ಗುಜರಾತ್ ಫಲಿತಾಂಶ ದೇಶದ ಜನತೆ ಬದಲಾವಣೆ ಬಯಸುವ ಸೂಚನೆ  – ಉಡುಪಿ ಜಿಲ್ಲಾ ಕಾಂಗ್ರೆಸ್

Spread the love

ಗುಜರಾತ್ ಫಲಿತಾಂಶ ದೇಶದ ಜನತೆ ಬದಲಾವಣೆ ಬಯಸುವ ಸೂಚನೆ  – ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ: ಕಳೆದ 2012ರ ಗುಜರಾತ್ ಚುನಾವಣಾ ಫಲಿತಾಂಶಕ್ಕೆ ಹೋಲಿಸಿದಾಗ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ವರ್ಚಸ್ಸನ್ನು ವೃದ್ಧಿಸಿಕೊಂಡಿರುವುದು ಕಂಡು ಬರುತ್ತದೆ. ಚುನಾವಣೋತ್ತರ ಸಮೀಕ್ಷೆಗಳನ್ನು ಬುಡಮೇಲೆ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ನಿಕಟವಾಗಿ ಬಂದಿರುವುದು ಗುಜರಾತಿನ ಜನತೆ ಕಾಂಗ್ರೆಸ್ ಪಕ್ಷದ ಪರ ಒಲವನ್ನು ವ್ಯಕ್ತಪಡಿಸಿರುವುದನ್ನು ಬಿಂಬಿಸುತ್ತದೆ.

ಪ್ರಧಾನಿಗಳು ಈ ಬಾರಿಯ ಚುನಾವಣೆಯಲ್ಲಿ ಅಭಿವೃದ್ಧಿಯ ವಿಷಯಗಳನ್ನು ಮುಂದಿಟ್ಟುಕೊಂಡು ಮತ ಯಾಚಿಸದೆ ವ್ಯಕ್ತಗತ ನಿಂದನೆ ಹಾಗೂ ಭಾವನಾತ್ಮಕ ವಿಷಯಗಳನ್ನು ಸಮರ್ಥವಾಗಿ ಬಳಸಿಕೊಂಡಿರುವುದು ಮತ್ತು ಅದನ್ನು ನಿಗ್ರಹಿಸುವಲ್ಲಿ ಕಾಂಗ್ರೆಸ್ ಎಡವಿರುವುದು ಪಕ್ಷದ ಹಿನ್ನಡೆಗೆ ಕಾರಣವಾಗಿದೆ. 2004ರಿಂದ ಗುಜರಾತಿನ ಜನತೆಯ ತಲಾ ಆದಾಯ ಶೇ.1 ರಿಂದ ಏರಿಕೆ ಕಂಡಿಲ್ಲ. ಹಾಗಾಗಿ ಈ ಬಾರಿ ಚುನಾವಣೆಯು ಗುಜರಾತ್ ಮಾದರಿಯ ಅಭಿವೃದ್ಧಿಯ ಘೋಷಣೆಗೆ ಹಿನ್ನಡೆ ಕಂಡಿದೆ. ಮಾಜಿ ಉಪರಾಷ್ಟ್ರಪತಿ ಮತ್ತು ಮಾಜಿ ಪ್ರಧಾನಿಗಳು ಪಾಕ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯನ್ನೇ ಪ್ರಧಾನಿಯವರು ಪಾಕ್‍ನೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಲಿಂಕ್ ಮಾಡಿ ಜನತೆಗೆ ತಪ್ಪು ಸಂದೇಶ ನೀಡುವ ಮೂಲಕ ಜನತೆಯ ಹಾದಿ ತಪ್ಪಿಸಿದರು. ಅದರೊಂದಿಗೆ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯನ್ನು ಜಾತಿ ರಾಜಕೀಯಕ್ಕೆ ಬಳಸಿರುವುದು ಗುಜರಾತ್‍ನಲ್ಲಿ ಬಿಜೆಪಿ ಮೇಲುಗೈ ಸಾಧಿಸಲು ಕಾರಣವಾಗಿದೆ.

ಸುಮಾರು 6 ಲಕ್ಷ ಬಿಜೆಪಿ ಮತಗಳು ನೋಟಾ ಮತವಾಗಿ ಬಿದ್ದಿದ್ದು ಆ ಮತಗಳನ್ನು ಪಕ್ಷದ ಮತಗಳಾಗಿ ಪರಿವರ್ತಿಸಲು ಕಾಂಗ್ರೆಸ್ ವಿಫಲವಾಗಿರುವುದು ಫಲಿತಾಂಶದ ಏರುಪೇರಿಗೆ ಕಾರಣವೆನ್ನಬೇಕು. ಬಿಜೆಪಿಯವರು ಇತ್ತೀಚಿನ ದಿನಗಳಲ್ಲಿ ರಾಹುಲ್ ಅವರನ್ನು ನಿಂದಿಸಿ ಎಷ್ಟು ಗೇಲಿ ಮಾಡಿದರೂ ರಾಹುಲ್‍ರವರು ದೇಶದ ಮುಂದಿನ ಭವಿಷ್ಯದ ನಾಯಕ ಎಂಬುದನ್ನು ಈ ಚುನಾವಣೆ ತೋರಿಸಿಕೊಟ್ಟಿದೆ ಹಾಗೂ ದೇಶದ ಜನತೆ ಬದಲಾವಣೆ ಬಯಸುವತ್ತ ಸಾಗುತ್ತಿದ್ದಾರೆ ಎನ್ನುವ ಸೂಚನೆ ನೀಡಿದ್ದಾರೆ.

ಒಂದು ರಾಜ್ಯದ ಚುನಾವಣೆಯಲ್ಲಿ ಪ್ರಧಾನಿಗಳು 70ಕ್ಕೂ ಹೆಚ್ಚು ಬಾರಿ ರ್ಯಾಲಿಯಲ್ಲಿ ಭಾಗವಹಸಿರುವದನ್ನು ಕಂಡಾಗ ಬಿಜೆಪಿ ಈ ಚುನಾವಣೆಯಲ್ಲಿ ಹೆಚ್ಚಿನ ಆತಂಕಕ್ಕೆ ಒಳಗಾಗಿರುವುದಕ್ಕೆ ಸಾಕ್ಷಿ ಆದರೆ ತನ್ನ ಎದುರಾಳಿ ಕಾಂಗ್ರೆಸ್‍ಗೆ ಅಸ್ತಿತ್ವವೇ ಇಲ್ಲ ಎಂದು ಬಿಂಬಿಸಲು ಹೊರಟ ಬಿಜೆಪಿಗೆ ಈ ಫಲಿತಾಂಶ ಹಿನ್ನಡೆ ಒದಗಿಸಿದೆ. ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಮುಖಂಡತ್ವದಲ್ಲಿ ಕಾಂಗ್ರೆಸ್ ಪಕ್ಷ ಪುನಶ್ಚೇತನಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದು ಈ ಫಲಿತಾಂಶ ತೋರಿಸಿಕೊಟ್ಟಿದೆ ಎಂದು ಕಾಂಗ್ರೆಸ್ ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಗುಜರಾತ್ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.


Spread the love