ತೈಲ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಆಗ್ರಹ

Spread the love

ತೈಲ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಉಡುಪಿ ಜಿಲ್ಲಾ ಎನ್.ಎಸ್.ಯು.ಐ ಆಗ್ರಹ

ಉಡುಪಿ: ಸತತವಾಗಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆ ಮಾಡುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೂಡಲೆ ತೈಲ ಬೆಲೆಯನ್ನು ಇಳಿಸುವಂತೆ ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಕ್ರಿಸ್ಟನ್ ಡಿ’ಆಲ್ಮೇಡಾ ಆಗ್ರಹಿಸಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಂಧನ ಬೆಲೆ ದಾಖಲೆ ರೀತಿಯಲ್ಲಿ ಏರಿಕೆ ಕಂಡಿದ್ದು, ಇದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ತಲುಪಿದ್ದು ಜನಸಾಮಾನ್ಯರ ಬದುಕು ಇನ್ನಷ್ಟು ದುಸ್ತರವಾಗಿದೆ. ‘ಅಚ್ಚೇ ದಿನ್’ ನೀಡುವುದಾಗಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರ ದೇಶದ ಜನರಿಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ತೋರಿಸಿದ್ದು ಕೇವಲ ‘ಭುರೆ ದಿನ್’ ಮಾತ್ರ.

ಯುಪಿಎ ಸರ್ಕಾರದಲ್ಲಿ ತೈಲ ಬೆಲೆ ಏರಿಕೆಯಾದ ಕೂಡಲೇ ಬೀದಿಗಿಳಿಯುತ್ತಿದ್ದ ಬಿಜೆಪಿ ನಾಯಕರು, ಅವರದ್ದೇ ಸರ್ಕಾರ ಬಂದು ತೈಲ ಬೆಲೆ ಹಿಂದೆಂದೂ ಕಾಣದ ದಾಖಲೆ ಮಟ್ಟದ ಏರಿಕೆ ಕಂಡರೂ ಕೂಡ ತುಟಿ ಬಿಚ್ಚದಿರುವುದು ದೇಶದ ಜನತೆಗೆ ಮಾಡುತ್ತಿರುವ ಬಹು ದೊಡ್ಡ ದ್ರೊಹವಾಗಿದೆ. ತೈಲ ಬೆಲೆ ಇಷ್ಟೊಂದು ಮಟ್ಟದಲ್ಲಿ ಏರಿಕೆಯಾದರೂ ಕೂಡ ಮೋದಿ ಭಕ್ತರು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿದ್ದಾರೆ.

ಅಗತ್ಯ ವಸ್ತುಗಳ ಹಾಗೂ ಇಂಧನ ಬೆಲೆ ಏರಿಕೆಯಲ್ಲಿ ಸ್ಥಿರತೆ ತರುವುದಾಗಿ ಮೋದಿ ಅವರು ಚುನಾವಣೆಗೂ ಮುನ್ನ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದು 4 ವರ್ಷ ಕಳೆದರೂ ಬೆಲೆ ಏರಿಕೆಗೆ ಕಡಿವಾಣ ಹಾಕಲು ಸಾಧ್ಯವಾಗಿಲ್ಲ. ಕಪ್ಪು ಹಣ ವಾಪಾಸು ತರುವುದು, ಯುವಕರಿಗೆ ಉದ್ಯೋಗ ಸೃಷ್ಟಿಯಂತ ಮೋದಿಯ ಚುನಾವಣಾ ಪೂರ್ವ ಭರವಸೆಗಳೆಲ್ಲಾ ಹುಸಿಯಾಗಿದೆ. ಪ್ರಧಾನಿಯಾದ ಬಳಿಕ ಕಪ್ಪುಹಣವನ್ನು ಭಾರತಕ್ಕೆ ತಂದು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಜಮೆ ಮಾಡುವುದದಾಗಿ ಭಾಷಣ ಮಾಡಿದ್ದ ಮೋದಿಯವರು ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ.ಒಟ್ಟಾರೆ ಮೋದಿ ಸರ್ಕಾರ ದೇಶದ ಜನರ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದ್ದು ಇನ್ನಾದರೂ ಎಚ್ಚೆತ್ತುಕೊಂಡು ಏರಿಸಿರುವ ತೈಲ ಬೆಲೆಯನ್ನು ಕೂಡಲೇ ಇಳಿಸಬೇಕು ಎಂದು ಕ್ರಿಸ್ಟನ್ ಡಿ’ಆಲ್ಮೇಡಾ ಆಗ್ರಹಿಸಿದ್ದಾರೆ.


Spread the love