ಚುನಾವಣಾ ಸಮಯದಲ್ಲಿ ಆಯುಷ್ಮಾನ್ ಭಾರತ ಕಾರ್ಡ್ ವಿತರಣೆ ನೀತಿ ಸಂಹಿತೆಯ ಉಲ್ಲಂಘನೆ – ಅನ್ಸಾರ್ ಅಹ್ಮದ್

Spread the love

ಚುನಾವಣಾ ಸಮಯದಲ್ಲಿ ಆಯುಷ್ಮಾನ್ ಭಾರತ ಕಾರ್ಡ್ ವಿತರಣೆ ನೀತಿ ಸಂಹಿತೆಯ ಉಲ್ಲಂಘನೆ – ಅನ್ಸಾರ್ ಅಹ್ಮದ್

ಉಡುಪಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಯೋಜಿತ ಆರೋಗ್ಯ ಯೋಜನೆಯಾದ ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ಉಡುಪಿ ಜಿಲ್ಲೆ ಸೇರಿದಂತೆ ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ನಂತರವೂ ವಿತರಿಸಲಾಗುತ್ತಿದೆ.ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ಸರಕಾರದ ಯೋಜನೆಗಳನ್ನು ನಿಲ್ಲಿಸ ಬೇಕಾಗಿರುವುದು ನಿಯಮವಾಗಿದ್ದರೂ ಆರೋಗ್ಯ ಕರ್ನಾಟಕ ಕಾರ್ಡ್ ಅನ್ನು ವಿತರಿಸಲಾಗುತ್ತಿರುವುದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮ್ಮದ್ ಹೇಳಿದ್ದಾರೆ.

ಕಳೆದ ಹಲವು ತಿಂಗಳಿಂದ ಉಡುಪಿ ತಾಲೂಕಿನ 76 ಬಡಗಬೆಟ್ಟು ಗ್ರಾಮದ ಡಯಾನ ಥಿಯೇಟರ್ ಎದುರುಗಡೆ ಕಾರ್ಯಾಚರಿಸುತ್ತಿದ್ದ ಕರ್ನಾಟಕ ಒನ್ ಕೇಂದ್ರದಲ್ಲಿ ಕಾರ್ಡ್ ನ ಕೊರತೆಯ ಸಬೂಬು ಹೇಳಿ ಸಾರ್ವಜನಿಕರನ್ನು ವಾಪಸ್ ಕಳುಹಿಸಲಾಗುತ್ತಿತ್ತು.

ಚುನಾವಣೆ ಘೋಷಣೆಯ ಒಂದು ವಾರದ ಮೊದಲಿನಿಂದ ದಿನಕ್ಕೆ ನೂರಾರು ಜನರಿಗೆ ಕಾರ್ಡ್ ವಿತರಣೆ ಮಾಡಲಾಗುತ್ತಿದೆ ಕಾರ್ಡ್ ವಿತರಣೆ ನಿಲುಗಡೆಯಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾಗುವುದಿಲ್ಲ.
ಏಕೆಂದರೆ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಯಿಂದ ತುರ್ತು ಕಾರ್ಡ್ ಸೌಲಭ್ಯ ಪಡೆಯುವ ವ್ಯವಸ್ಥೆ ಈ ಮೊದಲಿನಿಂದಲೂ ಜಾರಿಯಲ್ಲಿದೆ.

ಆದ್ದರಿಂದ ಆರೋಗ್ಯ ಕರ್ನಾಟಕ ಸೌಲಭ್ಯದ ಕಾರ್ಡ್ ವಿತರಣೆಯನ್ನು ಕೂಡಲೇ ತಡೆ ಹಿಡಿಯುವಂತೆ ಚುನಾವಣಾ ಅಧಿಕಾರಿಗಳಿಗೆ ಈಗಾಗಲೇ ದೂರು ನೀಡಲಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ಅನ್ಸಾರ್ ಅಹಮದ್ ರವರು ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ


Spread the love