ಬೆಂಗಳೂರು: ನುಡಿದಂತೆ ನಡೆದ, ಭೃಷ್ಟಾಚಾರ ಹಗರಣ ಮುಕ್ತ ಸರಕಾರ ನರೇಂದ್ರ ಮೋದಿಯದ್ದು – ಕೇಂದ್ರ ಸಚಿವ ಸದಾನಂದ ಗೌಡ

Spread the love

ಬೆಂಗಳೂರು: ನುಡಿದಂತೆ ನಡೆದು ದೇಶದ ಆರ್ಥಿಕ ಪರಿಸ್ಥಿತಯನ್ನು ಸುಧಾರಿಸುವುದರೊಂದಿಗೆ  ಒಂದೇ ಒಂದು ಹಗರಣ ನಡೆಯದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರವನ್ನು ಒಂದು ವರ್ಷ ಮುನ್ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

1459901

ಕೇಂದ್ರ ಸರ್ಕಾರ ಒಂದು ವರ್ಷದ ಆಡಳಿತಾವಧಿ ಪೂರೈಸಿರುವ ಹಿನ್ನೆಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಅವರು ಹಾಗೂ ಅನಂತಕುಮಾರ್ ಜಂಟಿಯಾಗಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಹೇಳಿದರು.

ಪ್ರಣಾಳಿಕೆಯಲ್ಲಿ ನುಡಿದಂತೆ ಬಿಜೆಪಿ ನಡೆದಿದ್ದು, ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ, ವೃದ್ಧಿಸಿದೆ. ಯುಪಿಎ ಆಡಳಿತಾವಧಿಯಲ್ಲಿ ಶೇ. 4.2 ರಷ್ಟಿದ್ದ ಜಿಡಿಪಿ ಈಗ ಶೇ. 7.5ಕ್ಕೆ ತಲುಪಿದೆ. ಆ ಮೂಲಕ ದೇಶವನ್ನು ಬಂಡವಾಳ ಹೂಡಿಕೆ ರಾಷ್ಟ್ರವನ್ನಾಗಿ ಮೋದಿ ಪರಿವರ್ತಿಸಿದ್ದಾರೆ. ಕೇಂದ್ರ ಸರ್ಕಾರ ದೇಶದ ಜನರಿಗೆ ತಿನ್ನಲು ಮೀನು ಕೊಡುತ್ತಿಲ್ಲ, ಬದಲಿಗೆ ಮೀನು ಹಿಡಿಯುವುದನ್ನು ಹೇಳಿಕೊಡುತ್ತಿದೆ ಎಂದು ಕೇಂದ್ರದ ವಿವಿಧ ಯೋಜನೆಗಳ ಮಹತ್ವ ಹಾಗೂ ಉಪಯುಕ್ತತೆಯನ್ನು ವಿವರಿಸಿದರು. ಕಪ್ಪುಹಣ ವಾಪಸ್ ತರುವ ಬಗ್ಗೆ ಸುಪ್ರೀಂಕೋರ್ಟ್ ಸೂಚಿಸಿರುವಂತೆ ಸಮಿತಿ ರಚಿಸಲಾಗಿದೆ. ಜತೆಗೆ ಕಪ್ಪುಹಣದ ಸಂಬಂಧ ಸುಪ್ರೀಂ ಕೋರ್ಟ್ ಸೂಚನೆಯಂತೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಎಲ್ಲಕ್ಕಿಂತ ಹೆಚ್ಚು ಭ್ರಷ್ಟಾಚಾರ ರಹಿತವಾಗಿ ಆಡಳಿತ ನಡೆಸಿರುವ ಪ್ರಧಾನಿ ಮೋದಿ, ಈ ಅವಧಿಯಲ್ಲಿ ಒಂದೇ ಒಂದು ಹಗರಣ ನಡೆಯದಂತೆ ನೋಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಕಾರ್ಯವೈಖರಿಯನ್ನು ಸದಾನಂದಗೌಡ ಬಣ್ಣಿಸಿದರು.

ಅಕ್ರಮ ನುಸುಳುಕೋರರ ಪತ್ತೆಗೆ ಕೇಂದ್ರ ಸರ್ಕಾರ ಮುಂದಾಗಿದ್ದು, ಗಡಿ ಪ್ರದೇಶದಲ್ಲಿ ಮನೆಮನೆಗೂ ತೆರಳಿ ಪತ್ತೆ ನಡೆಸಲಿದೆ. ಈ ಪ್ರಕ್ರಿಯೆ ಗಡಿ ರಾಜ್ಯಗಳಲ್ಲಿ ಆರಂಭವಾಗಿ ಕ್ರಮೇಣ ಇತರ ರಾಜ್ಯಗಳಲ್ಲೂ ನಡೆಯಲಿದೆ ಎಂದರು. ಒಂದಂಕಿ ಲಾಟರಿ ದಂಧೆ ಬಗ್ಗೆ ಮಾತನಾಡಿದ ಅವರು, ರಾಜಕಾರಣಿಗಳ ಬೆಂಬಲವಿಲ್ಲದೆ ಇದು ನಡೆಯಲು ಸಾಧ್ಯವಿಲ್ಲ. ಹಾಗಾಗಿ ಇದನ್ನು ಸಿಐಡಿ ಬದಲು ಸಿಬಿಐ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದರು.

ಸಚಿವ ಅನಂತಕುಮಾರ್ ಮಾತನಾಡಿ, 14ನೇ ಹಣಕಾಸು ಆಯೋಗದ ಪ್ರಕಾರ ಕೇಂದ್ರದ ಹಣಕಾಸು ನೆರವಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ. 13ನೇ ಹಣಕಾಸು ಆಯೋಗದಲ್ಲಿ ಕೇಂದ್ರದಿಂದ ರಾಜ್ಯಕ್ಕೆ 2014-15ನೇ ಸಾಲಿನಲ್ಲಿ 27,450 ಕೋಟಿ ರೂ. ನೆರವು ಲಭಿಸಿದ್ದರೆ, 14ನೇ ಹಣಕಾಸು ಆಯೋಗದಲ್ಲಿ 2015-16ನೇ ಸಾಲಿಗೆ ಕೇಂದ್ರ 29,265 ಕೋಟಿ ರೂ. ಅನ್ನು ರಾಜ್ಯಕ್ಕೆ ಮೀಸಲಿಟ್ಟಿದೆ ಎಂದು ಸ್ಪಷ್ಟನೆ ನೀಡಿದರು. ಅದಾಗ್ಯೂ ಮುಖ್ಯಮಂತ್ರಿ ಅವರಿಗೆ 14ನೇ ಹಣಕಾಸು ಆಯೋಗದ ಪ್ರಕಾರ ಆರ್ಥಿಕ ನೆರವು ಕಡಿಮೆಯಾಯಿತು ಎನಿಸಿದರೆ 13ನೇ ಹಣಕಾಸು ಆಯೋಗದ ಪ್ರಕಾರವೇ ಹಣಕಾಸು ಒದಗಿಸುವಂತೆ ಕೇಂದ್ರಕ್ಕೆ ಪತ್ರ ಬರೆಯಲಿ ಎಂದರು.

ಕೇಂದ್ರ ಸರ್ಕಾರ ರಾಜ್ಯಕ್ಕೆ ವಿವಿಧ ಯೋಜನೆಗಳನ್ನು ತರಲು ಮುಕ್ತವಾಗಿದೆ. ಆದರೆ ರಾಜ್ಯ ಸರ್ಕಾರವೇ ಸರಿಯಾಗಿ ಸ್ಪಂದಿಸುತ್ತಿಲ್ಲ. ಜೆನರಿಕ್ ಔಷಧ ಮಳಿಗೆಗಳಿಗೆ ಆಸ್ಪತ್ರೆಗಳಲ್ಲಿ ಕೊಠಡಿಗಳನ್ನು ನೀಡುತ್ತಿಲ್ಲ, ಗೊಬ್ಬರ ಕಾರ್ಖಾನೆಗಳಿಗೆ ಜಾಗ ನೀಡುತ್ತಿಲ್ಲ ಎಂದು ಅನಂತಕುಮಾರ್ ಆರೋಪಿಸಿದರು. ರೈತರಿಗೆಂದೇ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ಕಿಸಾನ್ ಸುದ್ದಿವಾಹಿನಿಯನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ ಎಂದೂ ಅವರು ಹೇಳಿದರು.


Spread the love