ನಿರ್ವಸಿತರಿಗೆ ಜಿ+2 ಮಾದರಿ ವಸತಿ ಸಂಕೀರ್ಣ ನಿರ್ಮಾಣ ಪ್ರಗತಿಯಲ್ಲಿ – ಜೆ.ಆರ್. ಲೋಬೊ

Spread the love

ಮಂಗಳೂರು: ರಾಜೀವ್ ಗಾಂಧಿ ವಸತಿ ನಿರ್ಮಾಣ ಯೋಜನೆಯಡಿಯಲ್ಲಿ ಮಂಗಳೂರು ನಗರದ ಆರ್ಥಿಕವಾಗಿ ಹಿಂದುಳಿದ ವಸತಿ ರಹಿತ ಕುಟುಂಬಗಳಿಗೆ ಶಕ್ತಿನಗರದ ರಾಜೀವ್ ನಗರದಲ್ಲಿ ಜಿ+2 ಮಾದರಿಯಲ್ಲಿ ಬಹುಮಹಡಿ ವಸತಿ ಸಂಕೀರ್ಣವನ್ನು ನಿರ್ಮಿಸಲು ಈಗಾಗಲೇ ಉದ್ದೇಶಿಸಲಾಗಿದೆ. ಇದಕ್ಕಾಗಿ ಸುಮಾರು 7.5 ಎಕ್ರೆ ಜಮೀನನ್ನು ಗುರುತಿಸಿದ್ದು, ಜಮೀನಿನ ಸರ್ವೆ ಪ್ರಕ್ರಿಯೆಯು ಮುಕ್ತಾಯ ಹಂತದಲ್ಲಿರುತ್ತದೆ. ಈ ಯೋಜನೆಯಡಿ ವಸತಿ ಗೃಹ ನಿರ್ಮಿಸಲು ಪ್ರತಿ ಮನೆಗೆ ಸುಮಾರು ರೂ. 5.00 ಲಕ್ಷ ವೆಚ್ಚ ತಗಲಲಿರುವುದಾಗಿ ಅಂದಾಜಿಸಿ ಯೋಜನೆ ರೂಪಿಸಲಾಗಿದೆ. ಈ ಪೈಕಿ ಸುಮಾರು ರೂ. 3.00 ಲಕ್ಷದಷ್ಟು ಸರಕಾರವು ಧನಸಹಾಯ ನೀಡಲಿರುವುದು. ಉಳಿದ ರೂ. 2.00 ಲಕ್ಷ ಮೊತ್ತದಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ಸ್ವಲ್ಪ ಮೊತ್ತವನ್ನು ಭರಿಸಲು ಯೋಜಿಸಿದ್ದು, ಇದರಂತೆ ಉಳಿದ ಸುಮಾರು ರೂ. 1.00 ರಿಂದ 1.50 ಲಕ್ಷದಷ್ಟು ಮೊತ್ತವನ್ನು ಫಲಾನುಭವಿಗಳಿಗೆ ಬ್ಯಾಂಕುಗಳಿಂದ ಸಾಲದ ರೂಪದಲ್ಲಿ ವ್ಯವಸ್ಥೆ ಮಾಡಲು ಉದ್ದೇಶಿಸಿದೆ. ಈ ಕುರಿತು ಈಗಾಗಲೇ ಬ್ಯಾಂಕಿನ ಉನ್ನತ ಅಧಿಕಾರಿಗಳೊಂದಿಗೆ ಸಮಾಲೋಚನೆ ಸಭೆಯನ್ನು ನಡೆಸಲಾಗಿದ್ದು, ಬ್ಯಾಂಕಿನ ಅಧಿಕಾರಿಗಳು ಸಕಾರಾತ್ಮವಾಗಿ ಸ್ಪಂದಿಸಿರುವುದಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ತಿಳಿಸಿರುತ್ತಾರೆ.
ಈಗಾಗಲೇ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಕೊರಿ ಸುಮಾರು 3000 ಕ್ಕೂ ಮಿಕ್ಕಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಅರ್ಜಿಗಳನ್ನು ವಾರ್ಡುವಾರು ವಿಂಗಡಣೆ ಮಾಡಿದ್ದು, ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಪೂರಕ ಪ್ರಕ್ರಿಯೆಯು ಪ್ರಗತಿಯಲ್ಲಿರುತ್ತದೆ. ಇದೇ ಸಮಯದಲ್ಲಿ ಸದ್ರಿ ಯೋಜನೆಯ ಸಂಪೂರ್ಣವಾದ ಒಂದು ಯೋಜನಾ ವರದಿಯನ್ನು ತಂತ್ರಜ್ಞರು ಸಿದ್ಧಪಡಿಸಿದ್ದು, ಮಂಗಳೂರು ಮಹಾನಗರ ಪಾಲಿಕೆಯು ಇದನ್ನು ಪರಿಶೀಲಿಸಿ ಮಂಜೂರಾತಿಗಾಗಿ ಸರಕಾರಕ್ಕೆ ಕಳುಹಿಸಿರುತ್ತದೆ. ಈ ಯೋಜನೆಯಲ್ಲಿ ನಿರ್ಮಿಸಲಾಗುವ ವಸತಿ ಸಂಕೀರ್ಣಕ್ಕೆ ಬೇಕಾಗುವ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುದ್ದೀಪ, ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಯನ್ನು ಪ್ರತ್ಯೇಕವಾಗಿ ರೂಪಿಸಲಾಗಿದೆ. ಮಂಗಳೂರು ನಗರದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ವ್ಯವಸ್ಥಿತವಾದ ಹಾಗೂ ಸುಸಜ್ಜಿತವಾದ ಈ ವಸತಿ ಸಂಕೀರ್ಣದ ಯೋಜನೆಯು ವಿನೂತನ ಹಾಗೂ ಪ್ರಥಮ ಪ್ರಯೋಗವಾಗಿದ್ದು, ಸರಕಾರದ ಮಟ್ಟದಲ್ಲಿ ಮನವರಿಕೆ ಮಾಡಿ ಒಪ್ಪಿಗೆಯನ್ನು ಪಡೆದು ಅನುಷ್ಠಾನಿಸಬೇಕಾಗಿರುತ್ತದೆ. ಈ ಎಲ್ಲಾ ಪ್ರಕ್ರಿಯೆಗಳು ನಡೆಯಬೇಕಿದ್ದರೆ ಕಾಲಾವಕಾಶದ ಅಗತ್ಯವಿರುವುದಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಜೆ.ಆರ್. ಲೋಬೊ ರವರು ತಿಳಿಸಿರುತ್ತಾರೆ.


Spread the love