ಬಂಟ್ವಾಳ: ಕಲ್ಲಿನಕೋರೆಗೆ ಈಜಲಿಳಿದಿದ್ದ ಇಬ್ಬರು ಯುವಕರು ಮೃತ್ಯು

Spread the love

ಬಂಟ್ವಾಳ: ಕೆಂಪುಕಲ್ಲಿನ ಕೋರೆಯ ಹೊಂಡಕ್ಕೆ ಈಜಲೆಂದು ಇಳಿದಿದ್ದ ಇಬ್ಬರು ಯುವಕರು ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ತಾಲೂಕಿನ ಚೇಳೂರು ಗ್ರಾಮದಲ್ಲಿ ರವಿವಾರ ಅಪರಾಹ್ನ ನಡೆದಿದೆ.

drown (3) drown (2) drown (1)

ಇಲ್ಲಿನ ಮೂಳೂರುಪದವು ಎಂಬಲ್ಲಿರುವ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ ಸೇರಿದ ನಿರ್ಜನ ಪ್ರದೇಶದ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಬೋಳಿಯಾರು ಗ್ರಾಮದ ಮಜಿಸೈಟ್ ನಿವಾಸಿ ಜನಾರ್ದನ ಎಂಬವರ ಪುತ್ರ ದೀಕ್ಷಿತ್ ರಾಜ್(18) ಹಾಗೂ ಉಮೇಶ್ ಎಂಬವರ ಪುತ್ರ ಜಯಪ್ರಕಾಶ್(21) ಮೃತಪಟ್ಟವರಾಗಿದ್ದಾರೆ

ಸ್ಥಳೀಯ ಮಜಿ ಯುವಕ ಸಂಘ ಮತ್ತು ಭಜನಾ ಮಂಡಳಿಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದ ಹಲವು ಯುವಕರು ಮತ್ತು ವಿದ್ಯಾರ್ಥಿಗಳು ಮಜಿ ಸಮೀಪದ ಮೈದಾನದಲ್ಲಿ ರವಿವಾರ ಬೆಳಗ್ಗೆ ಹಗ್ಗ-ಜಗ್ಗಾಟದ ಅಭ್ಯಾಸ ನಡೆಸುತ್ತಿದ್ದರು. ಅಪರಾಹ್ನ ದೀಕ್ಷಿತ್‌ರಾಜ್, ಜಯಪ್ರಕಾಶ್‌ಸೇರಿದಂತೆ ಒಟ್ಟು ಆರು ಮಂದಿ ಸ್ನೇಹಿತರು ಮೂರು ಬೈಕ್‌ನಲ್ಲಿ ಸಮೀಪದಲ್ಲೇ ಇರುವ ಮೂಳೂರುಪದವಿಗೆ ಬಂದು ಕೆಂಪುಕಲ್ಲಿನ ಕೋರೆಯ ಹೊಂಡಕ್ಕೆ ಈಜಲೆಂದು ಇಳಿದಿದ್ದಾರೆ. ಈ ವೇಳೆ ಸರಿಯಾಗಿ ಈಜು ತಿಳಿಯದ ದೀಕ್ಷಿತ್‌ರಾಜ್ ಹೊಂಡದ ಕೆಸರಿನಲ್ಲಿ ಹೂತು ಹೋಗುತ್ತಿರುವುದನ್ನು ಕಂಡು ಆತನ ಸ್ನೇಹಿತ ಜಯಪ್ರಕಾಶ್ ನೆರವಿಗೆ ಧಾವಿಸಿದ್ದಾರೆ. ಆದರೆ ಜಯಪ್ರಕಾಶ್‌ನ ಕಾಲು ಕೂಡಾ ಕೆಸರಿನಲ್ಲಿ ಸಿಲುಕಿದ ಪರಿಣಾಮ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟರೆನ್ನಲಾಗಿದೆ. ಕಣ್ಣೆದುರೇ ನಡೆದ ಈ ದುರಂತದಿಂದ ಜತೆಗಿದ್ದ ನಾಲ್ವರು ಆಘಾತಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬಂಟ್ವಾಳ ಪೊಲೀಸರು ಊರವರ ಸಹಕಾರದೊಂದಿಗೆ ಕೆಸರಿನಲ್ಲಿ ಹೂತು ಹೋಗಿದ್ದ ಮೃತದೇಹಗಳನ್ನು ಹೊರ ತೆಗೆದರು. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಯಿತು. ಘಟನೆಯ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love