ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರ; ಚರ್ಚೆಗೆ ಸಿದ್ದ – ಪೇಜಾವರ ಸ್ವಾಮೀಜಿ

Spread the love

ಪ್ರತ್ಯೇಕ ಲಿಂಗಾಯಿತ ಧರ್ಮ ವಿಚಾರ; ಚರ್ಚೆಗೆ ಸಿದ್ದ – ಪೇಜಾವರ ಸ್ವಾಮೀಜಿ

ಉಡುಪಿ: ಲಿಂಗಾಯತರು ಹಿಂದೂ ಧರ್ಮ ತೊರೆಯದಿರಿ ಎಂದು ನಾನು ಹೇಳಿರುವುದು ಭಯದಿಂದ ಅಲ್ಲ ಹಿಂದೂ ಧರ್ಮ ದುರ್ಬಲವಾಗಬಾರದು ಎಂಬ ಕಾರಣಕ್ಕೆ ಈ ರೀತಿ ಹೇಳಿದ್ದು, ಇದರಲ್ಲಿ ಯಾವುದೇ ವೈಯುಕ್ತಿಕ ಸ್ವಾರ್ಥ ಇಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ನಿವೃತ್ತ ಐಎಎಸ್ ಅಧಿಕಾರಿ ಡಾ.ಎಸ್.ಎಂ.ಜಾಮದಾರ ತನ್ನ ವಿರುದ್ದ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಶ್ರೀಗಳುಈ ಬಗ್ಗೆ ಜಾಮದಾರರು ಆಹ್ವಾನಿಸಿದಂತೆ ನಾನು ಚರ್ಚೆಗೆ ಸಿದ್ದನಿದ್ದೇನೆ. ಆದರೆ ನಾನು ಪರ್ಯಾಯದಲ್ಲಿ ಇರುವುದರಿಂದಉಡುಪಿಯಿಂದ ಹೊರಗೆ ಹೋಗುವಂತಿಲ್ಲ. ಉಡುಪಿಯಲ್ಲಿಯೇ ಚರ್ಚೆಗೆ ಏರ್ಪಾಡು ಮಾಡಲು ನಾನು ಸಿದ್ದನಿದ್ದೇನೆ. ಜನವರಿ 18ರ ನಂತರ ವಿಧಾನ ಸೌದದ ಹಾಲಿನಲ್ಲಿ ಚರ್ಚೆಗೆ ಸಿದ್ಧನಿದ್ದೇನೆ ಎಂದು ಪ್ರತಿಕ್ರಿಸಿದ್ದಾರೆ.

ನಾನು ಲಿಂಗಾಯಿತ ಧರ್ಮವು ಹಿಂದೂ ಧರ್ಮದಿಂದ ಬೇರೆಯಲ್ಲವೆಂದು ಹೇಳಿರುವುದು ಶ್ರೀಯುತ ಜಾಮದಾರರು ಹೇಳಿದಂತೆ ಭಯದಿಂದ ಅಥವಾ ವಿರೋಧ ಭಾವನೆಯಿಂದ ಅಲ್ಲ. ಲಿಂಗಾಯಿತರ ಮೇಲಿನ ಪ್ರೀತಿ ಅಭಿಮಾನಗಳಿಂದ ಮಾತ್ರ. ನಾಡಿನ ಉದ್ದಗಲಕ್ಕೂ ಲಿಂಗಾಯಿತರು ನನ್ನಲ್ಲಿ ವಿಶೇಷ ಅಭಿಮಾನ ಆತ್ಮೀಯತೆಯನ್ನು ತೋರುತ್ತಿದ್ದಾರೆ ಹಿಂದೂ ದರ್ಮದ ಬಗ್ಗೆ ಯಾವಾಗಲೂ ಹೋರಾಡುವವರೆಂದು ನಮ್ಮನ್ನು ಅಭಿನಂದಿಸುತ್ತಿದ್ದಾರೆ. ಅಂತಹ ಲಿಂಗಾಯಿತರು ಹಿಂದೂ ಧರ್ಮದಿಂದ ದೂರವಾಗಬಾರದು ನಮ್ಮ ಜೊತೆಗೇ ಇರಬೇಕೆಂಬ ಕಳಕಳಿಯಿಂದ. ಅವರು ಬೇರೆಯಾದರೆ ಹಿಂದೂ ಧರ್ಮಕ್ಕೆ ಕರ್ನಾಟಕದಲ್ಲಿ ಬಲ ಕಡಿಮೆಯಾಗುತ್ತದೆಂಬುದೂ ಇನ್ನೊಂದು ಕಾರಣ.

ಲಿಂಗಾಯಿತ ಧರ್ಮದಲ್ಲಿ ಏಕದೇವತೋಪಾಸನೆಯಿದೆ, ಪುನರ್ಜನ್ಮವಿಲ್ಲ ಮುಂತಾದ ಕಾರಣಗಳಿಂದ ಅದು ಹಿಂದೂ ಧರ್ಮದಿಂದ ಬೇರೆಯೆಂದು ವಾದಿಸಿದ್ದಾರೆ. ಇದು ಸರಿ ಇಲ್ಲ. ಲಿಂಗಾಯಿತರು ಶಿವನೊಬ್ಬನೇ ಪರದೈವವೆಂದು ಹೇಳಿದ್ದರೆ, ವೈಷ್ಣವರು ವಿಷ್ಣುವೆ ಪರದೈವವೆಂದು ಹೇಳಿದರು. ಅದ್ವೈತಮತವು ಪರಬ್ರಹ್ಮನನ್ನೊಬ್ಬನನ್ನೇ ಹೇಳಿದೆ. ಹೀಗೆ ಹಿಂದೂ ಧರ್ಮದ ಎಲ್ಲಾ ಪಂಗಡಗಳೂ ಏಕದೇವತೋಪಾಸನೆಯನ್ನು ಸಮರ್ಥಿಸಿದ್ದಾರೆ. ಪುನರ್ಜನ್ಮವನ್ನು ಬಸವಣ್ಣನವರೂ ಒಪ್ಪಿದ್ದಾರೆ. ಕೆಲವು ಅಪರಾಧಗಳನ್ನು ಮಾಡಿದರೆ ಏಳೇಳು ಜನ್ಮಗಳಲ್ಲಿ ನಾಯಿಯಾಗಿ, ಹಂದಿಯಾಗಿ ಹುಟ್ಟುತ್ತಾರೆಂದು ಅವರ ವಚನಗಳಲ್ಲಿ ಸ್ಪಷ್ಟವಾದ ವಾಕ್ಯಗಳಿವೆ. ಸ್ಥಾವರದ ಮಹತ್ವವನ್ನು ಎಲ್ಲರೂ ಅಲ್ಲಗಳೆದಿದ್ದಾರೆ. ಬಸವಣ್ಣವರು ಕೂಡಲಸಂಗಮ ದೇವರಿಗೆ ಅತ್ಯಂತ ಮಹತ್ವ ನೀಡಿದ್ದಾರೆ. ಲಿಂಗಪೂಜೆಯೂ ಲಿಂಗಾಯಿತರಿಗೆ ಸೀಮಿತವಲ್ಲ. ಆಸೇತು ಹಿಮಾಚಲದಲ್ಲಿ ಎಲ್ಲಾ ಶಿವದೇವಾಲಯಗಳಲ್ಲಿ ಲಿಂಗವನ್ನೇ ಪೂಜಿಸುತ್ತಾರೆ. ಹಿಂದುಗಳಲ್ಲದವರು ಯಾರೂ ಲಿಂಗಪೂಜೆಯನ್ನು ಮಾಡುವುದಿಲ್ಲ. ಕೇವಲ ಜಾತಿ ಪದ್ಧತಿಯಿಲ್ಲ ಎಂಬ ಕಾರಣದಿಂದ ಲಿಂಗಾಯಿತ ಧರ್ಮವನ್ನು ಹಿಂದೂ ಧರ್ಮದಿಂದ ಬೇರ್ಪಡಿಸುವುದು ಸರಿಯಲ್ಲ. ಹಿಂದೂ ಧರ್ಮದಲ್ಲಿ ಜಾತಿ ಪದ್ದತಿಯನ್ನು ನಿರಾಕರಿಸಿದ ಅನೇಕ ಪಂಗಡಗಳಿವೆಯೆಂಬುದಕ್ಕೆ ಅನೇಕ ಉದಾಹರಣೆಗಳನ್ನು ನಿನ್ನೇಯೇ ತಿಳಿಸಿದ್ದೇನೆ. ಲಿಂಗಾಯಿತರು ಹಿಂದೂಧರ್ಮದಿಂದ ಶತಮಾನಗಳಿಂದ ಬೇರೆಯಾಗಿ ಇದ್ದಾರೆಂದು ಜಾಮದಾರರು ಹೇಳಿದುದು ಸರಿಯಲ್ಲ. ವಿಶ್ವ ಹಿಂದೂ ಪರಿಷತ್ತಿನ ಸಮಾವೇಶಗಳಲ್ಲಿ ಲಿಂಗಾಯಿತರು ವಿಶೇಷ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ. 1968 ಹಾಗೂ 1985ರ ಹಿಂದೂ ಸಮವೇಶ ಮತ್ತು ಧರ್ಮ ಸಂಸತ್ ಗಳಲ್ಲಿ ಈಗಿನ ಸಿದ್ದಗಂಗಾ ಸ್ವಾಮಿಗಳು, ಹಿಂದಿನ ಸುತ್ತೂರು ಸ್ವಾಮಿಗಳೂ ಮುಂತಾದ ಅನೇಕ ಲಿಂಗಾಯಿತ ಮಠಾಧೀಶರೂ, ವಿಶೇಷ ಸಂಖ್ಯೆಯಲ್ಲಿ  ಲಿಂಗಾಯಿತರೂ ಭಾಗವಹಿಸಿದ್ದಾರೆ. ಆದುದರಿಂದ ಲಿಂಗಾಯಿತ ಧರ್ಮವು ಹಿಂದೂ ಧರ್ಮದಿಂದ ಪ್ರತ್ಯೇಕವಾದ ಸ್ವತಂತ್ರ ಧರ್ಮವಲ್ಲ.


Spread the love