ನವದೆಹಲಿ: ಗೋವಾದಲ್ಲಿ ಪೊಲೀಸರಂತೆ ನಟಿಸಿ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

Spread the love

ನವದೆಹಲಿ: ಪೊಲೀಸರಂತೆ ನಟಿಸಿದ ಯುವಕರ ಗುಂಪೊಂದು ಮಹಿಳೆಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿರುವ ಘಟನೆಯೊಂದು ಗೋವಾದ ಅಂಜುನಾ ಬೀಚ್ ಬಳಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅತ್ಯಾಚಾರಕ್ಕೊಳಗಾದ ಇಬ್ಬರು ಯುವತಿಯರು ದೆಹಲಿ ಮೂಲದವರಾಗಿದ್ದು, ರಜೆ ನಿಮಿತ್ತ ಬಾಡಿಗೆ ಕಾರೊಂದನ್ನು ನೇಮಿಸಿಕೊಂಡು ಗೋವಾದ ಅಂಜುನಾ ಬೀಚ್ ಗೆ ತೆರಳುತ್ತಿದ್ದರು. ಈ ವೇಳೆ ರಸ್ತೆಯ ಮಧ್ಯೆ 5 ಜನರ ಯುವಕರ ಗುಂಪೊಂದು ತಾವು ಮಾದಕದ್ರವ್ಯ ನಿಗ್ರಹ ಘಟಕದ ಪೊಲೀಸ್ ಅಧಿಕಾರಿಗಳು ಎಂದು ಹೇಳಿ, ಕಾರನ್ನು ನಿಲ್ಲಿಸಿದ್ದಾರೆ. ಯುವತಿಯರ ಬ್ಯಾಗ್ ಗಳನ್ನು ಶೋಧಿಸಿದ ಆರೋಪಿಗಳು, ನಂತರ ಗೋವಾದ ಅಂಜುನಾ ಬೀಚ್ ಬಳಿ ಇದ್ದ ಫ್ಲ್ಯಾಟ್ ಒಂದಕ್ಕೆ ಇಬ್ಬರು ಯುವತಿಯರು ಹಾಗೂ ಟ್ಯಾಕ್ಸಿ ಡ್ರೈವರ್ ರನ್ನು ಎಳೆದೊಯ್ದಿದ್ದಾರೆ. ಟ್ಯಾಕ್ಸಿ ಡ್ರೈವರ್ ಗೆ ಹೊಡೆದು ಬಡಿದು ಹಿಂಸೆ ನೀಡಿದ ಆರೋಪಿಗಳು ಹಣ ನೀಡುವಂತೆ ಪೀಡಿಸಿದ್ದಾರೆ. ಆದರೆ, ಡ್ರೈವರ್ ಸಬೂಬು ಹೇಳಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಡ್ರೈವರ್ ಸ್ಥಳದಿಂದ ಪರಾರಿಯಾದ ಮೇಲೆ ಆರೋಪಿಗಳು ಇಬ್ಬರು ಯುವತಿಯರ ಮೇಲೂ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ವೇಳೆ ಪರಾರಿಯಾದ ಡ್ರೈವರ್ ನಂತರ ಸ್ಥಳದಲ್ಲಿದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದರೆ, ಪೊಲೀಸರು ಸ್ಥಳಕ್ಕಾಗಮಿಸುವಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ನಂತರ ಯುವತಿಯರು ನೀಡಿದ ಮಾಹಿತಿಯಾಧಾರದ ಮೇಲೆ ತನಿಖೆ ಪ್ರಾರಂಭಿಸಿದ ಪೊಲೀಸರು,  ಇಂದು 5 ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಆರೋಪಿಗಳನ್ನು ಅಜಯ್ ಕುಮಾರ್ ಕುಶ್ವಾಹ (39), ಜೀವನ್ ಪವರ್ (26), ನದೀಮ್ ಖಾನ್ (28), ತ್ರೆಬೋನ್ ಜೋಸೆಫ್ (27) ಹಾಗೂ ಕಮ್ಲೇಶ್ ಚೌಧರಿ (21) ಎಂದು ಗುರ್ತಿಸಲಾಗಿದ್ದು,  ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಅಪಹರಣ ಹಾಗೂ ದರೋಡೆ ಪ್ರಕರಣಗಳು ದಾಖಲಾಗಿವೆ.

ಘಟನೆಯು ಸೋಮವಾರ ರಾತ್ರಿ 8.45ರ ಸುಮಾರಿಗೆ ನಡೆದಿದೆ. ಪೊಲೀಸರಂತೆ ನಟಿಸಿದ ಆರೋಪಿಗಳು ಫ್ಲ್ಯಾಟ್ ಗೆ ಕರೆದೊಯ್ದು ಮಹಿಳೆಯರ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ನಂತರ ಮಂಗಳವಾರ ಬೆಳಗಿನ ಜಾವ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ದೂರು ಬಂದ ಕೂಡಲೇ ಸ್ಥಳಕ್ಕೆ ಭೇಟಿ ನೀಡಲಾಯಿತು. ಆದರೆ, ಈ ವೇಳೆ ಆರೋಪಿಗಳು ಪರಾರಿಯಾಗಿದ್ದರು ಎಂಬುದು ತಿಳಿಯಿತು. ನಂತರ ಯುವತಿಯರು ನೀಡಿದ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಯಿತು.

ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಆರೋಪಿಗಳ ವಿರುದ್ಧ ಅತ್ಯಾಚಾರ, ದರೋಡೆ, ಅಪಹರಣ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೋವಾ ಪೊಲೀಸ್ ಅಧಿಕಾರಿ ಸುನಿಲ್ ಗರ್ಗ್ ತಿಳಿಸಿದ್ದಾರೆ.


Spread the love