ಪರೇಶ್ ಮೇಸ್ತ ಸಾವು: ವದಂತಿಗಳು ಸುಳ್ಳು – ಐಜಿಪಿ ನಿಂಬಾಳ್ಕರ್; ಪೋಸ್ಟ್ ಮಾರ್ಟಮ್ ನಡೆಸಿದ ವೈದ್ಯರ ವರದಿಯಲ್ಲಿ  ಬಹಿರಂಗ!

Spread the love

ಪರೇಶ್ ಮೇಸ್ತ ಸಾವು: ವದಂತಿಗಳು ಸುಳ್ಳು – ಐಜಿಪಿ ನಿಂಬಾಳ್ಕರ್; ಪೋಸ್ಟ್ ಮಾರ್ಟಮ್ ನಡೆಸಿದ ವೈದ್ಯರ ವರದಿಯಲ್ಲಿ  ಬಹಿರಂಗ!

ಹೊನ್ನಾವರ: ಹೊನ್ನಾವರದ ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತ ಸಾವು ಪ್ರಕರಣಕ್ಕೆ ಸಂಬಂಧಿಸಿ ರಾಜಕೀಯ ಪಕ್ಷವೊಂದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಸಂಪೂರ್ಣ ಸುಳ್ಳಾಗಿದ್ದು, ವೈಯುಕ್ತಿಕ ಹಿತಾಸಕ್ತಿಗಳಿಗಾಗಿ ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಹಾಗೂ ಕೋಮು ಭಾವನೆಯನ್ನು ಕೆರಳಿಸಲು ನಡೆಸಿರುವ ಷಡ್ಯಂತ್ರವಾಗಿದೆ ಎಂದು ಸದ್ಯ ಕುಮಟಾದಲ್ಲಿ ಮೊಕ್ಕಾಂ ಹೂಡಿರುವ ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಕುಮಟಾದಿಂದ ಸಾಕ್ಷಸಹಿತಿ ಪ್ರಕಟಣೆ ಹೊರಡಿಸಿರುವ ನಿಂಬಾಳ್ಕರ್ ಅವರು ಪ್ರಮುಖ ರಾಜಕೀಯ ಪಕ್ಷವೊಂದು ಡಿಸೆಂಬರ್ 9 ರಂದು ಹೊರಡಿಸಿದ ಮಾಧ್ಯಮ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಪರೇಶ್ ಮೇಸ್ತ ಅವರನ್ನು ಅಮಾನವೀಯವಾಗಿ ನಡೆಸಿಕೊಂಡು ಕೊಲ್ಲಲಾಗಿದೆ ಎಂಬ ವದಂತಿಗಳು ಹಬ್ಬಿದ್ದು, ಮಾಡಿದ ಪ್ರತಿಯೊಂದು ಆರೋಪಗಳನ್ನು ತನಿಖಾಧಿಕಾರಿಗಳು ಕಲೆ ಹಾಕಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲದ ವೈದ್ಯರಿಗೆ ಕಳುಹಿಸಲಾಗಿತ್ತು. ಈ ಪ್ರಶ್ನೆಗಳಿಗೆ ವ್ಯೆದ್ಯರು ಉತ್ತರಿಸಿ ಸತ್ಯಾಂಶವನ್ನು ಜನತೆಗೆ ತಿಳಿಸುವ ಉದ್ದೇಶದಿಂದ ಪ್ರಕಟಿಸಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮ ಪ್ರಕಟಣೆಯಲ್ಲಿ ಮಾಡಿರುವ ಆರೋಪಗಳು ಅಪ್ಪಟ ಸುಳ್ಳು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಪೋಲಿಸರು ಕಳುಹಿಸಿರುವ ಒಟ್ಟು 19 ಪ್ರಶ್ನೆಗಳಿಗೆ ವಿಧಿವಿಜ್ಞಾನ ತಜ್ಞ ವೈದ್ಯರು ಉತ್ತರಿಸಿದ್ದು, ಹತ್ಯೆಗೆ ಯಾವುದೇ ರೀತಿಯ ಬಿಸಿ ನೀರು, ಆ್ಯಸಿಡ್ ಬಳಸಲಾಗಿಲ್ಲ. ಅಲ್ಲದೆ ಪರೇಶ್ ಮೇಸ್ತನ ಬಲ ತೋಳಿನಲ್ಲಿದ್ದ ಶಿವಾಜಿ ಫೋಟೊದ ಟ್ಯಾಟೋವನ್ನು ಕೂಡ ಅಳಸಲಾಗಿಲ್ಲ ಮತ್ತು ದೇಹದ ಮೇಲೆ ಆಯುಧ ಬಳಸಿ ಗಾಯ ಮಾಡಿರುವ ಬಗ್ಗೆ ಯಾವುದೇ ಗುರುತುಗಳಿಲ್ಲ. ಸಹಜ ಪ್ರಕ್ರಿಯೆಯಿಂದಾಗಿ ದೇಹವು ಕಪ್ಪುಬಣ್ಣಕ್ಕೆ ತಿರುಗಿದ್ದು, ದೇಹದ ಮೇಲೆ ಯಾವುದೇ ರೀತಿಯ ರಕ್ತದ ಕಲೆಗಳು ಇಲ್ಲ ಎಂದು ವೈದ್ಯರು ಉತ್ತರಿಸಿದ್ದಾರೆ. ಮೇಸ್ತನ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ, ತಲೆಗೆ ಹೊಡೆದು ಕೊಲೆ ಮಾಡಿದ ಯಾವುದೇ ರೀತಿಯ ಕುರುಹು ಲಭಿಸಿಲ್ಲದ ಕಾರಣ ಇದನ್ನು ಹತ್ಯೆ ಅಲ್ಲ ಎನ್ನುವ ಅಭಿಪ್ರಾಯವನ್ನು ವೈದ್ಯರು ಹೇಳಿದ್ದಾರೆ.

ಪಕ್ಷವೊಂದು ನೀಡಿದ ಮಾಧ್ಯಮ ಹೇಳಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ವೈಯುಕ್ತಿಕ ಹಿತಾಸಕ್ತಿಗಾಗಿ ಅಮಾಯಕ ಮನಸ್ಸುಗಳನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ತಂತ್ರವಾಗಿದೆ ಎಂದು ನಿಂಬಾಳ್ಕರ್ ತಿಳಿಸಿದ್ದಾರೆ.

ಹೊನ್ನಾವರದಲ್ಲಿ ನಡೆದ ಕೋಮು ಗಲಭೆಗೆ ಪ್ರಚೋದನೆ ನೀಡಿದವರು ಹಾಗೂ ಕುಮಟಾದಲ್ಲಿ ಸಿಬಂದಿಯೊಬ್ಬರ ಮೇಲೆ ನಡೆದ ಹಲ್ಲೆಯ ಹಿಂದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


Spread the love

2 Comments

Comments are closed.