ಗಾಂಜಾ ಸೇವಿಸುತ್ತಿದ್ದ 7 ಯುವಕರ ಸೆರೆ

Spread the love

ಗಾಂಜಾ ಸೇವಿಸುತ್ತಿದ್ದ 7 ಯುವಕರ ಸೆರೆ

ಮಂಗಳೂರು: ಮಂಗಳೂರು ನಗರದಲ್ಲಿ ಗಾಂಜಾ ಸೇವನೆ ಮಾಡುವ ಯುವಕರನ್ನು ಪತ್ತೆ ಹಚ್ಚಿ ಕ್ರಮ ಗೊಳ್ಳುವ ಸಲುವಾಗಿ ಮಂಗಳೂರು ನಗರ ಪೊಲೀಸರು ಕೈಗೊಳ್ಳುತ್ತಿರುವ ವಿಶೇಷ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ 7 ಮಂದಿ ಯುವಕರನ್ನು ವಶಕ್ಕೆ ಪಡೆದುಕೊಂಡು ಅವರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತರನ್ನು ಅಶೋಕನಗರ ನಿವಾಸಿ ಆಲ್ವಿನ್ ಕ್ಲಿಂಟನ್ ಡಿ’ಸೋಜಾ (22), ಬಿಕರ್ನಕಟ್ಟೆ ನಿವಾಸಿ ಅಜಯ್ ಸೆಬಾಸ್ಟಿನ್ ಲೋಬೊ (24), ಬಿಕರ್ನಕಟ್ಟೆ ನಿವಾಸಿ ಜೋಯೆಲ್ ಫೆರ್ನಾಂಡಿಸ್ (27), ಪಡೀಲ್ ನಿವಾಸಿ ಆದಿತ್ಯ (18), ದೇವರಾಜ್ (21), ಮೂಡುಶೆಡ್ಡೆ ನಿವಾಸಿ ಅಕ್ಷಯ್ ಸಾಲಿಯಾನ್ (21), ಹಾಗೂ ಅಮೋಘ ಹೆಗ್ಡೆ (27) ಎಂದು ಗುರುತಿಸಲಾಗಿದೆ.

ಬಂಧಿತರು ಮಂಗಳವಾರ ಮಂಗಳೂರು ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಜ್ಜೋಡಿ 2 ನೇ ಕ್ರಾಸ್ ರಸ್ತೆಯ ಇನ್ ಫೆಂಟ್ ಮೇರಿ ಚರ್ಚ್ ಬಳಿ ಜನವಾಸ ವಿಲ್ಲದ ಖಾಲಿ ಜಾಗದಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಗಾಂಜಾ ಸೇವನೆ ಮಾಡುತ್ತಿದ್ದ ವೇಳೆ ವಶಕ್ಕೆ ಪಡೆದುಕೊಳ್ಳಲಾಗಿದೆ. ಯುವಕರೆಲ್ಲರೂ ಮಂಗಳೂರು ನಗರದ ವಿವಿಧ ಪ್ರದೇಶದಲ್ಲಿ ವಾಸ್ತವ್ಯವಿದ್ದು, ಗಾಂಜಾ ಸೇವನೆಯ ಚಟವನ್ನು ಹೊಂದಿದ ಇವರು, ಗಾಂಜಾ ಸೇವನೆ ಮಾಡುವ ಉದ್ದೇಶದಿಂದಲೇ ಬಜ್ಜೋಡಿ ಬಳಿಯ ಖಾಲಿ ಜಾಗದಲ್ಲಿ ಸೇರಿ ಗಾಂಜಾ ಸೇವನೆ ಮಾಡುತ್ತಿದ್ದರು.

ಗಾಂಜಾ ಸೇವನೆ ಮಾಡಿದ ಯುವಕರ ತಂದೆ- ತಾಯಿ, ಪಾಲನೆ ಪೋಷಣೆ ಮಾಡಿದವರನ್ನು ಸಿಸಿಬಿ ಕಛೇರಿಗೆ ಕರೆಯಿಸಿಕೊಂಡು ಯುವಕರು ಗಾಂಜಾ ಸೇವನೆ ಮಾಡಿದ ಬಗ್ಗೆ ತಿಳಿಸಿ ಅವರಿಗೆ ಯುವಕರ ಮೇಲೆ ನಿಗಾಯಿರಿಸುವಂತೆ ಸೂಚಿಸಲಾಗಿದೆ. ಅಲ್ಲದೇ ಈ ಯುವಕರ ಪೈಕಿ ಒಬ್ಬಾತನು ವಿದ್ಯಾಸಂಸ್ಥೆಯೊಂದರಲ್ಲಿ ಅಂತಿಮ ವರ್ಷ ಪದವಿಯನ್ನು ವ್ಯಾಸಂಗ ಮಾಡುತ್ತಿದ್ದು, ಈತನು ವಿದ್ಯಾಭ್ಯಾಸ ಮಾಡುವ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರನ್ನು ಕರೆಯಿಸಿ ಅವರಿಗೆ ಮಾಹಿತಿಯನ್ನು ಕೂಡಾ ನೀಡಲಾಗಿದೆ.. ಗಾಂಜಾ ಸೇವನೆ ಮಾಡಿದ 7 ಯುವಕರನ್ನು ಮುಂದಿನ ಕ್ರಮದ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿರುತ್ತದೆ.

ಪೊಲೀಸ್ ಕಮೀಷನರ್ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಉಮಾ ಪ್ರಶಾಂತ್ ರವರ ಮಾರ್ಗದರ್ಶನದಲ್ಲಿ ಈ ವಿಶೇಷ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಪತ್ತೆಕಾರ್ಯದಲ್ಲಿ ಭಾಗವಹಿಸಿದ್ದರು.


Spread the love