ಮಂಗಳೂರು: ಕಿಡ್ನಿ ರೋಗಿಗಳ ಸಮಾವೇಶ : ಪ್ರತಿನಿಧಿ ನೋಂದಾವಣೆ ಆರಂಭ

Spread the love

ಮಂಗಳೂರು: ಕಿಡ್ನಿ ರೋಗಿಗಳ ಸಂಘವು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಲವು ಸಾಮಾಜಿಕ ಸಂಘಟನೆಗಳ ಸಹಯೋಗದೊಂದಿಗೆ ಮಾ. 10ರಂದು (ವಿಶ್ವ ಕಿಡ್ನಿ ದಿನಾಚರಣೆಯಂದು) ‘ಕಿಡ್ನಿ ರೋಗಿಗಳ ಸಮಾವೇಶ’ವನ್ನು ಹಮ್ಮಿಕೊಂಡಿದೆ.

ಮಂಗಳೂರಿನ ಪುರಭವನದಲ್ಲಿ ಬೆಳಿಗ್ಗೆ ಗಂ. 9.30ರಿಂದ ಮಧ್ಯಾಹ್ನ 2.00ರ ತನಕ ನಡೆಯಲಿರುವ ಈ ಸಮಾರಂಭದಲ್ಲಿ ವೈದ್ಯರೊಂದಿಗೆ ಸಂವಾದ, ಜನಪ್ರತಿನಿಧಿಗಳ ಅಧಿವೇಶನ, ಕಿಡ್ನಿ ರೋಗಿಗಳಿಗೆ ಆರ್ಥಿಕ ನೆರವು ಮತ್ತು ಉಚಿತ ಔಷಧ ನೀಡುವ ‘ಕಿಡ್ನಿ ರೋಗಿಗಳ ಕ್ಷೇಮಾಭಿವೃದ್ದಿ ಯೋಜನೆ’ಗೆ ಚಾಲನೆ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ. ದೇಶದ ಖ್ಯಾತ ಕಿಡ್ನಿ ರೋಗ ತಜ್ಞ ಕೊಯಂಬತ್ತೂರಿನ ಡಾ. ವಿವೇಕ್ ಪಾಠಕ್ ಗೌರವ ಅತಿಥಿಯಾಗಿ ಭಾಗವಹಿಸಲಿರುವ ಸಭೆಯಲ್ಲಿ ಸರಕಾರವು ಕಿಡ್ನಿ ರೋಗಿಗಳಿಗೆ ನೂತನ ಯೋಜನೆಗಳನ್ನು ರೂಪಿಸುವಂತೆಯೂ ಒತ್ತಾಯಿಸಲಾಗುವುದು.

ಡಯಾಲಿಸಿಸ್ ಹಂತದಲ್ಲಿರುವ ಮತ್ತು ಕಿಡ್ನಿ ಕಸಿ ಮಾಡಿಸಿರುವ ರೋಗಿಗಳು ಮತ್ತವರ ಕುಟುಂಬ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳ ಸದಸ್ಯರು ಈ ಸಮಾವೇಶದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸುವಬಹುದು. ಪ್ರವೇಶ ಉಚಿತವಾಗಿದ್ದು, ಸಮಾವೇಶದಲ್ಲಿ ಭಾಗವಹಿಸುವ ಪ್ರತಿನಿಧಿಗಳಿಗೆ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ನರ್ಸಿಂಗ್ ಮತ್ತು ತುರ್ತು ವೈದ್ಯಕೀಯ ಸೇವೆ ನೀಡಲಾಗುವುದು.

ಆಸಕ್ತರು ಹೆಸರು ನೋಂದಾವಣೆ ಮತ್ತು ಹೆಚ್ಚಿನ ಮಾಹಿತಿಗಳಿಗಾಗಿ, ಮಾ. 8ರ ಒಳಗಾಗಿ ಕಿಡ್ನಿ ರೋಗಿಗಳ ಸಂಘ, 2ನೇ ಮಹಡಿ, ಅಲ್ ರಹಬಾ ಪ್ಲಾಝಾ, ನೆಲ್ಲಿಕಾಯಿ ರಸ್ತೆ, ಮಂಗಳೂರು – 575001 ದೂ. ಸಂ. 0824–4261320, 9663970988, 9845054191ನ್ನು ಸಂಪರ್ಕಿಸಬಹುದು ಎಂದು ವಿಶ್ವ ಕಿಡ್ನಿ ದಿನಾಚರಣೆ ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಉಮರ್ ಯು. ಹೆಚ್. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love