ಬಿಜೆಪಿಗರ ಗೋ ಪ್ರೀತಿ ವೇದಿಕೆಯ ಭಾಷಣಕ್ಕೆ ಮಾತ್ರ ಸೀಮಿತ – ಪ್ರಮೋದ್ ಮಧ್ವರಾಜ್

Spread the love

ಬಿಜೆಪಿಗರ ಗೋ ಪ್ರೀತಿ ವೇದಿಕೆಯ ಭಾಷಣಕ್ಕೆ ಮಾತ್ರ ಸೀಮಿತ – ಪ್ರಮೋದ್ ಮಧ್ವರಾಜ್

ಶೃಂಗೇರಿ: ಉಡುಪಿಯಲ್ಲಿ ಶಾಸಕನಾಗಿದ್ದ ಸಂದರ್ಭದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ನೂರಾರು ಕೋಟಿ ಅನುದಾನಗಳನ್ನು ತಂದು ಅಭಿವೃದ್ಧಿ ಮಾಡಲಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಚುನಾವಣೆ ಸಂದರ್ಭದಲ್ಲಿ ಜನರಿಗೆ ಕಾಣಿಸಿಕೊಳ್ಳುತ್ತಾರೆ. ಅಂತವರು ಬಡವರ ಆಶಯಗಳಿಗೆ ಸ್ಪಂದಿಸಲಾರರು. 65 ಜನಸಂಪರ್ಕ ಸಭೆಯನ್ನು ನಡೆಸಿದ ನನಗೆ ಬಡವರ ನೋವು ಅರ್ಥವಾಗುತ್ತದೆ ಎಂದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೈತ್ರಿ ಪಕ್ಷದ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.

ಶೃಂಗೇರಿಯಲ್ಲಿ ಸೋಮವಾರ ಕುರುಬಕೇರಿ ಸರ್ಕಲ್ನಲ್ಲಿ ತಾಲ್ಲೂಕು ಜೆಡಿಎಸ್-ಕಾಂಗ್ರೆಸ್ ಪಕ್ಷ ಆಯೋಜಿಸಿದ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ಗೋಮಾತೆಯನ್ನು ಪೂಜಿಸುವರು ಎಂದು ವೇದಿಕೆಯಲ್ಲಿ ಹೇಳುತ್ತಾರೆ. ಹೇಳಿದವರ ಮನೆಯಲ್ಲಿ ಗೋವುಗಳು ಇಲ್ಲ. ನಮ್ಮ ಮನೆಯಲ್ಲಿ 25 ಗೋವುಗಳನ್ನು ಸಾಕಿದ್ದೇವೆ. ಇವರ ದ್ವಂದ್ವ ನೀತಿ ಜನರಿಗೆ ಅರ್ಥವಾಗಿದೆ. ಸಂಸದೆ ಶೋಭಾ ಕರಂದ್ಲಾಜೆ ಐದು ವರ್ಷಗಳಲ್ಲಿ ಮಾಡಿದ ಸಾಧನೆ ಶೂನ್ಯ. ವೋಟು ಕೇಳುವ ನೈತಿಕತೆಯನ್ನು ಶೋಭಾ ಕಳೆದುಕೊಂಡಿದ್ದಾರೆ. ಮೋದಿ ಹೆಸರಿನಲ್ಲಿ ಮತಯಾಚಿಸುತ್ತಿರುವುದು ದುರಂತ. ಮೋದಿ ಹೆಸರಿನಲ್ಲಿ ವೋಟು ಕೇಳುವುದುದಾದರೆ ವಾರಣಾಸಿಗೆ ಹೋಗಿ’ ಎಂದರು.

‘ಪ್ರಸ್ತುತ ನನಗೆ ಎಂಟು ವಿಧಾನಸಭಾ ಕ್ಷೇತ್ರಕ್ಕೆ ಕೆಲಸ ಮಾಡುವ ಅವಕಾಶ ದೊರಕಿದೆ. ಸಂಸದೆ ಶೋಭಾ ಕರಂದ್ಲಾಜೆ ಈ ಕ್ಷೇತ್ರವು ಕಾಂಗ್ರೆಸ್ ಪಕ್ಷದಿಂದ ಮುಕ್ತವಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಮುಂದೆ ಮೈತ್ರಿ ಪಕ್ಷವು ಬಿಜೆಪಿಗೆ ಪೈಪೋಟಿ ನೀಡುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ಗೆ ಹೇಗೆ ಗೆಲ್ಲಬೇಕು, ಬೇರೆಯವರನ್ನು ಹೇಗೆ ಸೋಲಿಸಬೇಕು ಎಂಬುದು ಚೆನ್ನಾಗಿ ಗೊತ್ತಿದೆ’ ಎಂದರು.

‘ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶದ 25 ಕೋಟಿ ಬಿಪಿಎಲ್ ಕಾರ್ಡುದಾರರಿಗೆ ಮಾಸಿಕ ₹ 6000 ಗಳನ್ನು ಘೋಸಿಸಲಾಗಿದೆ. ಶಾಸಕ ರಾಜೇಗೌಡ ಅವರು ಕ್ಷೇತ್ರದಲ್ಲಿ ಉತ್ತಮ ಕಾರ್ಯಮಾಡುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರು ನಾಮಪತ್ರದಲ್ಲಿ ಬೆಂಗಳೂರು ವಿಳಾಸವನ್ನು ನಮೂದಿಸಿದ್ದಾರೆ. ನಾನು ಚಿಕ್ಕಮಗಳೂರಿನಲ್ಲಿ ಮನೆ ಮಾಡಿ, ಜನರ ಸಂಕಷ್ಟ ಆಲಿಸಿ ಅವರ ಕಷ್ಟಕ್ಕೆ ಸ್ಪಂದಿಸುತ್ತೇನೆ. ಏಪ್ರಿಲ್ 17ರ ತನಕ ನನ್ನ ಜವಾಬ್ದಾರಿ ನಿಮ್ಮದಾಗಿದೆ. 18 ರ ಬಳಿಕ ನಿಮ್ಮ ಜವಾಬ್ದಾರಿ ನನ್ನದಾಗಲಿದೆ’ ಎಂದರು.

ಶಾಸಕ ಟಿ.ಡಿ.ರಾಜೇಗೌಡ ಅವರು ಮಾತನಾಡಿ, ‘ರಸ್ತೆ ಅಭಿವೃದ್ಧಿಗೆ ಸಮ್ಮಿಶ್ರ ಸರ್ಕಾರವು ರೈತರ ಹಾಗೂ ಜನಸಾಮಾನ್ಯರ ಶ್ರೇಯೋಭಿವೃದ್ಧಿಗೆ ಅವಿರತವಾಗಿ ದುಡಿಯುತ್ತಿದೆ. ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ನಮಗೆ ಅರಿವಿದೆ. ಹಂತ ಹಂತವಾಗಿ ಜನತೆಯ ಆಶಯಗಳಿಗೆ ಸ್ಪಂದಿಸಲಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೃಷಿಕರಿಗೆ ₹ 46 ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಿದ್ದಾರೆ. ಕಾರ್ಯಕರ್ತರು ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು’ ಎಂದರು.

ಸಭೆಗೂ ಮುನ್ನ ಮುಖ್ಯಬೀದಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಮತ್ತು ಶಾಸಕ ಟಿ.ಡಿ.ರಾಜೇಗೌಡ ಮತಯಾಚಿಸಿದರು.

ಕಾಂಗ್ರೆಸ್ ಮುಖಂಡರಾದ ನಟರಾಜ್ ಮಾರನಕೂಡಿಗೆ, ಕೆ.ಸಿ.ವೆಂಕಟೇಶ್, ಮೇಗಳಬೈಲು ಚಂದ್ರಶೇಖರ್, ಕುರದಮನೆ ವೆಂಕಟೇಶ್, ಶಕೀಲಾ ಗುಂಡಪ್ಪ, ನೂತನ್ ಹೆಗ್ಡೆ, ರಾಜೇಶ್ ಶೆಟ್ಟಿ ಜೆಡಿಎಸ್ ಮುಖಂಡರಾದ ಮಂಜುನಾಥ ಗಂಡಘಟ್ಟ ವಿವೇಕಾನಂದ ಸುಂಕುರ್ಡಿ, ಗಿಣಿಕಲ್ ಭರತ್ ಮುಂತಾದವರು ಹಾಜರಿದ್ದರು.


Spread the love