ನಮ್ಮ ಧರ್ಮಗುರುಗಳು ಬೇರೆಯಲ್ಲ, ಪೇಜಾವರ ಶ್ರೀಗಳು ಬೇರೆಯಲ್ಲ : ಮುಸ್ಲಿಂ ಕಾರು ಚಾಲಕನ ಮನದ ಮಾತು

Spread the love

ನಮ್ಮ ಧರ್ಮಗುರುಗಳು ಬೇರೆಯಲ್ಲ, ಪೇಜಾವರ ಶ್ರೀಗಳು ಬೇರೆಯಲ್ಲ : ಮುಸ್ಲಿಂ ಕಾರು ಚಾಲಕನ ಮನದ ಮಾತು

ಉಡುಪಿ: ‘‘ನಾನು, ನನ್ನ ಇಬ್ಬರು ಅಣ್ಣಂದಿರು 20 ವರ್ಷಗಳಿಂದ ಪೇಜಾವರ ಶ್ರೀಗಳ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದೇವೆ. ಪೇಜಾವರ ಶ್ರೀಗಳು ನಮ್ಮನ್ನು ಯಾವತ್ತೂ ಮುಸ್ಲಿಮರೆಂದು ನೋಡಿಯೇ ಇಲ್ಲ. ಅವರಿಗೇನೂ ಹಿಂದೂಗಳು ಚಾಲಕರಾಗಿ ಸಿಗುವುದಿಲ್ಲ ಎಂದಲ್ಲ, ಅಥವಾ ಮುಸ್ಲಿಮರೇ ಬೇಕು ಎಂದೂ ಅಲ್ಲ. ಅವರಿಗೆ ಎಲ್ಲರೂ ಒಂದೇ. ಶುಕ್ರವಾರ ಕಾರಿನಲ್ಲಿ ಪ್ರಯಾಣಿಸುವಾಗ ನಮಗೆ ನಮಾಜ್‌ ಮಾಡುವ ಸಮಯವಾದರೆ, ದಾರಿ ಮಧ್ಯೆ ಮಸೀದಿ ಬಂದಾಗ ಕಾರು ನಿಲ್ಲಿಸುವಂತೆ ಹೇಳಿ, ನಮಾಜ್‌ ಮಾಡಿ ಬನ್ನಿ ಎಂದು ಸ್ವಾಮೀಜಿ ಕಳುಹಿಸುತ್ತಿದ್ದರು.”’

ಸ್ವಾಮೀಜಿಯೊಂದಿಗೆ ಪ್ರಸಾದ ಪಾತ್ರೆಯೊಂದಿಗೆ ಕಾರು ಚಾಲಕ ಆರೀಫ್ 

ಇಪ್ಪತ್ತು ವರ್ಷಗಳಿಂದ ಉಡುಪಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಯವರ ಚಾಲಕರಾಗಿ ಕಾರ್ಯ ನಿರ್ವನಿರ್ವಹಿಸುತ್ತಿರುವ, ಉಡುಪಿ ಕೃಷ್ಣಮಠದಲ್ಲಿ ಸೌಹಾರ್ದ ಇಫ್ತಾರ್‌ ಕೂಟದ ಮುಂದಾಳತ್ವ ವಹಿಸಿದ್ದ ಪೇಜಾವರ ಶ್ರೀ ಬ್ಲಡ್‌ ಡೋನರ್ಸ್‌ ಟೀಮ್‌ನ ಸಂಚಾಲಕ ಅರೀಫ್‌ ಮಹ್ಮದ್‌ ಮಾತುಗಳು.

ಮಂಗಳವಾರ ಮಾಧ್ಯಮವೊಂದರ ಜೊತೆ ಮಾತನಾಡಿ ಅವರು ಕೃಷ್ಣಮಠದಲ್ಲಿ ಪೇಜಾವರ ಶ್ರೀಗಳು ಆಯೋಜಿಸಿದ್ದ ಸೌಹಾರ್ದ ಇಫ್ತಾರ್‌ ಕೂಟದ ಬಗ್ಗೆ ಎದ್ದಿರುವ ವಿವಾದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಮಂಡಿ ಊರಿ ಕೈಜೋಡಿಸಿ ನಮಾಜ್‌ ಮಾಡುವುದು, ದೇವರ ಮುಂದೆ ಮಂಡಿ ಊರಿ ನಮಸ್ಕಾರ ಮಾಡುವುದು ಎರಡೂ ಒಂದೇ. ಅದು ಮಸೀದಿಯಲ್ಲಿ ಮಾಡಿದರೂ ಒಂದೇ, ಮಠದಲ್ಲಿ ಮಾಡಿದರೂ ಒಂದೇ, ದೇವರಿಗೆ ಸಲ್ಲುತ್ತದೆ ಎಂದು ಮಹಾಜ್ಞಾನಿಗಳಾದ ಪೇಜಾವರ ಶ್ರೀಗಳೇ ಹೇಳುವಾಗ ಉಳಿದವರದ್ದೇನು ಆಕ್ಷೇಪ? ಅವರೇನೂ ಪೇಜಾವರ ಶ್ರೀಗಳಿಗಿಂತ ಜ್ಞಾನಿಗಳೇ? ಶ್ರೀಗಳೇ ನಮ್ಮನ್ನು ಕರೆದು ಮಠದಲ್ಲಿ ರಂಜಾನ್‌ ಹಿನ್ನೆಲೆ ಯಲ್ಲಿ ಸೌಹಾರ್ದ ಇಫ್ತಾರ್‌ ಮಾಡೋಣ ಎಂದಾಗ ನಮಗೆ ಬಹಳ ಸಂತೋಷವಾಗಿತ್ತು ಎಂದರು.

ಆರೀಫ್‌ ಹೇಳಿದ್ದಿಷ್ಟು: ನಾವೇನೂ ಅಕ್ರಮವಾಗಿ ನಮಾಜ್‌ ಮಾಡಿಲ್ಲ, ಹಿಂದಿನ ದಿನವೇ ಪೇಜಾವರ ಶ್ರೀಗಳಲ್ಲಿ ಈ ಬಗ್ಗೆ ಕೇಳಿದ್ದೆವು, ಅವರು ಸಂತೋಷದಿಂದಲೇ ಒಪ್ಪಿಕೊಂಡರು. ನಮಾಜ್‌ಗೂ ನಮಸ್ಕಾರಕ್ಕೂ ವ್ಯತ್ಯಾಸ ಇಲ್ಲ, ಮಾಡಿ ಎಂದು ಆಶೀರ್ವದಿಸಿದರು.

ಮಾತ್ರವಲ್ಲ, ಇಫ್ತಾರ್‌ಗೂ ಏನೆಲ್ಲಾ ತಿಂಡಿ ಬೇಕು ಎಂದು ಅತ್ಯಂತ ಆಸ್ಥೆಯಿಂದ, ಪ್ರೀತಿಯಿಂದ ಕೇಳಿದರು. ಅದಕ್ಕೆ ನಾವು, ಸ್ವಾಮೀಜಿ ನೀವು ಏನು ನೀಡಿದರೂ ಅದನ್ನು ಪ್ರಸಾದ ಎಂದು ಸ್ವೀಕರಿಸುತ್ತೇವೆ ಎಂದು ಹೇಳಿದ್ದೆವು. ಶ್ರೀಗಳು ನಾವು ಯೋಚಿಸಿದ್ದಕ್ಕಿಂತಲೂ ಹೆಚ್ಚಿನ ಬಗೆಯ ತಿಂಡಿಗಳನ್ನು ಮಾಡಿಸಿದ್ದರು. ಹೊಟ್ಟೆತುಂಬಾ ಚಿತ್ರಾನ್ನ, ಮೊಸರನ್ನ, ಘೀರೈಸ್‌ ಬಡಿಸಿದರು. ಪ್ರತಿಯೊಬ್ಬರಿಗೂ ತಾವೇ ಕೈಯಾರೇ ಖರ್ಜೂರ ನೀಡಿ ನಮ್ಮ ಉಪವಾಸವನ್ನು ಕೊನೆಗೊಳಿಸಿದರು.

ನಾವು ಇಂತಹ ಪೇಜಾವರ ಶ್ರೀಗಳಲ್ಲಿ ನಮ್ಮ ದೇವರನ್ನು ಕಂಡಿದ್ದೇವೆæ. ನಮಗೆ ನಮ್ಮ ಧರ್ಮಗುರುಗಳು ಬೇರೆಯಲ್ಲ, ಪೇಜಾವರ ಶ್ರೀಗಳು ಬೇರೆಯಲ್ಲ.

ಎಲ್ಲಾ ಧರ್ಮದವರಿಗೂ ಕರೆಯಿತ್ತು: ಶ್ರೀಗಳೇ ಇದು ಸರ್ವಧರ್ಮ ಸೌಹಾರ್ದ ಕೂಟ ಆಗಬೇಕು ಎಂದು ಸ್ಪಷ್ಟವಾಗಿ ಹೇಳಿದ್ದರು. ಅದರಂತೆ ಈ ಕೂಟಕ್ಕೆ ಎಲ್ಲಾ ಧರ್ಮೀಯರನ್ನು ಕರೆಸಲಾಗಿತ್ತು. ಜೋಸೆಫ್‌ ಸಲ್ಡಾನ ಮತ್ತಿತರ ಹತ್ತಾರು ಕ್ರೈಸ್ತರು, ನಿತ್ಯಾನಂದ ಒಳಕಾಡು ಮುಂತಾದ ಹಿಂದೂಗಳೂ ಭಾಗವಹಿಸಿದ್ದರು. ಕಾಂಗ್ರೆಸ್‌ ನಾಯಕರಾದ ಎಂ.ಎ.ಗಫäರ್‌, ಹಬೀಬ್‌ ಆಲಿ, ಬಿಜೆಪಿ ನಾಯಕರಾದ ರಹೀಂ ಉಚ್ಚಿಲ, ಸುರೇಶ್‌ ಶೆಟ್ಟಿಗುರ್ಮೆ ಭಾಗವಹಿಸಿದ್ದರು. ಜೆಡಿಎಸ್‌ ಪಕ್ಷದ ಹಲವು ಕಾರ್ಯಕರ್ತರಿದ್ದರು.

ಎಲ್ಲಾ ಧರ್ಮೀಯರಿದ್ದ ಈ ಕೂಟಕ್ಕೆ ಗೋಮಾಂಸಕ್ಕೂ ಯಾಕೆ ಸಂಬಂಧ ಜೋಡಿಸಬೇಕು? ಆದರೂ ಅನಗತ್ಯವಾಗಿ ಕೇವಲ ಪ್ರಚಾರಕ್ಕಾಗಿ ವಿವಾದ ಸೃಷ್ಟಿಸಲಾಗಿದೆ ಎಂದು ಹೇಳಿದ ಆರೀಫ್‌, ನಾವು ಮುಂದೆಯೂ ಪೇಜಾವರ ಶ್ರೀಗಳೊಂದಿಗೆ ಇದ್ದೇವೆ. ಅವರ ಮಾರ್ಗದರ್ಶನದಲ್ಲೇ ನಡೆಯುತ್ತೇವೆ ಎಂದರು. ಆಗ ನಾವು ಮುಸ್ಲಿಮರೆಂದು ಗೊತ್ತಿರಲಿಲ್ಲವೇ?: ನಾಲ್ಕು ವರ್ಷಗಳ ಹಿಂದೆ ಪೇಜಾವರ ಶ್ರೀಗಳ ಹೆಸರಿನಲ್ಲಿ ‘ಬ್ಲಡ್‌ ಡೋನರ್ಸ್‌ ಟೀಮ್‌’ ಕಟ್ಟಿಕೊಂಡಿದ್ದೇವೆ. ಈಗ ಬೆಂಗಳೂರು, ಕಾರವಾರ, ಶಿರಸಿ, ಭಟ್ಕಳ ಮತ್ತು ಪಡುಬಿದ್ರಿಗಳಲ್ಲೂ ರಕ್ತದಾನಿಗಳ ತಂಡ ಕಟ್ಟಿದ್ದೇವೆ. ಮುಂದೆಯೂ ರಾಜ್ಯಾದ್ಯಂತ ಪ್ರತಿ ಜಿಲ್ಲೆಯಲ್ಲೂ ಇದೇ ರೀತಿಯ ಟೀಮ್‌ ಕಟ್ಟುತ್ತೇವೆ. ಈ ತಂಡದಲ್ಲಿ 600 ಸದಸ್ಯರಿದ್ದಾರೆ. ಅವರಲ್ಲಿ 500 ಮಂದಿ ಮುಸ್ಲಿಮರು. ಶ್ರೀಗಳ ಜನ್ಮನಕ್ಷತ್ರದಂದು ರಕ್ತದಾನ ಮಾಡುತ್ತಿದ್ದೇವೆ. 1700 ಮಂದಿಗೆ ರಕ್ತ ನೀಡಿದ್ದೇವೆ. ಪೇಜಾವರ ಶ್ರೀಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನ ಮಾಡಿದಾಗ ಪ್ರತಿಭಟನೆ ಮಾಡಿದ್ದೇವೆ. ಕೆಲವರು ಕೃಷ್ಣಮಠಕ್ಕೆ ಮುತ್ತಿಗೆ ಹಾಕಲು ಬಂದಾಗ ನೂರಾರು ಮುಸ್ಲಿಮರು ಶ್ರೀಗಳ ಪರ ನಿಂತಿದ್ದೇವೆ. ಕೃಷ್ಣಮಠದ ಸ್ವಚ್ಛತಾ ಕಾರ್ಯಕ್ರಮದಲ್ಲಿ 30 ಮುಸ್ಲಿಮರು ಭಾಗವಹಿಸಿದ್ದೇವೆ. ಶ್ರೀಗಳು ಲಕ್ಷವೃಕ್ಷ ಅಭಿಯಾನ ಮಾಡಿದಾಗ ನಾವು 300 ಗಿಡಗಳನ್ನು ಬಸ್ಸು ನಿಲ್ದಾಣದಲ್ಲಿ ಜನರಿಗೆ ವಿತರಿಸಿದ್ದೇವೆ. ಶ್ರೀಗಳ ಪುರಪ್ರವೇಶದಂದು 8000 ಮಂದಿಗೆ ಮಜ್ಜಿಗೆ ವಿತರಿಸಿದ್ದೇವೆ. ಕಡಿಯಾಳಿಯ 50ನೇ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ 4000 ಜನರಿಗೆ ತಂಪು ಪಾನೀಯ ನೀಡಿದ್ದೇವೆ. ಪರ್ಯಾಯಕ್ಕೆ ಹೊರೆ ಕಾಣಿಕೆ ನೀಡಿದ್ದೇವೆ. ಅಗೆಲ್ಲಾ ನಾವು ಮುಸ್ಲಿಮರು ಎಂಬುದು ಗೊತ್ತಿರಲಿಲ್ಲವೇ? ಆಗ ಯಾರೂ ವಿರೋಧಿಸಲಿಲ್ಲ, ಈಗೇಕೆ ವಿರೋಧ ಎಂದು ಆರಿಫ್‌ ಪ್ರಶ್ನಿಸುತ್ತಾರೆ.

ಕೃಪೆ : ಸುವರ್ಣ ನ್ಯೂಸ್/ಕನ್ನಡಪ್ರಭ


Spread the love