟ್‍ಬಾಲ್ ಕ್ರೀಡಾಂಗಣದ ಅಭಿವೃದ್ಧಿಗೆ ಗುತ್ತಿಗೆದಾರರು ಹೆಚ್ಚುವರಿ ಮೊತ್ತ ನಮೂದಿಸಿರುವುದರಿಂದ ಈ ಬಗ್ಗೆ ಸರಕಾರದ ಅನುಮೋದನೆಗೆ ಕಳುಹಿಸಲಾಗಿದೆ.

ಮಂಗಳೂರಿನ ಅಂತಾರಾಷ್ಟ್ರೀಯ ಪವರ್ ಲಿಫ್ಟರ್ ಗೀತಾ ಬಾಯಿ ಅವರನ್ನು ಕ್ರೀಡಾ ಇಲಾಖೆಯಲ್ಲಿ ತರಬೇತುದಾರರನ್ನಾಗಿ ನೇಮಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಶಾಸಕ ಜೆ.ಆರ್.ಲೋಬೋ, ಮೇಯರ್ ಕವಿತಾ ಸನಿಲ್, ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್, ಅಪರ ಜಿಲ್ಲಾಧಿಕಾರಿ ಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು,  ಕ್ರೀಡಾಂಗಣ ಸಮಿತಿ ಸದಸ್ಯರು, ಕ್ರೀಡಾ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.


Spread the love