ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಭವನಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ರೂಪಾಯಿ ಬಿಡುಗಡೆ: ಶಾಸಕ ಜೆ.ಆರ್.ಲೋಬೊ

Spread the love

ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಭವನಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ರೂಪಾಯಿ ಬಿಡುಗಡೆ: ಶಾಸಕ ಜೆ.ಆರ್.ಲೋಬೊ

ಮಂಗಳೂರು: ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಸ್ಮಾರಕ ಭವನಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ರೂಪಾಯಿಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ತಿಳಿಸಿದ್ದಾರೆ.

ಅವರು ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಸ್ಮಾರಕ ಭವನಕ್ಕೆ ಭೇಟಿ ನೀಡಿ ಸಂದರ್ಭದಲ್ಲಿ ಮಾತನಾಡುತ್ತಾ ಬಹಳ ವರ್ಷಗಳಿಂದ ಬೇಡಿಕೆ ಇದ್ದ ಬಾಬುಗುಡ್ಡೆ ಕುದ್ಮುಲ್ ರಂಗರಾವ್ ಸ್ಮಾರಕ ಭವನ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 1.5 ಕೋಟಿ ರೂಪಾಯಿ ಹಣ ಒದಗಿಸುವಂತೆ ಮನವಿ ಮಾಡಿದ್ದಾಗಿ ಹೇಳಿದರು.

ಸ್ಥಳೀಯ ನಾಗರಿಕರು ಮತ್ತು ಕುದ್ಮುಲ್ ರಂಗರಾವ್ ಎಜುಕೇಷನ್ ಟ್ರಸ್ಟ್ ಹಣ ಒದಗಿಸುವಂತೆ ಕೇಳುತ್ತಿದ್ದರು. ಶಾಸಕ ಜೆ.ಆರ್.ಲೋಬೊ ಅವರ ಮನವಿಯನ್ನು ಪುರಸ್ಕರಿಸಿ ಮಂಗಳೂರು ಮಹಾನಗರ ಪಾಲಿಕೆ 1 ಕೋಟಿ ಮತ್ತು ಸಮಾಜ ಕಲ್ಯಾಣ ಇಲಾಖೆ 1 ಕೋಟಿ ರೂಪಾಯಿ ಒದಗಿಸಿತ್ತು. ಕಟ್ಟಡದ ಒಂದು ಅಂತಸ್ತು ಕಾಮಗಾರಿ ಪೂರ್ಣಗೊಂಡಿತ್ತು. ಉಳಿದ ಕಾಮಗಾರಿಗಾಗಿ ಹೆಚ್ಚುವರಿಯಾಗಿ ಹಣ ಒದಗಿಸುವಂತೆ ಕೇಳಲಾಗಿತ್ತು. ಸರ್ಕಾರ ಮನವಿಯನ್ನು ಸ್ವೀಕರಿಸಿ ಈಗ ಹಣ ಬಿಡುಗಡೆ ಮಾಡಿದೆ ಎಂದರು.

ಈ ಪ್ರದೇಶಕ್ಕೆ ಈ ಭವನದಿದಂದ ತುಂಬಾ ಪ್ರಯೋಜನವಾಗಲಿದೆ. ಮದುವೆ, ಇನ್ನಿತರ ಕಾರ್ಯಕ್ರಮಗಳು ಜರಗಲಿವೆ ಎಂದು ನುಡಿದ ಶಾಸಕ ಜೆ.ಆರ್.ಲೋಬೊ ಅವರು ಮುಂದಿನ ಎರಡು ತಿಂಗಳೊಳಗೆ ಕಾಮಗಾರಿ ಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ ಎಂದರು.

ಪರಿಶಿಷ್ಠ ಜಾತಿ ,ಪಂಗಡದ ಹರಿಕಾರ ಕುದ್ಮುಲ್ ರಂಗರಾವ್ ಅವರ ಹೆಸರಲ್ಲಿ ಭವನ ನಿರ್ಮಾಣವಾಗುತ್ತಿರುವುದು ಸಂತಸ ಉಂಟು ಮಾಡಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕುದ್ಮುಲ್ ಟ್ರಸ್ಟ್ ಅಧ್ಯಕ್ಷ ಹೃದಯನಾಥ್, ಹೊನ್ನಯ್ಯ, ಕೆ ಎಸ್ ಆರ್ ಟಿಸಿ ನಿರ್ದೇಶಕ ಟಿ.ಕೆ.ಸುಧೀರ್, ಮಂಗಳೂರು ತಾಲೂಕು ಭೂನ್ಯಾಯ ಮಂಡಳಿ ಸದಸ್ಯ ಡೆನ್ನಿಸ್ ಡಿ’ಸಿಲ್ವ, ಪ್ರಮುಖರಾದ ರಮಾನಂದ ಪೂಜಾರಿ, ದಯಾಕರ್, ಮೊಹಮದ್ ನವಾಜ್, ಕೀರ್ತಿ ರಾಜ್, ರವೀಂದ್ರ, ಶ್ಯಾಮ್ ಕರ್ಕೇರ, ಪ್ರದೀಪ್ ಕೃಷ್ಣ, ಪ್ರಶಾಂತ್, ಗುತ್ತಿಗೆದಾರ್ ಅರುಣ್ ಕುವೆಲ್ಲೊ ಮುಂತಾದವರು ಉಪಸ್ಥಿತರಿದ್ದರು.


Spread the love