ಪಡುಕರೆ ಬೀಚ್ ನಲ್ಲಿ ಹೋಂ ಸ್ಟೇ ಆರಂಭ – ಪ್ರಮೋದ್ ಮಧ್ವರಾಜ್

Spread the love

ಪಡುಕರೆ ಬೀಚ್ ನಲ್ಲಿ ಹೋಂ ಸ್ಟೇ ಆರಂಭ – ಪ್ರಮೋದ್ ಮಧ್ವರಾಜ್

ಉಡುಪಿ : ಪಡುಕರೆ ಬೀಚ್ ನಲ್ಲಿ ಸ್ಥಳೀಯರ ಸಹಕಾರದೊಂದಿಗೆ ಹೋಂ ಸ್ಟೇ ಗಳನ್ನು ಆರಂಭಿಸುವ ಮೂಲಕ, ಸ್ಥಳೀಯರಿಗೆ ಉದ್ಯೋಗವಕಾಶ ಒಗದಿಸುವುದರ ಜೊತೆಗೆ ಆರ್ಥಿಕವಾಗಿ ಅಭಿವೃದ್ದಿಗೊಳಿಸಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ , ಮೀನುಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.

ಅವರು ಶನಿವಾರ , ಪಡುಕರೆ ಬೀಚ್ ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸುವ ಕುರಿತಂತೆ 77 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಪ್ರವಾಸೋದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಕೆಲವು ದೇಶಗಳಲ್ಲಿ ಪ್ರವಾಸೋದ್ಯಮದಿಂದಲೇ ಜನರು ಅಭಿವೃದ್ದಿ ಹೊಂದಿದ್ದಾರೆ , ಪಡುಕರೆಯಲ್ಲಿ ಹೋ ಸ್ಟೇ ಆರಂಭಿಸುವ ಮೂಲಕ ಸ್ಥಳಿಯರು ಮೀನುಗಾರಿಕೆಗಿಂತಲೂ ಹೆಚ್ಚಿನ ಲಾಭ ಪಡೆಯಲು ಸಾಧ್ಯವಿದೆ, ಈ ಪ್ರದೇಶದಲ್ಲಿ ಪ್ರವಾಸೋಧ್ಯಮ ಅಭಿವೃದ್ದಿಗಾಗಿ ಕೈಗೊಳ್ಳುವ ಕಾರ್ಯಕ್ರಮಗಳನ್ನು ವಾಣಿಜ್ಯೀಕರಣಗೊಳಿಸದೇ, ಸ್ಥಳೀಯ ಯುವಜನತೆಗೆ ವ್ಯವಹಾರ ಕೈಗೊಳ್ಳಲು ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಪಡುಕೆರೆಯಲ್ಲಿ ಸಾಹಸ ಕ್ರೀಡಾ ತರಬೇತಿ ಕೇಂದ್ರ ಆರಂಭಿಸಲು ಈಗಾಗಲೇ 2 ಎಕರೆ ಸ್ಥಳ ಗುರುತಿಸುವ ಕಾರ್ಯ ನಡೆದಿದ್ದು, ಪಡುಕರೆ ಬೀಚ್ ನನ್ನು ದೇಶದ ಪ್ರಮುಖ ಬೀಚ್ ಆಗಿ ಅಭಿವೃದ್ದಿಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ಪಡುತೋನ್ಸೆ ಯಿಂದ ಉದ್ಯಾವರದವರೆಗೆ ರಸ್ತೆ ನಿರ್ಮಿಸುವ ಮೂಲಕ ಈ ವಲಯವನ್ನು ಸಿ.ಆರ್.ಝೆಡ್ 2 ವಲಯಕ್ಕೆ ತರಲು ಪ್ರತ್ನಿಸಲಾಗುತ್ತಿದ್ದು, ಇದರಿಂದ ರಸ್ತೆ ಬದಿಯಲ್ಲಿನ ಮನೆಗಳಿಗೆ ಹಕ್ಕುಪತ್ರ ಪಡೆಯುವ ಕುರಿತಂತೆ ಡಿನೋಟೀಸ್ ನೀಡಲು ಸಾದ್ಯವಾಗಲಿದ್ದು, ಸ್ಥಳೀಯರು ರಸ್ತೆ ಅಭಿವೃಧ್ಧಿಗೆ ಸಹಕಾರ ನೀಡುವಂತೆ ಸಚಿವರು ಹೇಳಿದರು.

ಪ್ರಸ್ತುತ 77 ಲಕ್ಷ ರೂ ವೆಚ್ಚದಲ್ಲಿ ಪಡುಕರೆ ಬೀಚ್ ನಲ್ಲಿ ಮೂಲಭೂತ ಸೌಕರ್ಯಗಳು, ಶೌಚಾಲಯ ನಿರ್ಮಾಣ, ಗಜೇಬೋ ನಿರ್ಮಾಣ, ಗ್ರಾನೈಟ್ ಬೆಂಚ್ ಗಳ ನಿರ್ಮಾಣ, ಹೊಸ ಮಣ್ಣಿನ ರಸ್ತೆ ಕಾಮಗಾರಿ ಹಾಗೂ ಇಂಟರ್ ಲಾಕ್ ರಸ್ತೆ ಕಾಮಗಾರಿಗೆ ನಡೆಯಲಿದ್ದು, 2018 ರ ಜನವರಿ ಒಳಗೆ ಈ ಎಲ್ಲಾ ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಇನ್ನೂ ಹೆಚ್ಚಿನ ಕಾಮಗಾರಿಗೆ ಅಗತ್ಯ ಅನುದಾನ ಬಿಡುಗಡೆ ಸಂಬಂದ ರಾಜ್ಯದ ಪ್ರವಾಸೋದ್ಯಮ ಸಚಿವರನ್ನು ಕೋರಲಾಗುವುದು ಎಂದು ಪ್ರಮೋದ್ ಹೇಳಿದರು.

ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ ಸಂಧ್ಯಾ, ಸದಸ್ಯರಾದ ವಿಜಯ ಕುಂದರ್, ನಾರಾಯಣ ಕುಂದರ್, ಗಣೇಶ್ ನೇರ್ಗಿ, ಕೆ.ಆರ್.ಐ.ಡಿ.ಎಲ್ ನ ಕೃಷ್ಣ ಹೆಪ್ಸೂರ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಅನಿತಾ, ಸತೀಶ್ ಅಮಿನ್ ಪಡುಕರೆ ಮತ್ತಿತರರು ಉಪಸ್ಥಿತರಿದ್ದರು. ಪೌರಾಯುಕ್ತ ಮಂಜುನಾಥಯ್ಯ ಸ್ವಾಗತಿಸಿ, ವಂದಿಸಿದರು.


Spread the love