ಬಲ್ಮಠ ಸರಕಾರಿ ಕಾಲೇಜಿನಲ್ಲಿ ಭಾರತ್ ಸೇವಾದಳ ಉದ್ಘಾಟನೆ

Spread the love

ಬಲ್ಮಠ ಸರಕಾರಿ ಕಾಲೇಜಿನಲ್ಲಿ ಭಾರತ್ ಸೇವಾದಳ ಉದ್ಘಾಟನೆ

ಮಂಗಳೂರು: ಭಾರತ ಸೇವಾದಳದ ಶಾಖೆ ಜೂನ್ 30 ರಂದು ಬಲ್ಮಠ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಉದ್ಘಾಟನೆಗೊಂಡಿತು.

bharathiya-seva-dal-jrlobo

ಸುಮಾರು 50 ಮಂದಿ ವಿದ್ಯಾರ್ಥಿನಿಗಳಿರುವ ಶಾಖೆಯನ್ನು ಮಂಗಳೂರು ರೋಟರಿ ಕ್ಲಬ್ ನ ಅಧ್ಯಕ್ಷ ಹಾಗೂ ಉದ್ಯಮಿ ಇಲ್ಯಾಸ್ ಸಾಂಕ್ಟಿಸ್ ಉದ್ಘಾಟನೆಗೈದು ಮಾತನಾಡುತ್ತಾ ದೇಶದಲ್ಲಿ ಇಂದು ಶೇ60 ರಷ್ಟು ಯುವ ಜನತೆ ಇದ್ದಾರೆ. ಅದರಲ್ಲಿ ವಿದ್ಯಾರ್ಥಿಗಳೂ ಇದ್ದಾರೆ. ಅವರೇ ದೇಶದ ಮುಂದಿನ ಆಸ್ತಿ. ಅವರು ನಮಗೆ ಶ್ರೀ ರಕ್ಷೆ. ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿನಿಯರು ಮುಂದೆ ಸಂಸಾರವನ್ನು ನಡೆಸುವವರು. ಕೆಲವರು ಸಮಾಜದ ಮುಖ್ಯವಾಹಿನಿಯಲ್ಲಿ ಬರುತ್ತಾರೆ. ಆದ್ದರಿಂದ ವಿದ್ಯಾರ್ಥಿನಿಯರು ಆದರ್ಶರಾಗಿರಬೇಕು. ನಾವು ಸಮಾಜದಿಂದ ಏನು ಗಳಿಸಿದ್ದೇವೋ ಅದನ್ನು ನಾವು ಸಮಾಜಕ್ಕೆ ಅರ್ಪಿಸುವಂತಹ ಗುಣ ಇರಬೇಕು ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್. ಲೋಬೊ ರವರು ಜೀವನದಲ್ಲಿ ಯಶಸ್ವೀಯಾಗಬೇಕಾದರೆ ಶಿಸ್ತು ಅಗತ್ಯ. ಕಲಿಯುವುದರ ಜೊತೆಗೆ ಇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಕ್ರೀಯಾಶೀಲರಾಗಬೇಕು. ವಿದ್ಯಾರ್ಥಿನಿಯರು ಕ್ರಿಯಾಶೀಲರಾದರೆ ಉನ್ನತ ಸ್ಥಾನಕ್ಕೆ ಏರಬಹುದು. ಬರುವಂತಹ ಅವಕಾಶಗಳನ್ನು ಬಳಸಿಕೊಂಡು ಆಕರ್ಷಕ ಕೇಂದ್ರ ಬಿಂದುಗಳಾಗಲು ಪ್ರಯತ್ನಿಸಿ ಎಂದು ಕರೆಯಿತ್ತರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ತಾಲೂಕು ಸೇವಾದಳ ಅಧ್ಯಕ್ಷ ಶ್ರೀ ಪ್ರಭಾಕರ ಶ್ರೀಯಾನ್ ಅವರು ವಿದ್ಯಾರ್ಥಿಗಳಿಗೆ ಸೇವಾದಳದ ಪ್ರಮಾಣ ವಚನವನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಟಿ.ಕೆ. ಸುಧೀರ್, ಕಾಲೇಜ್ ಪ್ರಿನ್ಸಿಪಾಲ್ ಜೋಸೆಫ್, ಪ್ರಾಧ್ಯಾಪಕ ಚೆರಿಯನ್, ಸೇವಾದಳ ತಾಲೂಕು ಕಾರ್ಯದರ್ಶಿ ಉದಯ ಕುಂದರ್, ಜಿಲ್ಲಾ ಸಂಘಟಕ ಟಿ.ಎಸ್. ಮಂಜೇಗೌಡ, ಸದಸ್ಯರಾದ ದುರ್ಗಾಪ್ರಸಾದ್, ಸುನಿಲ್ ದೇವಾಡಿಗ, ಶೋಭಾ ಕೇಶವ, ಕೃತಿನ್ ಕುಮಾರ್ ಉಪಸ್ಥಿತರಿದ್ದರು.


Spread the love