ಕ್ಷತ್ರಿಯ ಪೀಠಕ್ಕೆ ಭರತರಾಜೇ ಅರಸ್; ಉಡುಪಿಯಲ್ಲಿ ವಿಧಿವಿಧಾನ, ಸನ್ಯಾಸಾಶ್ರಮ

Spread the love

ಕ್ಷತ್ರಿಯ ಪೀಠಕ್ಕೆ ಭರತರಾಜೇ ಅರಸ್; ಉಡುಪಿಯಲ್ಲಿ ವಿಧಿವಿಧಾನ, ಸನ್ಯಾಸಾಶ್ರಮ

ಉಡುಪಿ: ಎಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಶನ್ ಎಂಜಿನಿಯರಿಂಗ್ ಪದವೀಧರರಾದ, ಭಾರತೀಯ ಸಂಸ್ಕøತಿ, ಧಾರ್ಮಿಕ ವಿಷಯದಲ್ಲಿಯೂ ಸಾಕಷ್ಟು ಜ್ಞಾನ ಗಳಿಸಿದ/ಗಳಿಸುತ್ತಿರುವ ಭರತರಾಜೇ ಅರಸು ಅವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ಐತಿಹಾಸಿಕವಾಗಿ ಐದನೇ ಬಾರಿಗೆ ಪರ್ಯಾಯ ಪೀಠವನ್ನು ಅಲಂಕರಿಸಿರುವ ಶ್ರೀ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಶ್ರೀ ರಾಜರಾಜೇಶ್ವರ ಸಂಸ್ಥಾನದ ಕ್ಷತ್ರಿಯ ಪೀಠಕ್ಕೆ ಪ್ರಥಮ ಪೀಠಾಧಿಪತಿಯಾಗಿ ನಿಯೋಜನೆಗೊಳ್ಳುತ್ತಿದ್ದಾರೆ.

bhrath-raje-aras

ಚಕ್ರವರ್ತಿಗಳಲ್ಲಿ ನಿಯಾಮಕನಾಗಿರುವ ಭಗವಂತನ ರಾಜರಾಜೇಶ್ವರ ರೂಪದ ಹೆಸರನ್ನು ಸಂಸ್ಥಾನಕ್ಕೆ ಇರಿಸಲಾಗಿದೆ.

ಮೂಲತಃ ಚಿಕ್ಕಮಗಳೂರಿನವರಾದ ಭರತರಾಜೇ ಅರಸು ಅವರು ಮಂಗಳೂರಿನಲ್ಲಿ ಹೇಮರಾಜೇ ಅರಸು ಮತ್ತು ಎಸ್.ಪಿ. ಜ್ಯೋತಿ ದಂಪತಿಗೆ 1982ರಲ್ಲಿ ಜನಿಸಿದರು. ಹೇಮರಾಜೇ ಅರಸು ಅವರು ಮಂಗಳೂರು ಎಂಸಿಎಫ್‍ನಲ್ಲಿ ಉದ್ಯೋಗಿ. ಜ್ಯೋತಿ ಅವರು ಆರೋಗ್ಯ ಇಲಾಖೆಯ ನಿವೃತ್ತ ಅಧಿಕಾರಿಗಳು. ಭರತರಾಜೇ ಅವರ ತಮ್ಮ ಪ್ರಿಯದರ್ಶನರಾಜೇ ಅರಸು ಅವರೂ ಎಂಸಿಎಫ್‍ನಲ್ಲಿ ಉದ್ಯೋಗಿ. ಅವರು ವಿವಾಹಿತರು. ಮಂಗಳೂರು ಕುಂಜತ್ತಬೈಲಿನಲ್ಲಿ ಎಂಸಿಎಫ್ ಸಿಬಂದಿಗಳ ವಸತಿ ಗೃಹ ಬಳಿ ಪ್ರಾಥಮಿಕ ಪೂರ್ವ ಶಿಕ್ಷಣ, ಪಿಯುಸಿ ವರೆಗೆ ಮಂಗಳೂರಿನ ಸೈಂಟ್ ಅಲೋಶಿಯಸ್ ಪ.ಪೂ. ಕಾಲೇಜಿನಲ್ಲಿ ಶಿಕ್ಷಣ ಪಡೆದ ಭರತರಾಜೇ ಅರಸು ಅವರು ಮಣಿಪಾಲ ಎಂಐಟಿಯಲ್ಲಿ ಡೀಮ್ಡ್ ಮಾಹೆ ವಿ.ವಿ.ಯ ಪ್ರಥಮ ತಂಡದ ಪದವೀಧರರಾಗಿ 2000ರಲ್ಲಿ ಬಿಇ ಶಿಕ್ಷಣ ಪಡೆದರು. 34ರ ಹರೆಯದ ಭರತರಾಜೇ ಅವರು ಅವಿವಾಹಿತರಾಗಿದ್ದು ಸನ್ಯಾಸಾಶ್ರಮ ಸ್ವೀಕರಿಸಲಿದ್ದಾರೆ.

ಉತ್ತರಭಾರತದ ಮಥುರಾದ ಗೋವರ್ಧನದಲ್ಲಿ ಶ್ರೀಮತ್ ಭಾಗವತ ವಿದ್ಯಾಪೀಠದಲ್ಲಿ ಶಾಸ್ತ್ರಾಧ್ಯಯನ ನಡೆಸಿದ ಅವರು ಇಸ್ಕಾನ್‍ನಲ್ಲಿ ಎಂಟು ವರ್ಷ ಸೇವೆ ಮಾಡಿದ್ದಾರೆ. ದೇಶದ ವಿವಿಧೆಡೆ ಸತ್ಯದರ್ಶನಕ್ಕಾಗಿ ಸಂಚರಿಸಿರುವ ಅವರು ಇದೀಗ ಪೇಜಾವರ ಶ್ರೀಗಳಿಂದ ಸನ್ಯಾಸದೀಕ್ಷೆಯನ್ನು ಪಡೆಯಲಿದ್ದಾರೆ.

ಗೋಸಂರಕ್ಷಣೆಯಲ್ಲಿ ವಿಶೇಷ ಆಸಕ್ತಿ ಇರುವ ಅರಸು ಅವರು ಕಳೆದ ವರ್ಷ ಉಡುಪಿಯಲ್ಲಿ ನಡೆದ ಗೋಸಮ್ಮೇಳನದ ಸಂಚಾಲಕರಾಗಿದ್ದರು. ಅನೇಕ ವರ್ಷಗಳಿಂದ ಉಡುಪಿ ಮತ್ತು ಪೇಜಾವರ ಶ್ರೀಗಳ ನಿಕಟ ಸಂಪರ್ಕವಿದೆ. ತಮಿಳುನಾಡಿನ ಮಧುರೆಯಲ್ಲಿ ಗೋವುಗಳ ಉತ್ಪನ್ನದ ಮೂಲಕ ಔಷಧ ತಯಾರಿಸುವ ಘಟಕವನ್ನು ಸ್ಥಾಪಿಸಿದರು. ಪ್ರಸ್ತುತ ಉಡುಪಿಯಲ್ಲಿ ಶಾಸ್ತ್ರಾಧ್ಯಯನ ನಡೆಸುತ್ತಿದ್ದು ಸನ್ಯಾಸಾಶ್ರಮದ ಬಳಿಕ ಗೋಸಂರಕ್ಷಣೆ, ಶಾಸ್ತ್ರಾಧ್ಯಯನ, ತತ್ತ್ವಪ್ರಸಾರದಲ್ಲಿ ತೊಡಗಿಕೊಳ್ಳಲಿದ್ದಾರೆ.

ಜು. 9ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಜು. 11ರ ಬೆಳಗ್ಗೆ ಸನ್ಯಾಸಾಶ್ರಮ ಸ್ವೀಕಾರ, ಸಂಜೆ ಸಾರ್ವಜನಿಕ ಸಭೆ ಶ್ರೀಕೃಷ್ಣ ಮಠದಲ್ಲಿ ನಡೆಯಲಿದೆ.


Spread the love