ಪರಿವರ್ತನಾ ಟ್ರಸ್ಟ್ ವತಿಯಿಂದ ಮಂಗಳಮುಖಿಯರಿಗೆ ಹೊಲಿಗೆ ಯಂತ್ರ ವಿತರಣೆ

Spread the love

ಪರಿವರ್ತನಾ ಟ್ರಸ್ಟ್ ವತಿಯಿಂದ ಮಂಗಳಮುಖಿಯರಿಗೆ ಹೊಲಿಗೆ ಯಂತ್ರ ವಿತರಣೆ

ಮಂಗಳೂರು: ಮಂಗಳಮುಖಿಯರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಯೆನಪೋಯ ಸಂಸ್ಥೆಯ ಸಹಯೋಗದೊಂದಿಗೆ ಮಂಗಳಮುಖಿಯರಿಗೆ ಹೊಲಿಗೆ ಯಂತ್ರ ವಿತರಿಸುವ ಕಾರ್ಯಕ್ರಮ ಟ್ರಸ್ಟಿನ ಕಚೇರಿಯಲ್ಲಿ ಶನಿವಾರ ಜರುಗಿತು.

ಸ್ವಾವಲಂಬಿಗಳಾಗಿ ಬದುಕಲು ಪ್ರಯತ್ನಿಸುತ್ತಿರುವ ಶ್ರೀನಿಧಿ ಮತ್ತು ಚಂದ್ರಕಲಾ ಇವರುಗಳಿಗೆ ಟ್ರಸ್ಟಿನ ಮ್ಯಾನೆಜಿಂಗ್ ಟ್ರಸ್ಟಿ ವಾಯ್ಲೆಟ್ ಪಿರೇರಾ ಹೊಲಿಗೆ ಯಂತ್ರಗಳನ್ನು ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ವಾಯ್ಲೆಟ್ ಪಿರೇರಾ ಅವರು ಪರಿವರ್ತನಾ ಚಾರೀಟೇಬಲ್ ಟ್ರಸ್ಟಿನ ಮುಖ್ಯ ಉದ್ದೇಶವೇ ಮಂಗಳಮುಖಯರನ್ನು ಸಮಾಜದ ಮುಖ್ಯವಾಹಿನಿಗೆ ತರುವುದಾಗಿದ್ದು, ಇದರ ಮೂಲಕ ಅವರುಗಳು ನೆಮ್ಮದಿಯ ಜೀವನವನ್ನು ಕಾಣುವಂತಾಗಬೇಕು. ಹತ್ತು ಮಂದಿ ಮಂಗಳಮುಖಿಯರಿಗೆ ಟೈಲರಿಂಗ್ ತರಬೇತಿಗೆ ಹೆಸರು ನೋಂದಾಯಿಸಿದ್ದು, ಆಸಕ್ತಿ ಹಾಗೂ ಇತರ ಕಾರಣಗಳಿಗಾಗಿ ಕೆಲವು ಮಂದಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ, ಸರಕಾರ ಹಲವಾರು ಯೋಜನೆಗಳನ್ನು ಮಂಗಳಮುಖಿಯರಿಗಾಗಿ ನೀಡುತ್ತಿದ್ದು ಅದರ ಸದುಪಯೋಗವನ್ನು ಪಡೆಯುವತ್ತ ಪ್ರಯತ್ನಿಸಬೇಕು. ಅದರ ಜೊತೆಯಲ್ಲಿಯೇ ಟ್ರಸ್ಟ್ ಕೂಡ ಮುಂದಿನ ದಿನಗಳಲ್ಲಿ ಟೈಲರಿಂಗ್ ಮತ್ತು ಬ್ಯೂಟಿಶೀಯನ್ ಕೋರ್ಸುಗಳನ್ನು ಆರಂಭಿಸಲಿದ್ದು ಆಸಕ್ತರು ಇದರಲ್ಲಿ ಭಾಗವಹಿಸಬಹುದು. ಟ್ರೈಲರಿಂಗ್ ಯಂತ್ರಗಳನ್ನು ಪಡೆದ ಫಲಾನುಭವಿಗಳು ಅದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಮತ್ತು ಇದಕ್ಕಾಗಿ ಪ್ರಾಯೋಜಕತ್ವ ನೀಡಿದ ಯೆನಪೋಯ ಸಂಸ್ಥೆಯ ಚಾನ್ಸಲರ್ ಅಬ್ದುಲ್ ಕುಞ ಅವರಿಗೆ ಉದಾರ ಮನಸ್ಸಿಗೆ ಧನ್ಯವಾದಗಳು ಎಂದರು.

ಟ್ರಸ್ಟಿನ ಇನ್ನೋರ್ವ ಟ್ರಸ್ಟಿ ಆಶಾ ನಾಯಕ್ ಮಾತನಾಡಿ ಮಂಗಳಮುಖಿಯರನ್ನು ನಾವೆಲ್ಲಾ ಎಲ್ಲರಂತೆಯೇ ಮನುಷ್ಯರು ಎಂದು ಭಾವಿಸಿದ್ದೇವೆ. ಹೇಗೆ ದೇವರು ಪ್ರತಿಯೊಬ್ಬರಿಗೂ ಸಮಾನರೋ ಅದರಂತೆಯೇ ಪ್ರತಿಯೊಬ್ಬ ಮನುಷ್ಯ ಜೀವಿಯನ್ನು ಕೂಡ ನಾವು ಸಮಾನವಾಗಿ ಗೌರವಿಸಲೇಬೇಕು. ಆದರೆ ವಿಷಾದದ ಸಂಗತಿಯೆಂದರೆ ಮಂಗಳಮುಖಿಯರು ಹಲವಾರು ಸಮಸ್ಯೆಗಳನ್ನು ಸಮಾಜದಲ್ಲಿ ಎದುರಿಸುತ್ತಿದ್ದು, ಅವರೂ ಕೂಡ ಶೀಘ್ರದಲ್ಲಿಯೇ ಗೌರವದ ಬದುಕು ಕಾಣುವಂತಾಗಲಿ ಅಲ್ಲದೆ ಎಲ್ಲಾ ಸೌಲಭ್ಯಗಳು ಲಭಿಸುವಂತಾಗಲಿ ಈ ನಿಟ್ಟಿನಲ್ಲಿ ಪರಿವರ್ತನಾ ಟ್ರಸ್ಟ್ ಸಹಕಾರ ನೀಡಲಿದ್ದು, ಪ್ರತಿಯೊಬ್ಬ ಮಂಗಳಮುಖಿಯರ ಸಹಕಾರ ಅಗತ್ಯವಿದೆ ಎಂದರು.

ಮುಂದುವರೆಸಿ ಮಾತನಾಡಿದ ಅವರು ಟ್ರಸ್ಟ್ ಮಂಗಳಮುಖಿಯರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಹೆಚ್ಚು ಉತ್ಸುಕತೆಯಿಂದ ಕೆಲಸ ಮಾಡಲಿದ್ದು ಶೀಘ್ರವೇ ಮಂಗಳಮುಖಿಯರು ಕೂಡ ಸಮಾಜದ ಒಂದು ಭಾಗವಾಗಲಿದ್ದಾರೆ. ಬೇರೆ ದೇಶಗಳಲ್ಲಿ ಹೇಗೆ ಮಂಗಳಮುಖಿಯರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆಯೋ ಅದರಂತೆ ನಮ್ಮ ದೇಶದಲ್ಲಿ ಕೂಡ ಅದು ನಡೆಯಬೇಕು ಈ ನಿಟ್ಟಿನಲ್ಲಿ ಯಾವುದೇ ರೀತಿಯ ಭೇಧಭಾವ ಕೂಡ ಸಲ್ಲದು ಎಂದರು.

ಫಲಾನುಭವಿ ಶ್ರೀನಿಧಿ ಮಾತನಾಡಿ ಮಂಗಳೂರಿಗೆ ವರ್ಷಗಳ ಹಿಂದೆ ಕಾಲಿಟ್ಟಾಗ ನಮಗೆ ಯಾವುದೇ ರೀತಿಯ ಸೌಲಭ್ಯಗಳು ಇದ್ದಿಲ್ಲ ಅಲ್ಲದೆ ಸರಕಾರ ಕೂಡ ನಮ್ಮನ್ನು ಗುರುತಿಸಲಿಲ್ಲ. ಸಮಾಜ ಕೂಡ ನಮ್ಮನ್ನೂ ಬೇರೆಯದೇ ದೃಷ್ಟಿಯಿಂದ ಕಾಣುತ್ತಿತ್ತು. ವಾಯ್ಲೆಟ್ ಪಿರೇರಾ ಅವರ ನೇತೃತ್ವದಲ್ಲಿ ಆರಂಭವಾದ ಪರಿವರ್ತನ ಟ್ರಸ್ಟಿನ ಸದಸ್ಯರಾದ ಬಳಿಕ ನಮಗೆ ಸಮಾಜದಲ್ಲಿ ಗುರುತಿಸುವಂತಾಯಿತು. ವಾಯ್ಲೆಟ್ ಪಿರೇರಾ ಅವರ ನೇತ್ರತ್ವದಲ್ಲಿ ವೈದ್ಯಕೀಯ ಚಿಕಿತ್ಸಾ ಶಿಬಿರ, ಟೈಲರಿಂಗ್ ತರಬೇತಿ ಪಡೆಯಲು ಸಾಧ್ಯವಾಯಿತು. ನಾವು ಕಲಿತ ತರಬೇತಿಗೆ ಸಹಕಾರಿಯಾಗುವಂತೆ ಟೈಲರಿಂಗ್ ಯಂತ್ರಗಳನ್ನು ಕೂಡ ಒದಗಿಸಿಕೊಟ್ಟಿದ್ದಾರೆ ಇದು ನಮಗೆ ಸಂತೋಷ ತಂದಿದೆ ಎಂದರು.

 ಟ್ರಸ್ಟಿನ ಕಾರ್ಯದರ್ಶಿ ಸಂಜನಾ ಮಾತನಾಡಿ ನಾವು ಟ್ರಸ್ಟಿಗೆ ಸೇರುವ ಮೊದಲು ನಮ್ಮನ್ನು ಕಂಡು ಜನ ಒಡುತ್ತಿದ್ದು ಈಗ ನಾವು ಎಲ್ಲಾ ರೀತಿಯ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ. ಟ್ರಸ್ಟಿನ ಮೂಲಕ ಆರೋಗ್ಯ ತಪಾಸಣೆ, ಆರೋಗ್ಯ ಕಾರ್ಡ್ ಪಡೆಯಲು ಸಾಧ್ಯವಾಗಿದೆ. ಈ ಮೊದಲು ಜನರು ನಮಗೆ ಮನೆಯನ್ನು ಬಾಡಿಗೆ ನೀಡಲು ಕೂಡ ಹಿಂಜರಿಯುತ್ತಿದ್ದರು ಆದರೆ ಟ್ರಸ್ಟಿನ ಸದಸ್ಯರಾದ ಬಳಿಕ ಅಂತಹ ಸಮಸ್ಯೆ ನಮಗೆ ಬಂದಿಲ್ಲ ಎಂದರು.

 ಟ್ರಸ್ಟಿನ ಸದಸ್ಯರಾದ ಡಾ ಆಶಾಜ್ಯೋತಿ ರೈ, ಜೇನ್ ಸಿಕ್ವೇರಾ, ಸಮಾಜ ಸೇವಕಿ ಗೀತಾ ಹಾಗೂ ಇತರರು ಉಪಸ್ಥಿತರಿದ್ದರು.

 


Spread the love