ತಲಪಾಡಿ ಟೋಲ್ ಗೇಟ್ : ಮಾರ್ಚ್ 3ರ ತನಕ ವಿನಾಯತಿಗೆ ಸಂಸದ ನಳಿನ್ ಸೂಚನೆ

Spread the love

ತಲಪಾಡಿ ಟೋಲ್ ಗೇಟ್ : ಮಾರ್ಚ್ 3ರ ತನಕ ವಿನಾಯತಿಗೆ ಸಂಸದ ನಳಿನ್ ಸೂಚನೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ತಲಪಾಡಿ ಟೋಲ್ ಗೇಟಿನಲ್ಲಿ ಮಾರ್ಚ್ 3 ರವರೆಗೆ 5 ಕಿಮಿ ವ್ಯಾಪ್ತಿಯ ವಾಹನಗಳಿಗೆ ಟೋಲಿನಿಂದ ವಿನಾಯತಿ ನೀಡುವುದನ್ನು ಮುಂದುವರಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.

ತಲಪಾಡಿ ಟೋಲ್ ವಿವಾದಕ್ಕೆ ಸಂಬಂಧಿಸಿ ದಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ತಲಪಾಡಿ ಪಂಪ್ ವೆಲ್ ನಾಲ್ಕು ಪಥ ಹೆದ್ದಾರಿ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲವಾದರೂ ಶೇ 80ರಷ್ಟು ಪೂರ್ತಿಯಾಗಿದೆ ಎಂದು ಎನ್ ಎಚ್ ಎಐಗೆ ಗುತ್ತಿಗೆದಾರರು ತಪ್ಪು ಮಾಹಿತಿ ನೀಡದ್ದಾರೆ, ಸ್ಥಳೀಯರನ್ನು ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಾಏಕಿ ಟೋಲ್ ಸಂಗ್ರಹವನ್ನು ಆರಂಭಿಸಲಾಗಿದೆ. ಸ್ಥಳೀಯ 5 ಕಿಮಿ ವ್ಯಪ್ತಿಯ ವಾಹನಗಳಿಗೆ ಟೋಲಿನಿಂದ ವಿನಾಯತಿ ನೀಡಬೇಕು. 20 ಕಿಮಿ ವ್ಯಾಪ್ತಿಯ ವಾಹನಗಳಿಗೆ ಶುಲ್ಕದಲ್ಲಿ ಅರ್ದದಷ್ಟು ಕಡಿತ ಮಾಡಬೇಕು. ಟೋಲ್ ಸಿಬಂದಿಯ ಪೂರ್ವಾಪರವನ್ನು ಪೋಲಿಸರು ಪರಿಶೀಲಿಸಿದ ಬಳಿಕವೇ ಗುರುತಿನ ಚೀಟಿ ನೀಡಬೇಕು. ಹಗಲು ಹೊತ್ತು ಮಹಿಳಾ ಸಿಬಂದಿಯನ್ನು ಟೋಲ್ ಸಂಗ್ರಹಕ್ಕೆ ನಿಯೋಜಿಸಬೇಕು. ಶಾಲಾವಾಹನಗಳಿಗೆ ವಿನಾಯತಿ ನೀಡಬೇಕು ಎಂಬ ಸಲಹೆಗಳ ಬಗ್ಗೆ ಸಚಿವ ಯು ಟಿ ಖಾದರ್ ಗಮನ ಸೆಳೆದರು.

ಸ್ಥಳೀಯ 5 ಕಿಮಿ ವ್ಯಾಪ್ತಿಯ ವಾಹನಗಳಿಗೆ ಟೋಲಿನಿಂದ ವಿನಾಯತಿ ನೀಡಿರುವುದು ಬಿಟ್ಟರೆ ಬೇರೆ ಯಾವುದೇ ಸಲಹೆ ಕಾರ್ಯಗತಗೊಂಡಿಲ್ಲ ಎಂದು ಎನ್ ಎಚ್ ಎ ಐ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.

ತಲಪಾಡಿ ಟೋಲ್ ಗೇಟಿನ 5 ಕಿಮಿ ವ್ಯಾಪ್ತಿಯಲ್ಲಿ 8 ಗ್ರಾಮಗಳು ಬರುತ್ತವೆ ಕೇರಳ ಭಾಗದಲ್ಲಿ 4 ಸಾವಿರ ಹಾಗೂ ತಲಪಾಡಿಯಲ್ಲಿ 11031 ವಾಹನಗಳು ಇವೆ. ಸ್ಥಳೀಯ ವಾಹನಗಳಿಗೆ ಶುಲ್ಕ ವಿನಾಯತಿಯ ಅವಧಿ ಮುಕ್ತಾಯಗೊಂಡಿದೆ. ಶಾಲಾ ವಾಹನಗಳಿಗೆ ಮಾಸಿಕ 3620 ರೂ ಶುಲ್ಕವನ್ನು ವಸೂಲಿ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರು ಹೇಳಿದರು.

ಸುರತ್ಕಲ್ ಎನ್ ಐಟಿಕೆ ಬಳಿಯ ಟೋಲಿನಲ್ಲಿ ಶಾಲಾ ವಾಹನಗಳಿಂದ ಶುಲ್ಕವನ್ನು ಸಂಗ್ರಹಿಸುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ಮಾಹಿತಿ ನೀಡಿದರಲ್ಲದೆ ತಲಪಾಡಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಟೋಲ್ ಸಂಗ್ರಹಿಸಲಾಗುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.


Spread the love