ಫಲಾನುಭವಿಗಳಿಗೆ ನೇರವಾಗಿ ಸರಕಾರದ ಸವಲತ್ತು ಲಭಿಸಬೇಕು – ವಿನಯ ಕುಮಾರ್ ಸೊರಕೆ

Spread the love

ಫಲಾನುಭವಿಗಳಿಗೆ ನೇರವಾಗಿ ಸರಕಾರದ ಸವಲತ್ತು ಲಭಿಸಬೇಕು – ವಿನಯ ಕುಮಾರ್ ಸೊರಕೆ

ಉಡುಪಿ :ಸಾಮಾನ್ಯ ಜನರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಕಚೇರಿ ಕಚೇರಿ ಅಲೆದಾಡಬಾರದು. ಫಲಾನುಭವಿಗಳಿಗೆ ಅದು ನೇರವಾಗಿ ಲಭಿಸಬೇಕು ಎಂದು ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಕುಮಾರ್ ಸೊರಕೆ ಹೇಳಿದರು.

ಅವರು  ಹಿರಿಯಡಕ ಸಾಂಸ್ಕøತಿಕ ಕಲಾ ಮಂದಿರದಲ್ಲಿ ನಡೆದ ಬೊಮ್ಮರಬೆಟ್ಟು, ಕೊಡಿಬೆಟ್ಟು, ಬೈರಂಪಳ್ಳಿ, ಆತ್ರಾಡಿ, ಪೆರ್ಡೂರು, 80 ಬಡಗುಬೆಟ್ಟು, ಅಲೆವೂರು, ಉದ್ಯಾವರ, ಮಣಿಪುರ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್‍ಗಳ ವ್ಯಾಪ್ತಿಯ ಜನಸ್ಪಂದನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸರಕಾರದಿಂದ ಅರ್ಹ ಫಲಾನುಭವಿಗಳಿಗೆ ಹಲವಾರು ಸವಲತ್ತುಗಳು ಲಭಿಸುತ್ತಿದ್ದು, ಇದನ್ನು ಫಲಾನುಭವಿಗಳು ಪಡೆಯಲು ಕಚೇರಿ ಕಚೇರಿಗೆ ಅಲೆದಾಡುವುದರಿಂದ ಜನರಲ್ಲಿ ನಿರಾಸೆ ಉಂಟಾಗುತ್ತದೆ. ಸರಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು ಹಾಗೂ ಇಲಾಖೆಗಳ ನಡುವಿನ ಅಲೆದಾಟವನ್ನು ಜನಸ್ಪಂದನ ಕಾರ್ಯಕ್ರಮ ತಪ್ಪಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ವತಿಯಿಂದ 92 ಮಂದಿಗೆ ಮನೆ ಮಂಜೂರಾತಿ ಪತ್ರ, 36 ಜನರಿಗೆ ಶೇ.25 ಅನುದಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 35 ಸ್ತ್ರೀ ಶಕ್ತಿ ಗುಂಪುಗಳಿಗೆ ಸುತ್ತುನಿಧಿ, 105 ಜನರಿಗೆ ಅರಣ್ಯ ಇಲಾಖೆ ವತಿಯಿಂದ ಹೆಬ್ರಿ ವಲಯದವರಿಗೆ ಗ್ಯಾಸ್ ವಿತರಣೆ, ಪಶುಸಂಗೋಪನಾ ಇಲಾಖೆ ವತಿಯಿಂದ 13 ಜನರಿಗೆ ಅನುದಾನ, ಕೃಷಿ ಇಲಾಖೆಯಿಂದ 8 ಜನರಿಗೆ ಹುಲ್ಲು ಕತ್ತರಿಸುವ ಯಂತ್ರ ಹಾಗೂ ಅನುದಾನ, ಕರ್ನಾಟಕ ಮಹರ್ಷಿ ವಾಲ್ಮೀಕಿ ನಿಗಮದಿಂದ 7 ಜನರಿಗೆ ಅನುದಾನ, ಮೀನುಗಾರಿಕೆ ಇಲಾಖೆಯಿಂದ 3 ಜನ ಫಲಾನುಭವಿಗಳಿಗೆ ಅನುದಾನ ಹಾಗೂ ಕಂದಾಯ ಇಲಾಖೆಯಿಂದ 143 ಜನರಿಗೆ 94ಸಿಸಿ ಮತ್ತು 94ಸಿ ಅನ್ವಯ ಹಕ್ಕುಪತ್ರ, 96 ಜನರಿಗೆ ವಿವಿಧ ವೇತನ, 3 ಜನರಿಗೆ ಪ್ರಾಕೃತಿಕ ವಿಕೋಪ ಅನುದಾನ, 2 ಜನರಿಗೆ ರಾಷ್ಟ್ರೀಯ ಕುಟುಂಬ ವೇತನ ಹಾಗೂ 2 ಜನರಿಗೆ ಇತರ ಅನುದಾನ ಒಟ್ಟು 555 ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿದರು.

ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಮೋಹನ್ ರಾಜ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ತಹಶೀಲ್ದಾರ್ ಪ್ರದೀಪ್ ಕೆ, ಅಲ್ಪಸಂಖ್ಯಾತ ನಿಗಮದ ಮುಖ್ಯಸ್ಥ ಇಸ್ಮಾಯಿಲ್, ಜಿಲ್ಲಾ ಪಂಚಾಯತ್ ಸದಸ್ಯ ಮೈರ್ಮಾಡಿ ಸುಧಾಕರ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಸಂಧ್ಯಾಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಲಕ್ಷ್ಮೀ ನಾರಾಯಣ, ಬೊಮ್ಮರಬೆಟ್ಟು, ಕೊಡಿಬೆಟ್ಟು,ಬೈರಂಪಳ್ಳಿ, ಆತ್ರಾಡಿ, ಪೆರ್ಡೂರು, 80 ಬಡಗುಬೆಟ್ಟು, ಅಲೆವೂರು, ಉದ್ಯಾವರ, ಮಣಿಪುರ, ಕುಕ್ಕೆಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು.

ಬೈರಂಪಳ್ಳಿ ಗ್ರಾಮ ಪಂಚಾಯತ್ ಪಿ.ಡಿ.ಒ ಪ್ರವೀಣ್ ಸ್ವಾಗತಿಸಿದರು. ಶ್ರೀಧರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love