ಪೇಜಾವರ ಸ್ವಾಮಿ ವಿರುದ್ದ ಪ್ರತಿಭಟನೆ; ಕ್ಯಾ ಗಣೇಶ್ ಕಾರ್ಣಿಕ್ ಖಂಡನೆ

Spread the love

ಪೇಜಾವರ ಸ್ವಾಮಿ ವಿರುದ್ದ ಪ್ರತಿಭಟನೆ; ಕ್ಯಾ ಗಣೇಶ್ ಕಾರ್ಣಿಕ್ ಖಂಡನೆ

ಉಡುಪಿ: ಸಾಮಾಜಿಕ ಸೌಹಾರ್ದ ಹಾಗೂ  ಮತೀಯ  ಸಾಮರಸ್ಯವೇ ಇಂದಿನ ಅತ್ಯಂತ ಪ್ರಮುಖ ಅವಶ್ಯಕತೆ  ಎಂದು ನಂಬಿ ರಂಜಾನ್ ಹಬ್ಬದ ಸಮಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಂಧುಗಳನ್ನು ಮಠಕ್ಕೆ ಆಹ್ವಾನಿಸಿ, ಪ್ರಸಾದ ನೀಡಿ ಆಶೀರ್ವದಿಸಿದ ಉಡುಪಿಯ ಪರ್ಯಾಯ ಮಠಾಧೀಶರಾದ ಪರಮಪೂಜ್ಯ ಶ್ರೀ ವಿಶ್ವೇಶ್ವತೀರ್ಥ ಸ್ವಾಮೀಜಿಯವರ ಸಮಯೋಚಿತ ಪುಣ್ಯ ಕಾರ್ಯಕ್ಕೆ  ಮತೀಯ ಬಣ್ಣ ಕಟ್ಟಿ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಅನಪೇಕ್ಷಣಿಯ ಎಂದು ಕರ್ನಾಟಕ ವಿಧಾನಪರಿಷತ್ ಮುಖ್ಯ ಸಚೇತಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಿಡಿಕಾರಿದ್ದಾರೆ.

ಸ್ವಾಮೀಜಿಯವರು ಕಳೆದ 6 ದಶಕಗಳಿಂದಲೂ ಇಡೀ ರಾಷ್ಟ್ರವೇ ಗೌರವಿಸುವಂತಹ ರೀತಿಯಲ್ಲಿ ತಮ್ಮನ್ನು ಸಮಾಜದ ಸಂಘಟನೆಯಲ್ಲಿ  ತೊಡಗಿಸಿಕೊಂಡಿದ್ದು, ಸಮಸ್ತ ಸಮುದಾಯಗಳ ನಡುವೆ ಸಾಮರಸ್ಯ ಹಾಗೂ ಏಕತೆಗೆ ಶ್ರಮಿಸಿದವರಾಗಿದ್ದಾರೆ.  ದಲಿತ ಕೇರಿಗಳಿಗೆ ಪಾದಯಾತ್ರೆ ನಡೆಸುವ ಮೂಲಕ ಹಿಂದೂ ಸಮಾಜದಲ್ಲಿ ಮೇಲು ಕೀಳು ಎಂಬ ಭಾವನೆಯ ನಿವಾರಣೆಗೆ ಶ್ರಮಿಸುತ್ತಾ, ಹಿಂದೂ ಸಮಾಜದ ಸಂಘಟನೆಗೆ ಅಹರ್ನಿಶಿ ದುಡಿಯುತ್ತಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದ ಬಂಧುಗಳಿಗೆ ಉಡುಪಿ ಶ್ರೀ ಕೃಷ್ಣ ಮಠದ ಬಗ್ಗೆ ಅಪಾರ ಗೌರವವಿದ್ದು, ಪರ್ಯಾಯದ ಸಂದರ್ಭದಲ್ಲಿ ಈ ಸಮುದಾಯ ಹಲವಾರು ವರ್ಷಗಳಿಂದ ಪೂರ್ಣ ಸಹಕಾರ ನೀಡುತ್ತಾ ಬಂದಿದೆ. ಸಮಾಜದಲ್ಲಿ ಶಾಂತಿ, ಸಹಬಾಳ್ವೆಯನ್ನು ಬೋಧಿಸುವುದರೊಂದಿಗೆ ಅದನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವ ಮೂಲಕ ಪೂಜ್ಯಶ್ರೀಗಳು ಎಲ್ಲಾ ಸಮುದಾಯಗಳಿಗೂ ಮಾದರಿಯಾಗಿದ್ದಾರೆ.  ಕೆಲವು ನಾಯಕರು ಕ್ಷುಲಕ ವಿವಾದವೆಬ್ಬಿಸುವ ಮೂಲಕ ಗೊಂದಲ ಸೃಷ್ಟಿಸುತ್ತಾ, ಶ್ರೀಗಳ ಬಗ್ಗೆ ಕ್ಷುಲ್ಲಕವಾಗಿ ಮಾತನಾಡಿರುವುದನ್ನು ಅತ್ಯಂತ ಕಟು ಶಬ್ದಗಳಿಂದ ಖಂಡಿಸುತ್ತೇನೆ.

ಶ್ರೀಗಳು ಈ ವಿವಾದದಿಂದ ಬೇಸರಗೊಳ್ಳದೆ ಸಮಾಜದ ಉನ್ನತಿಗೆ ಹಾಗೂ ಸಮುದಾಯಗಳ ನಡುವಿನ ದ್ವೇಷವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಇಡೀ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಾ ನಮ್ಮೆಲ್ಲರನ್ನು ಆಶೀರ್ವದಿಸುವಂತೆ  ಪ್ರಕಟಣೆಯ ಮೂಲಕ ವಿನಂತಿಸಿದ್ದಾರೆ.


Spread the love