ಚಿಕ್ಕಪ್ಪನ ಪೆಟ್ರೋಲ್ ಪಂಪ್ ಗೆ ದಾಳಿ ಮಾಡಿದ ಆಹಾರ ಸಚಿವರು!

Spread the love

ಚಿಕ್ಕಪ್ಪನ ಪೆಟ್ರೋಲ್ ಪಂಪ್ ಗೆ ದಾಳಿ ಮಾಡಿದ ಆಹಾರ ಸಚಿವರು!

ವಿಟ್ಲ: ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರಾದ ಯು.ಟಿ. ಖಾದರ್ ಅವರು ಪೆಟ್ರೋಲ್ ಪಂಪ್  ಒಂದಕ್ಕೆ ಶನಿವಾರ ದಿಢೀರ್ ದಾಳಿ ನಡೆಸಿ ಪೆಟ್ರೋಲಿಯಂ ಅಳತೆಯನ್ನು ಪರಿಶೀಲಿಸಿದರು. ಅದೂ ವಿಟ್ಲ ಸಮೀಪದ ಗ್ರಾಮೀಣ ಪ್ರದೇಶವಾದ ಪುಣಚ ಪರಿಯಾಲ್ತಡ್ಕದಲ್ಲಿ ಇತ್ತೀಚೆಗೆ ಕಾರ್ಯಾಚರಣೆ ಪ್ರಾರಂಭಿಸಿದ ಹಿಂದೂಸ್ತಾನ್ ಪೆಟ್ರೋಲಿಯಂ ನ ವಾಹನ ತೈಲ ವಿತರಣಾ ಕೇಂದ್ರ. ವಿಶೇಷವೆಂದರೆ ಆ ಪೆಟ್ರೋಲ್ ಪಂಪು ಬೇರ್ಯಾರದ್ದೋ ಅಲ್ಲ. ಸ್ವತಃ ಆಹಾರ ಸಚಿವರ ತಂದೆ, ಮಾಜಿ ಶಾಸಕ ದಿವಂಗತ ಯು.ಟಿ. ಫರೀದ್ ಆವರ ಸ್ವಂತ ತಮ್ಮ ಯು.ಟಿ. ಮೂಸಕುಂಞಿ ಮತ್ತು ಅವರ ಮಕ್ಕಳದ್ದು. ಅರ್ಥಾತ್ ಯು.ಟಿ. ಖಾದರ್ ಚಿಕ್ಕಪ್ಪ ನವರ ಪೆಟ್ರೋಲ್ ಬಂಕ್. ಯು.ಟಿ. ಮೂಸಕುಂಞಿ ಅವರ ಪುತ್ರ ಯು.ಟಿ. ಇರ್ಶಾದ್ ಪಂಪನ್ನು ಮುನ್ನಡೆಸುತ್ತಿದ್ದಾರೆ.

ವಿಟ್ಲದ ಪುಣಚ ಸಮೀಪ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಆಹಾರ ಸಚಿವರಾದ ಯು.ಟಿ. ಖಾದರ್ ತನ್ನ ಸಂಬಂಧಿಕರಿಗೆ ಹಾಗೂ ಇತರ ಯಾರಿಗೂ ತಿಳಿಸದೆ ಪುಣಚ ಪರಿಯಾಲ್ತಡ್ಕ ಪೆಟ್ರೋಲ್ ಪಂಪಿಗೆ ಕಾರು ತಿರುಗಿಸುವಂತೆ ಅನಿರೀಕ್ಷಿತವೆಂಬಂತೆ ಚಾಲಕನ ಬಳಿ ಹೇಳಿದರು. ಪಂಪಿನ ಸಿಬ್ಬಂದಿಗೆ 5 ಲೀಟರ್ ಪ್ಲಾಸ್ಟಿಕ್ ಕ್ಯಾನ್ ಗೆ ಡೀಸೆಲ್ ತುಂಬಿಸಲು ಸೂಚಿಸಿದರು. ಸಚಿವರ ಅನಿರೀಕ್ಷಿತ ಆದೇಶಕ್ಕೆ ವಿಚಲಿತರಾದ ಪಂಪು ಸಿಬ್ಬಂದಿ ಕ್ಯಾನ್ ಗೆ ಡೀಸೆಲ್ ತುಂಬಿಸಿದರು. 5 ಲೀಟರ್ ತುಂಬಿದ ತಕ್ಷಣ ಅಳತೆಯನ್ನು ಪರಿಶೀಲಿಸಿದ ಸಚಿವರು ಅಳತೆ ಸರಿಯಾಗಿರುವುದನ್ನು ಮನಗಂಡು ತೃಪ್ತಿಪಟ್ಟರು ಮತ್ತು ಪಂಪಿನ ನ್ಯಾಯಯುತ ವ್ಯವಹಾರವನ್ನು ಶ್ಲಾಘಿಸಿದರು.

ಅಳತೆಯಲ್ಲಿ ನ್ಯಾಯ ಮತ್ತು ಮೌಲ್ಯದಲ್ಲಿ ಪಾರದರ್ಶಕತೆ, ವ್ಯಾಪಾರದಲ್ಲಿ ದಕ್ಷತೆ ಇದ್ದರೆ ಪೆಟ್ರೋಲ್ ಪಂಪನ್ನು ಸಾರ್ವಜನಿಕರು ಹುಡುಕಿಕೊಂಡು ಬರುತ್ತಾರೆ. ಸದಾ ಮೌಲ್ಯ ಮತ್ತು ನ್ಯಾಯಯುತವಾಗಿ ಕಾರ್ಯಾಚರಿಸಿ ಎಂದು ಪೆಟ್ರೋಲ್ ಪಂಪು ನಿರ್ವಾಹಕರಿಗೆ ಆಹಾರ ಸಚಿವರು ಮನವಿ ಮಾಡಿದರು. ಸಚಿವರ ಈ ದಿಢೀರ್ ಭೇಟಿ ಮತ್ತು ಪರಿಶೀಲನೆಯನ್ನರಿತ ಸಾರ್ವಜನಿಕರು ಪುಣಚ ಪರಿಯಾಲ್ತಡ್ಕದ ಪೆಟ್ರೋಲ್ ಪಂಪಿನಲ್ಲಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿ ಸಚಿವರ ಕಾರ್ಯವೈಖರಿಯನ್ನು ವೀಕ್ಷಿಸಿದರು.


Spread the love