ಭಟ್ಕಳ: ಡಿಸೆಂಬರ್ ತಿಂಗಳಿನಲ್ಲಿ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾಟ

Spread the love

ಭಟ್ಕಳ: ಉತ್ತರಕನ್ನಡ ಜಿಲ್ಲೆಯ ಕ್ರೀಡಾ ಪ್ರೇಮಿಗಳಿಗೊಂದು ಸಂತಸದ ಸುದ್ದಿ ಇಲ್ಲಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ, ಭಾರತದ ಮನೆ ಮಾತಾಗಿರುವ `ಪ್ರೋ-ಕಬಡ್ಡಿ’ ಪಂದ್ಯಾವಳಿಯಲ್ಲಿ ಆಡಿ ಸ್ಟಾರ್ ಗಿರಿಗೇರಿರುವ ಕಬಡ್ಡಿ ಆಟಗಾರರು ಮುಂದಿನ ಡಿಸೆಂಬರ್ ತಿಂಗಳಿನಲ್ಲಿ ಭಟ್ಕಳದ ಅಂಗಣದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದ್ದಾರೆ.
 ಈ ವರ್ಣ ರಂಜಿತ ಪಂದ್ಯಾವಳಿಯನ್ನು ಸ್ಥಳೀಯ ಮುಖಂಡ ಇನಾಯಿತುಲ್ಲಾ ಶಾಬಂದ್ರಿ ನೇತೃತ್ವದಲ್ಲಿ ಭಟ್ಕಳ ಅಸಾದುಲ್ಲಾ ಅಸೋಶಿಯೇಶನ್ ಸಂಘಟಿಸಲು ಮುಂದಾಗಿದೆ. ಈಗಾಗಲೇ ಭಾರತ ಕಬಡ್ಡಿ ಫೆಡರೇಶನ್‍ನೊಂದಿಗೆ ಮಾತುಕತೆ ನಡೆಸಲಾಗಿದ್ದು, ಹಸಿರು ನಿಶಾನೆ ದೊರೆತಿದೆ. ದೇಶದ ವಿವಿಧ ಭಾಗಗಳಿಂದ 25 ಪ್ರಮುಖ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಬೆಂಗಳೂರು ಬುಲ್ಸ್ ತಂಡದ ನಾಯಕ ಮಂಜಿತ್ ಚಿಲ್ಲರ್, ಯು ಮುಂಬೈ ತಂಡದ ನಾಯಕ ಅನೂಪ್, ತೆಲುಗು ಟೈಟಾನ್ ತಂಡದ ರಾಹುಲ್ ಚೌಧರಿ, ದೆಹಲಿಯ ಕಾಶಿಲಿಂಗ್ ಸೇರಿದಂತೆ ಖ್ಯಾತ ಕಬಡ್ಡಿ ಪಟುಗಳು ತಮ್ಮದೇ ಪ್ರತ್ಯೇಕವಾದ ತಂಡದೊಂದಿಗೆ ಕಣಕ್ಕಿಳಿಯಲಿದ್ದಾರೆ. ಪಂದ್ಯಾವಳಿಯು ಕರ್ನಾಟಕ ಕಬಡ್ಡಿ ಫೆಡರೇಶನ್ ಹಾಗೂ ಉತ್ತರಕನ್ನಡ ಜಿಲ್ಲಾ ಕಬಡ್ಡಿ ಫೆಡರೇಶನ್ ಸಹಕಾರದೊಂದಿಗೆ ಡಿಸೆಂಬರ್ 10ರಿಂದ 14ರವರೆಗೆ ನಡೆಯಲಿದೆ. ಈಗಾಗಲೇ ಭಟ್ಕಳ ತಾಲೂಕು ಕ್ರೀಡಾಂಗಣ, ಜಾಲಿ ಕೋಲಾ ಮೈದಾನ, ವೆಂಕಟಾಪುರ ಐಸ್‍ಫ್ಯಾಕ್ಟರಿ ಪಕ್ಕದ ಮೈದಾನ, ಭಟ್ಕಳ ಅಂಜುಮನ್ ಕಾಲೇಜು ಮೈದಾನಗಳನ್ನು ಪಂದ್ಯಾವಳಿ ನಡೆಸಲು ಪಟ್ಟಿ ಮಾಡಿಕೊಳ್ಳಲಾಗಿದ್ದು, ಭಾರತ ಕಬಡ್ಡಿ ಫೆಡರೇಶನ್ನಿನ ವೀಕ್ಷಕರು ಆಗಮಿಸಿದ ನಂತರವಷ್ಟೇ ಇವುಗಳಲ್ಲಿ ಒಂದು ಮೈದಾನವನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ಆಟಗಾರರಿಗೆ ಅತ್ಯುತ್ತಮ ಗುಣಮಟ್ಟದ ವಸತಿ ಹಾಗೂ ಊಟೋಪಚಾರ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಕನ್ನಡ ಚಿತ್ರ ತಾರೆ ಶಿವರಾಜಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಪಂದ್ಯಾವಳಿಗೆ ಇನ್ನಷ್ಟು ಮೆರುಗನ್ನು ನೀಡಲು ಉತ್ತರಭಾರತದ ಪ್ರಮುಖ ರಾಜಕಾರಣಿಯೋರ್ವರನ್ನು ಆಹ್ವಾನಿಸುವ ಬಗ್ಗೆ ಚರ್ಚೆ ನಡೆದಿದೆ. ಮುಂದಿನ ಕೆಲವೇ ದಿನಗಳಲ್ಲಿ ಪಂದ್ಯಾವಳಿ ಸಂಘಟನೆಗಾಗಿ ಸಮಿತಿಯೊಂದನ್ನು ರಚಿಸಲಾಗುತ್ತಿದ್ದು, ಉತ್ತರಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ, ಸಂಸದ ಅನಂತಕುಮಾರ ಹೆಗಡೆ, ಶಾಸಕ ಮಂಕಾಳು ವೈದ್ಯರ ಸಹಕಾರವನ್ನು ಕೋರಲಾಗುತ್ತದೆ. ಈ ನಡುವೆ ಸ್ಥಳೀಯವಾಗಿ ಒಂದು ತಂಡವನ್ನು ರಚಿಸಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗುತ್ತಿದ್ದು, ಪೂರ್ವ ತಯಾರಿಯಾಗಿ ಆಟಗಾರರನ್ನು ಅಯ್ಕೆ ಮಾಡಿಕೊಂಡು ಭಟ್ಕಳದ ಹೊರಗೆ ಕನಿಷ್ಠ 1 ತಿಂಗಳ ತರಬೇತಿ ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

Spread the love