ಗುಜರಾತಿನ ಬ್ಯಾಂಕಿನೊಂದಿಗೆ ಲಾಭದ ವಿಜಯ್ ಬ್ಯಾಂಕ್ ವಿಲೀನ ನಳಿನ್ ಸಾಧನೆ – ಸಿ ಎಮ್ ಇಬ್ರಾಹಿಂ

Spread the love

ಗುಜರಾತಿನ ಬ್ಯಾಂಕಿನೊಂದಿಗೆ ಲಾಭದ ವಿಜಯ್ ಬ್ಯಾಂಕ್ ವಿಲೀನ ನಳಿನ್ ಸಾಧನೆ – ಸಿ ಎಮ್ ಇಬ್ರಾಹಿಂ

ಮಂಗಳೂರು: ಕಾಂಗ್ರೆಸ್ ಪಕ್ಷ ಕರಾವಳಿಯಲ್ಲಿ ಸ್ಥಾಪನೆಗೊಂಡ ಬ್ಯಾಂಕುಗಳನ್ನು ರಾಷ್ಟ್ರೀಕರಣಗೊಳಿಸಿ ಜನರ ಉಪಯೋಗಕ್ಕೆ ದಾರಿ ಮಾಡಿಕೊಟ್ಟರೆ ದಕ ಜಿಲ್ಲೆಯಿಂದ 2 ಬಾರಿ ಸಂಸದರಾಗಿ ಆಯ್ಕೆಯಾದ ನಳಿನ್ ಕುಮಾರ್ ಕಟೀಲ್ ಕರಾವಳಿಯಲ್ಲಿ ಸುಂದರ್ ರಾಮ್ ಶೆಟ್ಟಿ ಮತ್ತು ಎ ಬಿ ಶೆಟ್ಟಿ ಸ್ಥಾಪಿಸಿದ ವಿಜಯ ಬ್ಯಾಂಕನ್ನು ಗುಜರಾತಿಗೆ ಮಾರಿದ್ದಾರೆ. ಇದು ಕರಾವಳಿಗರಿಗೆ ನಳಿನ್ ನೀಡಿದ ದೊಡ್ಡ ಕೊಡುಗೆ ಎಂದು ಕಾಂಗ್ರೆಸ್ ನಾಯಕ ವಿಧಾನಪರಿಷತ್ ಸದಸ್ಯ ಸಿ ಎಮ್ ಇಬ್ರಾಹಿಂ ಹೇಳಿದರು.

ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, “20 ವರ್ಷಗಳಲ್ಲಿ ಈ ರೀತಿಯ ಚುನಾವಣೆ ನಡೆದಿಲ್ಲ. ಭವಿಷ್ಯದಲ್ಲಿ ಈ ರೀತಿಯ ಚುನಾವಣೆ ಇರುವುದಿಲ್ಲ ಮತ್ತು ಏಕೆಂದರೆ ಭವಿಷ್ಯದ ಚುನಾವಣೆಗಳು ಬೇಕೇ ಎಂದು ಮುಖ್ಯ ವಿಷಯವಾಗಿದೆ. ಎಲ್ಲರೂ ಮೋದಿಗೆ ಓಟು ಕೊಡಿ ಎನ್ನುವುದು ವಿಪರ್ಯಾಸ. ರಾಜ್ಯದಲ್ಲಿ ಹಿಂದಿನ ಸಿದ್ದರಾಮಯ್ಯ ಸರಕಾರ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ 165 ಆಶ್ವಾಸನೆಗಳನ್ನು ಈಡೇರಿಸಿದೆ. ಆದರೆ ಮೋದಿ ಸರಕಾರ ಆಶ್ವಾಸನೆ ನೀಡಿದ್ದೇ ಹೋರತು ಏನು ಮಾಡಿಲ್ಲ.

2014ರ ಚುನಾವಣೆ ಸಂದರ್ಭ ಮೋದಿ ಈ ದೇಶದ ಜನತೆಗೆ ಸುಳ್ಳು ಹೇಳಿ ಮೋಸ ಮಾಡಿದ್ದಾರೆ. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಡಾಲರ್ ಮೌಲ್ಯ ಏರಿಕೆಯಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿಯ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನತೆ ರೋಸಿ ಹೋಗಿದ್ದು, ಈ ಬಾರಿ ಜನತೆ ಮೋದಿ ಆಡಳಿತ ವಿರುದ್ಧ ಮತ ಚಲಾಯಿಸುವುದು ನಿಶ್ಚಿತ ಎಂದರು.

ಜಿಲ್ಲೆಯು ಜಗತ್ತಿನಲ್ಲಿ ಹೆಸರುವಾಸಿಯಾಗಿದೆ. ಹಿಂದೂ ಮತ್ತು ಮುಸ್ಲಿಮರನ್ನು ಈ ಜಿಲ್ಲೆಯಲ್ಲಿ ಸೌಹಾರ್ದದಿಂದ ಬದುಕಲು ಬಿಡಿ ಎಂದು ಮನವಿ ಮಾಡಿದರು.

ಮೋದಿ ಟೀಮ್ ಅಡಳಿತಕ್ಕೆ ಬಂದ ಬಳಿಕ ಬಿಜೆಪಿಯನ್ನು ಕಟ್ಟಿದ್ದ ಆಡ್ವಾಣಿ, ಮುರಳಿ ಮನೋಹರ ಜೋಷಿ, ಯಶವಂತ್ ಸಿನ್ಹಾ ಅವರಂತಹ ನಾಯಕರು ಮೂಲೆಗೆ ಸರಿದಿದ್ದಾರೆ. ಮೋದಿಯವರು ಹುಟ್ಟುವ ಮೊದಲೇ ಈ ದೇಶ ಹಲವು ಸವಾಲುಗಳನ್ನು ಎದುರಿಸಿ ಬಲಿಷ್ಠ ದೇಶ ಹಿಂದೂಸ್ಥಾನವಾಗಿತ್ತು. ನಾಲ್ಕು ಯುದ್ಧಗಳು ಆಗಿತ್ತು, ಇಂದಿರಾಗಾಂಧಿಯಿದ್ದಾಗ ಯುದ್ಧವಾಗಿ ಪಾಕಿಸ್ತಾನ ಎರಡು ತುಂಡುಗಳಾಗಿತ್ತು. ಮನಮೋಹನ್ ಸಿಂಗ್ ಆಡಳಿತವಿರುವಾಗ 12 ಸರ್ಜಿಕಲ್ ಸ್ಟ್ರೈಕ್ ಆದರೂ ಯಾವುದೇ ಪ್ರಚಾರ ಪಡೆದಿರಲಿಲ್ಲ. ಮೋದಿ ಭಾವನಾತ್ಮಕ ವಿಚಾರದಲ್ಲಿ ಮಾತನಾಡುತ್ತಾ ಮತಗಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ಕುಮಾರ್, ಸಚಿವೆ ಜಯಮಾಲಾ, ಕಾಂಗ್ರೆಸ್ ಮುಖಂಡರಾದ ಐವನ್ ಡಿಸೋಜ, ವಿಶ್ವಾಸ್ ಕುಮಾರ್ ದಾಸ್, ಮಮತಾ ಗಟ್ಟಿ, ಶಾಲೆಟ್ ಪಿಂಟೋ, ಸಲೀಂ, ಶಕೀಲ್ ಉಪಸ್ಥಿತರಿದ್ದರು.


Spread the love