ನಳಿನ್ ಕುಮಾರ್ ಕಟೀಲ್ ಸೋಲಿಸಿ – ಜಿಲ್ಲೆಯ ಜನಪರ ಸಂಘಟನೆಗಳ ಜಂಟಿ ಮನವಿ

Spread the love

ನಳಿನ್ ಕುಮಾರ್ ಕಟೀಲ್ ಸೋಲಿಸಿ- ಜಿಲ್ಲೆಯ ಜನಪರ ಸಂಘಟನೆಗಳ ಜಂಟಿ ಮನವಿ

ಮಂಗಳೂರು: ಒಂದು ಕಾಲದಲ್ಲಿ ಅಭಿವೃದ್ದಿ, ಸಾಮರಸ್ಯಕ್ಕೆ ಹೆಸರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆ ಕಳೆದ ಎರಡು ದಶಕಗಳಿಂದ ಅಭಿವೃದ್ದಿಯಲ್ಲಿ ಹಿನ್ನಡೆ ಕಾಣುತ್ತಿದೆ. ಮತೀಯ ಸಂಘರ್ಷದಿಂದ ಸಾಮರಸ್ಯಕ್ಕೆ ಧಕ್ಕೆಯಾಗಿದ್ದು ಪರಸ್ಪರ ಅಪನಂಬಿಕೆ ಹೆಚ್ಚಾಗಿದೆ. ಇದು ಇಲ್ಲಿನ ಜನಜೀವನದ ಮೇಲೆ ಗಂಭೀರ ಪರಿಣಾಮ ಮೂಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಈ ಸ್ಥಿತಿಗೆ ಕಳೆದ ಮೂರು ದಶಕಗಳಿಂದ ಬಿಜೆಪಿ ಸತತವಾಗಿ ಗೆಲ್ಲುತ್ತಿರುವುದೇ ಕಾರಣ. ಜಿಲ್ಲೆಯ ಜನತೆ ಈ ಬಾರಿಯ ಚುನಾವಣೆಯಲ್ಲಿ ಇಂತಹ ತಪ್ಪು ಮರುಕಳಿಸದಂತೆ ಎಚ್ಚರ ವಹಿಸಬೇಕು. ದೇಶದ ಪಾಲಿಗೆ ನಿರ್ಣಾಯಕವಾಗಿರುವ ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ರನ್ನು ಸೋಲಿಸುವ ಮೂಲಕ ಜನಸಾಮಾನ್ಯರ, ದಲಿತ, ಅಲ್ಪಸಂಖ್ಯಾತ,ಆದಿವಾಸಿಗಳ, ಯುವಜನರ, ದಮನಿತರ, ರೈತರ, ಕಾರ್ಮಿಕರ ಪ್ರಶ್ನೆಗಳು ಮುಂಚೂಣಿಗೆ ಬರುವಂತೆ, ಅಭಿವೃದ್ದಿ, ಸಾಮರಸ್ಯ, ಬದುಕಿನ ವಿಷಯಗಳು ಆದ್ಯತೆ ಆಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲೆಯ ಸಮಾನ ಮನಸ್ಕ ಜನಪರ ಸಂಘಟನೆಗಳು ಮನವಿ ಮಾಡಿವೆ

ಎಪ್ಪತ್ತು ಎಂಬತ್ತರ ದಶಕಗಳಲ್ಲಿ ಗೇಣಿದಾರ ರೈತರ, ಬೀಡಿ, ಹೆಂಚು, ಗೋಡಂಬಿ ಮುಂತಾದ ಕ್ಷೇತ್ರಗಳ ಕಾರ್ಮಿಕರ, ಮೀನುಗಾರರ, ಬಡವರ ವಿಷಯಗಳು ಜಿಲ್ಲೆಯ ರಾಜಕಾರಣವನ್ನು ನಿರ್ಧರಿಸುತ್ತಿತ್ತು. ಅಂದು ಬದುಕಿನ ಪ್ರಶ್ನೆಗಳ ಆಧಾರದಲ್ಲಿ ನಡೆಯುತ್ತಿದ್ದ ರಾಜಕೀಯ ಚರ್ಚೆಗಳಿಂದಾಗಿಯೆ ಮಂಗಳೂರಿಗೆ ವಿಮಾನ ನಿಲ್ದಾಣ, ಬಂದರು, ಇಂಜಿನಿಯರಿಂಗ್ ಕಾಲೇಜುಗಳು ಬಂದವು. ಬೀಡಿ, ಹೆಂಚು, ಗೋಡಂಬಿ ಮುಂತಾದ ಸಣ್ಣ ಕೈಗಾರಿಕೆಗಳು ಸ್ಥಾಪನೆಗೊಂಡು ಉದ್ಯೋಗಗಳು ಸೃಷ್ಟಿಯಾದವು. ಭಗೋಡಂಬಿ, ಹೆಂಚು ಪರಿಣಾಮಕಾರಿಯಾಗಿ ಜಾರಿಗೊಂಡು ಗೇಣಿದಾರ ರೈತರಿಗೆ ನೆಮ್ಮದಿಯ ಬದುಕು ಸಿಕ್ಕಿತ್ತು. ಮುತ್ಸದ್ದಿ ರಾಜಕಾರಣಿಗಳು ಚುನಾವಣೆಯಲ್ಲಿ ಗೆದ್ದು ಜಿಲ್ಲೆಗೆ ಘನತೆ ತಂದರು. ಆದರೆ ಕಳೆದ ಮೂರು ದಶಕಗಳಲ್ಲಿ ಬಿಜೆಪಿ ಮತೀಯ ಉನ್ಮಾದವನ್ನು ಸೃಷ್ಟಿಸಿ, ಹಿಂದುತ್ವದ ಆಧಾರದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸತೊಡಗಿದ ನಂತರ ಜಿಲ್ಲೆ ಎಲ್ಲಾ ರಂಗಗಳಲ್ಲಿಯೂ ಹಿನ್ನಡೆ ಸಾಧಿಸತೊಡಗಿದೆ. ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು, ಮೀನುಗಾರರು ಸೇರಿದಂತೆ ಸಣ್ಣಪುಟ್ಟ ಹಿಂದುಳಿದ ಜಾತಿಗಳು ತಮ್ಮ ರಾಜಕೀಯ ಅಸ್ಥಿತ್ವವನ್ನೇ ಕಳೆದುಕೊಳ್ಳತೊಡಗಿವೆ. ಬಡವರ, ಜನಸಾಮಾನ್ಯರ ಪ್ರಶ್ನೆಗಳು ಅಂಚಿಗೆ ಸರಿದಿವೆ. ಬೀಡಿ, ಗೋಡಂಬಿ, ಹೆಂಚು ಸಹಿತ ಸ್ಥಳೀಯ ಸಣ್ಣ ಕೈಗಾರಿಕೆಗಳು ಬಿಕ್ಕಟ್ಟಿಗೆ ಸಿಲುಕಿವೆ. ಅಲ್ಲಿ ದುಡಿಯುತ್ತಿರುವ ಕಾರ್ಮಿಕರ ಸಂಕಷ್ಟಗಳನ್ನು ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗಗಳನ್ನು ಹೊಸದಾಗಿ ಸೃಷ್ಟಿಸುವ ಯಾವ ಉದ್ದಿಮೆಗಳೂ ಜಿಲ್ಲೆಗೆ ಕಾಲಿಡದೆ ನಿರುದ್ಯೋಗ ಬಹುದೊಡ್ಡ ಸಮಸ್ಯೆಯಾಗಿ ಎದ್ದು ನಿಂತಿದೆ. ವಿದ್ಯಾವಂತ ಯುವಜನತೆ ತಮ್ಮ ಅರ್ಹತೆಗೆ ತಕ್ಕ ಉದ್ಯೋಗ ದೊರಕದೆ ನಿರುದ್ಯೋಗಿಗಳಾಗಿಯೊ, ತಮ್ಮ ಅರ್ಹತೆಗೆ ತಕ್ಕುದಲ್ಲದ ಅರೆ ಉದ್ಯೋಗಗಳನ್ನು ಮಾಡುತ್ತಲೋ ಭವಿಷ್ಯದ ಬಗ್ಗೆ ಆತಂಕಿತರಾಗಿದ್ದಾರೆ. ಕರಾವಳಿಯ ಯುವಜನರ ಪಾಲಿಗೆ ಉದ್ಯೋಗದ ಬಹುದೊಡ್ಡ ಆಸರೆಯಾಗಿದ್ದ ಗಲ್ಫ್ ರಾಷ್ಟ್ರಗಳು ಸ್ವದೇಶೀಕರಣದ ನಿಯಮಗಳನ್ನು ಜಾರಿಗೆ ತಂದುದರಿಂದ ಸಾವಿರಾರು ಯುವಜನರು ಇಂದು ಬರಿಗೈಯ್ಯಲ್ಲಿ ಜಿಲ್ಲೆಗೆ ವಾಪಾಸಾಗುತ್ತಿದ್ದಾರೆ. ಅಂತಹ ಸಂತ್ರಸ್ತರ ನೆರವಿಗೆ ಕೇಂದ್ರದ ಬಿಜೆಪಿ ಸರಕಾರವಾಗಲಿ, ಇಲ್ಲಿನ ಸಂಸದ ನಳಿನ್ ಕುಮಾರ್ ರಾಗಲಿ ಯಾವುದೇ ಪರಿಹಾರ ಕ್ರಮಗಳನ್ನು ಕೈಗೊಂಡಿಲ್ಲ. ಅಡಿಕೆ, ಕೋಕೊ, ರಬ್ಬರ್ ಮುಂತಾದ ವಾಣಿಜ್ಯ ಬೆಳೆ ಬೆಳೆಯುವ ಜಿಲ್ಲೆಯ ರೈತರು ಕಳೆದ ಒಂದು ದಶಕದಿಂದ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಕೃಷಿ ಕ್ಷೇತ್ರದ ಈ ಬಿಕ್ಕಟ್ಟಿಗೆ ಬಿಜೆಪಿ ಯಾವುದೇ ಸ್ಪಂದನೆ ನೀಡಿರುವುದಿಲ್ಲ. ಬೀಡಿ ಕಾರ್ಮಿಕರ ಹೆಚ್ಚಳಗೊಂಡ ಮಜೂರಿಯನ್ನು ನೀಡದೆ ಲಕ್ಷಾಂತರ ಮಹಿಳಾ ಕಾರ್ಮಿಕರನ್ನು ಬೀಡಿ ಮಾಲಕರು ವಂಚಿಸುತ್ತಿದ್ದರೂ ಜಿಜೆಪಿ ಹಾಗೂ ಸಂಸದರು ಮಜೂರಿ ಕೊಡಿಸಲು ಸಣ್ಣ ಪ್ರಯತ್ನವನ್ನೂ ನಡೆಸಿಲ್ಲ. ಆಧುನಿಕ ಮೀನುಗಾರಿಕಾ ಪದ್ದತಿಯಿಂದ ಸ್ಥಳೀಯ ಮೀನುಗಾರ ಸಮುದಾಯ ಎದುರಿಸುತ್ತಿರುವ ಸವಾಲು, ಅವರ ಬೇಡಿಕೆಗಳು ಕನಿಷ್ಟ ಚರ್ಚೆಯೂ ಆಗುತ್ತಿಲ್ಲ. ಆದರೆ ಈ ಎಲ್ಲಾ ಸಮಸ್ಯೆ, ಬಿಕ್ಕಟ್ಟುಗಳನ್ನು ಹುಸಿ ಧಾರ್ಮಿಕತೆ, ಪರಧರ್ಮ ದ್ವೇಷ, ಮತೀಯ ಉನ್ಮಾದ ಗುರಾಣಿಯ ಅಡಿಯಲ್ಲಿ ಮರೆಮಾಚಿ ಬಿಜೆಪಿ ಜನರನ್ನು ದಾರಿ ತಪ್ಪಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಾ ಬಂದಿದೆ.

ಇದು ಜಿಲ್ಲೆಯ ರಾಜಕೀಯ, ಸಾಮಾಜಿಕ, ಆರ್ಥಿಕ ಕ್ಷೇತ್ರದಲ್ಲಿ ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗಿದ್ದು. ದಕ್ಷಿಣ ಕನ್ನಡ ಜಿಲ್ಲೆ ಎಲ್ಲಾ ಕ್ಷೇತ್ರಗಳಲ್ಲಿಯೂ ಹಿಂದೆ ಬೀಳುತ್ತಿದೆ. ಕೋಮು ಸಂಘರ್ಷಗಳು ಹೆಚ್ಚಾಗಿ ಆತಂಕದ ಪರಿಸ್ಥಿತಿಯಲ್ಲಿ ಕಾಲ ತಳ್ಳುವಂತಾಗಿದೆ.ಈ ಎಲ್ಲಾ ಆಯಾಮಗಳ ಹಿನ್ನೆಲೆಯಲ್ಲಿ ಜಿಲ್ಲೆಯ ಸಮಾನನಸ್ಕ ದಲಿತ, ರೈತ, ವಿದ್ಯಾರ್ಥಿ, ಯುವಜನ, ಕಾರ್ಮಿಕ, ಮೀನುಗಾರ ಸಂಘಟನೆಗಳು ಜೊತೆ ಸೇರಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ರನ್ನು ಸೋಲಿಸಬೇಕು ಎಂದು ಜಿಲ್ಲೆಯ ಜನರಲ್ಲಿ ಮನವಿ ಮಾಡುತ್ತಿದ್ದೇವೆ. ಅದೇ ಸಂದರ್ಭದಲ್ಲಿ ಜನತೆ ಯಾವುದೇ ಕಾರಣಕ್ಕೂ ಮತ ವಿಭಜನೆಗೆ ಅವಕಾಶ ನೀಡದೆ ಬಿಜೆಪಿಯನ್ನು ಸೋಲಿಸಲು ಸಾಧ್ಯತೆ ಇರುವ ಮೈತ್ರಿ ಪಕ್ಷದ ಅಭ್ಯರ್ಥಿ ಮಿಥುನ್ ರೈಯವರಿಗೆ ಮತಚಲಾಯಿಸಿ ಬಿಜೆಪಿ ಸೋಲನ್ನು ಖಾತರಿಪಡಿಸಬೇಕು ಎಂದು ಸಂಘಟನೆಗಳ ಪರವಾಗಿ ಎಮ್ ದೇವಾದಾಸ್ ರಾಜ್ಯ ಸಹ ಸಂಚಾಲಕರು, ಡಿಎಸ್ಎಸ್ (ಡಾ. ಕೃಷ್ಣಪ್ಪ ಸ್ಥಾಪಿತ). ಮುನೀರ್ ಕಾಟಿಪಳ್ಳ ರಾಜ್ಯಾಧ್ಯಕ್ಷರು ಡಿವೈಎಫ್ಐ ಕರ್ನಾಟಕ, ದಯಾನಾಥ ಕೋಟ್ಯಾನ್. ಮೀನುಗಾರ ಮುಖಂಡರು, ಹಿರಿಯ ವಕೀಲರು, ರವಿ ಕಿರಣ ಪುಣಚ ರಾಜ್ಯ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ, ಯಾದವ ಶೆಟ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಪ್ರಾಂತ ರೈತ ಸಂಘ, ರಘು ಎಕ್ಕಾರು ಜಿಲ್ಲಾ ಸಂಚಾಲಕರು ದಲಿತ ಸಂಘರ್ಷ ಸಮಿತಿ, ಶರತ್ ಗುಡ್ಡೆಕೊಪ್ಲ ಮುಖಂಡರು, ನಾಡದೋಣಿ ಮೀನುಗಾರರ ಸಂಘ, ಚರಣ್ ಶೆಟ್ಟಿ, ಜಿಲ್ಲಾ ಅಧ್ಯಕ್ಷರು ಭಾರತ ವಿದ್ಯಾರ್ಥಿ ಫೆಡರೇಶನ್, ಸಂತೋಷ್ ಬಜಾಲ್, ಜಿಲ್ಲಾ ಕಾರ್ಯದರ್ಶಿ ಡಿವೈಎಫ್ಐ, ಓಸ್ವಾಲ್ಡ್ ಪ್ರಕಾಶ್ ಫೆರ್ನಾಂಡೀಸ್, ಬಂಟ್ವಾಳ ತಾಲೂಕು ಪ್ರಧಾನ ಕಾರ್ಯದರ್ಶಿ ಕರ್ನಾಟಕ ರಾಜ್ಯ ರೈತ ಸಂಘ ಮನವಿ ಮಾಡಿ ಕೊಂಡಿವೆ


Spread the love