ಪುತ್ತೂರು ದೇವಸ್ಥಾನದ ಜಾತ್ರಾ ಆಮಂತ್ರಣ ಪತ್ರಿಕೆ ವಿವಾದ ಸೃಷ್ಟಿಗೆ ಸಿಪಿಐ(ಎಂ) ಖಂಡನೆ

Spread the love

ಮಂಗಳೂರು: ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಆಮಂತ್ರಣ ಪತ್ರಿಕೆಯನ್ನು ರಾಜ್ಯ ಸರ್ಕಾರದ ಮುಜರಾಯಿ ಮತ್ತು ಧಾಮಿಕ ದತ್ತಿ ಇಲಾಖೆ ಹಾಗೂ ಜಿಲ್ಲಾಡಳಿತದ ಪರವಾಗಿ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಹೆಸರಲ್ಲಿ ಕಾನೂನುಬದ್ಧವಾಗಿಯೇ ಮುದ್ರಿಸಲಾಗಿದ್ದರೂ, ಸಂಘ ಪರಿವಾರದ ಸಂಘಟನೆಗಳು ಅನಗತ್ಯವಾಗಿ ವಿವಾದವನ್ನು ಸೃಷ್ಟಿಮಾಡಿ ಕೋಮುದ್ವೇಷವನ್ನು ಹುಟ್ಟುಹಾಕಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂಬುದಾಗಿ ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿ ಹೇಳಿಕೆ ನೀಡಿದೆ.
ವಿವಿಧ ಜಾತಿ ಮತಗಳ ಜಾತ್ರೆ ಉತ್ಸವಗಳಲ್ಲಿ ಕಾಲಾದಿಯಿಂದಲೂ ಇರುವ ಸೌಹಾರ್ದ ಹಾಗೂ ಸಂಭ್ರಮದ ವಾತಾವರಣವನ್ನು ಕೆಲವರು ಕೆಡಿಸುತ್ತಿರುವುದು ಕಳವಳಕಾರಿ ಹಾಗೂ ಸಂಘ ಪರಿವಾರದ ಕೀಳು ರಾಜಕಾರಣವನ್ನು ಜನತೆ ಮನವರಿಕೆ ಮಾಡಿಕೊಂಡು ಅದನ್ನು ತಿರಸ್ಕರಿಸಬೇಕೆಂದು ಸಿಪಿಐ(ಎಂ) ವಿನಂತಿಸುತ್ತದೆ.
ಜಿಲ್ಲಾಧಿಕಾರಿಯಾಗಿ ಎ.ಬಿ. ಇಬ್ರಾಹಿಂ ಅವರು ಯಾವೊಂದೂ ಜಾತಿ ಮತಗಳಿಗೆ ಪಕ್ಷಪಾತ ವಹಿಸದೆ ಕಾರ್ಯನಿರ್ವಹಿಸುತ್ತಿದ್ದು, ಕಾನೂನುಬದ್ಧವಾಗಿ ಜಿಲ್ಲಾಧಿಕಾರಿಯಾಗಿ ಅವರು ಪುತ್ತೂರು ಜಾತ್ರೆಯ ಆಹ್ವಾನ ನೀಡಿರುತ್ತಿದ್ದಾರೆ. ಪತ್ರಿಕಾ ಹೇಳಿಕೆ ಮೂಲಕ ಜನತಗೆ ಶಾಂತಿಯನ್ನು ಕಾಪಾಡಬೇಕೆಂದೂ ವಿನಂತಿಸಿರುತ್ತಾರೆ. ಸರಕಾರದ ಪರವಾಗಿ ಅವರು ದಿಟ್ಟತನದಿಂದ ಕರ್ತವ್ಯ ನಿರ್ವಹಿಸಲು ಜಿಲ್ಲೆಯ ಜನತೆ ಅವಕಾಶ ಮಾಡಿಕೊಡಬೇಕು ಹಾಗೂ ಪುತ್ತೂರು ದೇವಾಲಯದ ಭಕ್ತಾದಿಗಳು ಯಾವ ಭಯವೂ ಇಲ್ಲದೆ ಜಾತ್ರೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಬೇಕು; ಅಲ್ಲದೆ ಸಂಘ ಪರಿವಾರದ ಸುಳ್ಳು ಪ್ರಚಾರಗಳಿಗೆ ಬಲಿಬೀಳಬಾರದು ಎಂಬುದಾಗಿ ಸಿಪಿಐ(ಎಂ) ದ.ಕ. ಜಿಲ್ಲಾ ಸಮಿತಿಯ ಪರವಾಗಿ ಕಾರ್ಯದರ್ಶಿ ವಸಂತ ಆಚಾರಿ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.


Spread the love