ಮಂಗಗಳ ಉಪಟಳ ನಿವಾರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ; ಪ್ರಮೋದ್ ಮಧ್ವರಾಜ್

Spread the love

ಮಂಗಗಳ ಉಪಟಳ ನಿವಾರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ; ಪ್ರಮೋದ್ ಮಧ್ವರಾಜ್

ಉಡುಪಿ: ಹಾವಂಜೆ ಸೇರಿದಂತೆ ಜಿಲ್ಲೆಯ ಹಲವೆಡೆಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಕೃಷಿಕರು ತೊಂದರೆ ಅನುಭವಿಸುತ್ತಿದ್ದಾರೆ. ಅದರಲ್ಲೂ ಮಂಗಗಳ ಕಾಟದಿಂದ ಕೃಷಿಕರು ಕೃಷಿಯನ್ನೆ ಕೈಬಿಟ್ಟಿದ್ದು, ಮಂಗಗಳನ್ನು ನಿಯಂತ್ರಿಸಲು ಸಂತಾನಹರಣ ಚಿಕಿತ್ಸೆ ಮತ್ತು ದಟ್ಟ ಕಾಡಿನೊಳಗೆ ಅವುಗಳನ್ನು ಹಿಡಿದು ಬಿಡಲು ಪೂರಕವಾದ ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸಿ ಎಂದು ಅರಣ್ಯ ಇಲಾಖಾಧಿಕಾರಿಗಳಿಗೆ ಮೀನುಗಾರಿಕೆ, ಯುವಸಬಲೀಕರಣ ಮತ್ತು ಕ್ರೀಡಾ ರಾಜ್ಯ ಸಚಿವ ಪ್ರಮೋದ್ ಮಧ್ವರಾಜ್ ಸೂಚನೆ ನೀಡಿದರು.

havanje

ಮಹಾಲಿಂಗೇಶ್ವರ ದೇವಸ್ಥಾನ ಹಾವಂಜೆಯಲ್ಲಿ ವನ್ಯ ಮೃಗಗಳ ಹಾವಳಿ ಕುರಿತು ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯವರೊಂದಿಗೆ ವಿಶೇಷ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಕಾಡಿನ ಹಾಗೂ ಕಾಡು ಪ್ರಾಣಿಗಳ ಅಗತ್ಯವನ್ನು ಪ್ರತಿಪಾದಿಸಿದ ಸಚಿವರು, ಇದೇ ವೇಳೆ ಜನಹಿತವನ್ನು ಕಾಯುವ ಹೊಣೆ ಅರಣ್ಯ ಇಲಾಖೆಯದ್ದು ಎಂದರಲ್ಲದೆ, ಜನರಿಗೆ ತೊಂದರೆ ನೀಡುವ ದಾರಿ ಬದಿ ಇರುವ ಅಪಾಯಕಾರಿ ಮರ ಕಡಿಯಲು ಹಾಗೂ ಅಕೇಷಿಯ ಮರಗಳನ್ನು ಕಡಿಯುವುದರಿಂದ ದಾರಿಹೋಕರಿಗೆ ನೆರವಾಗಲಿದೆ. ಒಂದು ವಾರದೊಳಗಾಗಿ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಪ್ರಮೋದ್ ಮಧ್ವರಾಜ್ ನಿರ್ದೇಶನ ನೀಡಿದರು.

ಸಮಗ್ರವಾಗಿ ಪ್ರಸ್ತಾವನೆ ಸಲ್ಲಿಸುವುದರಿಂದ ಮುಂದಿನ ಬಜೆಟ್‍ನಲ್ಲಿ ಪ್ರಸ್ತಾವನೆಗೆ ಅನುಮೋದನೆ ದೊರಕಿಸಬಹುದು ಎಂದೂ ಸಚಿವರು ಹೇಳಿದರು. ಹಾವಂಜೆಯ ಜನರ ಬೇಡಿಕೆಗೆ ಪೂರಕವಾಗಿ ಈಗಾಗಲೇ ನವೆಂಬರ್ 21ರಂದು ವಲಯ ಅರಣ್ಯಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿ ಮಂಗಗಳನ್ನು ಹಿಡಿಯುವ ತಂಡಕ್ಕೆ ಗ್ರಾಮಸ್ಥರಿಂದ ದೇಣಿಗೆ ಸಂಗ್ರಹಿಸಿ ನೀಡಿ ಪಂಚಾಯಿತಿ ಸಹಕಾರದಿಂದ ಕಾರ್ಯಾಚರಣೆ ನಡೆಸಲಾಗುವುದು. ಬಳಿಕ ಮಂಗಗಳನ್ನು ಅರಣ್ಯದೊಳಗೆ ಬಿಡುವ ಕೆಲಸವನ್ನು ಅರಣ್ಯ ಇಲಾಖೆ ಮಾಡಲಿದೆ ಎಂದು ಅರಣ್ಯ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.

ಇದೇ ರೀತಿ ಕಾಡುಕೋಣಗಳ ಉಪಟಳ ನಿವಾರಣೆಗೆ ಶೇ. 50 ಸಬ್ಸಿಡಿ ಬಳಸಿ ಸೌರಬೇಲಿ ಹಾಕುವ ಕುರಿತ ಮಾಹಿತಿಯನ್ನು ಅರಣ್ಯ ಇಲಾಖಾಧಿಕಾರಿಗಳು ನೀಡಿದರು.

ಸಭೆಯಲ್ಲಿ ಪಾಲ್ಗೊಂಡ ಮಾಜಿ ಪಂಚಾಯಿತಿ ಅಧ್ಯಕ್ಷರಾದ ಭಾಸ್ಕರ ಶೆಟ್ಟಿ ಅವರು, ಹಾವಂಜೆಯಲ್ಲೇ 2000 ಮಂಗಗಳಿದ್ದು, ವಾರ್ಷಿಕ 65 ಲಕ್ಷ ರೂ. ತೆಂಗುಕೃಷಿಕರೊಬ್ಬರಿಗೆ ಸರಾಸರಿ ಲೆಕ್ಕ ಹಾಕಿದರೆ ನಷ್ಟವಾಗುತ್ತಿದೆ ಎಂದು ವಿವರಿಸಿದರು. ಗ್ರಾಮದ ಮಹಿಳೆಯರು ಸಂಜೆ ರಸ್ತೆ ಬದಿಯಲ್ಲಿ ಚಿರತೆಯನ್ನು ಕಂಡಬಗೆಯೂ ಮಾಹಿತಿ ನೀಡಿದರು.

ಈಗಾಗಲೇ ಇಲ್ಲಿ ಜಿಂಕೆಯ ತಿವಿತದಿಂದ ಮೃತಪಟ್ಟವರಿಗೆ, ಕಾಡುಕೋಣದಿಂದ ಬೆಳೆ ನಾಶವಾದುದಕ್ಕೆ ಪರಿಹಾರ ದೊರಕಿದ್ದರೂ ಶಾಶ್ವತ ಪರಿಹಾರಕ್ಕೆ ಎಲ್ಲ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದ ಸಚಿವರು, ಗ್ರಾಮಕ್ಕೆ ಆಟದ ಮೈದಾನ, ಮೀಸಲು ಅರಣ್ಯಕ್ಕೆ ರಸ್ತೆ ಮುಂತಾದ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಗ್ರಾಮಸ್ಥರಿಂದ ಸ್ವೀಕರಿಸಿದರು.

ಈಗಾಗಲೇ ಡೀಮ್ಡ್ ಫಾರೆಸ್ಟ್‍ನಿಂದ ವಿರಹಿತ ಗೊಳಿಸಲು ವರದಿಯನ್ನು ಸಲ್ಲಿಸಲಾಗಿದ್ದು, ಹಾವಂಜೆಯಲ್ಲಿ 200 ಎಕರೆಯಷ್ಟು ಭೂಮಿಯನ್ನು ಡೀಮ್ಡ್ ಫಾರೆಸ್ಟ್ ನಿಂದ ಕೈಬಿಡಲು ಕ್ರಮಕೈಗೊಂಡಿದೆ.

ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ತೋನ್ಸೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮರನಾಥ್, ಎಸಿಎಫ್ ಸತೀಶ್ ಬಾಬಾ ರೈ, ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೋ, ನಿವೃತ್ತ ಅರಣ್ಯ ಇಲಾಖೆ ಅಧಿಕಾರಿಗಳಾದ ರಾಜಗೋಪಾಲ್ ಶೆಟ್ಟಿ, ರವಿರಾಜ್ ಶೆಟ್ಟಿ, ಬ್ರಹ್ಮಾವರ ತಹಸೀಲ್ದಾರ್ ಪ್ರದೀಪ್ ಕುಡ್ವೇಕರ್, ಉಡುಪಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶೇಷಪ್ಪ, ಸ್ಥಳೀಯ ಜನಪ್ರತಿನಿಧಿಗಳಿದ್ದರು. ಶಿಕ್ಷಕ ಪ್ರಶಾಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love