ಮಂಗಳೂರು: ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿರುವ ಎಸ್.ಕೆ. ಗೋಲ್ಡ್ ಸ್ಮಿತ್  ಬ್ಯಾಂಕ್ ಕಳ್ಳತನ

Spread the love

ಮಂಗಳೂರು: ಕಿನ್ನಿಗೋಳಿ ಮುಖ್ಯ ರಸ್ತೆಯಲ್ಲಿರುವ ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರೀಯಲ್ ಕೋ-ಒಪರೇಟಿವ್ ಸೊಸೈಟಿ ಬ್ಯಾಂಕಿಗೆ ಕಳ್ಳರು ನುಗ್ಗಿ ಚಿನ್ನಾಭರಣ ನಗದು ದೋಚಿದ ಘಟನೆ ಶುಕ್ರವಾರ ತಡ ರಾತ್ರಿ ನಡೆದಿದೆ.

  ಕಿನ್ನಿಗೋಳಿ-ಉಲ್ಲಂಜೆ ರಸ್ತೆಯಲ್ಲಿನ ಅಯ್ಯಂಗಾರ್ ಬೇಕರಿಯ ಹಿಂಬಾಗದ ಕಿರಿದಾದ ದಾರಿ ಮೂಲಕ ಬ್ಯಾಂಕ್ ಹಿಂಬದಿಯಲ್ಲಿರುವ ನಿರ್ಮಾಣ ಹಂತದ ಕಟ್ಟಡವನ್ನು ಹತ್ತಿ ಬ್ಯಾಂಕ್ ಕಟ್ಟಡ ಮೇಲ್ಬಾಗದ ಮಹಡಿಯ ಮೂಲಕ ಒಂದನೇ ಮಹಡಿಯಲ್ಲಿರುವ ಬ್ಯಾಂಕ್‌ನ ಮುಂಬಾಗಿಲಿನ ಶೆಟರ್ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಬ್ಯಾಂಕಿನ ಮೈನ್ ಸ್ವಿಚ್ ತೆಗೆದು, ಸೈರನ್ ವಯರ್ ಕಡಿದು, ಸಿಸಿ ಟಿವಿಯ ಫೂಟೇಜ್ (ರೆಕಾರ್ಡರ್) ಶೇಖರಣೆಯ ಸಾಧನವನ್ನೇ ಚಿನ್ನಾಭರಣದೊಂದಿಗೆ ಕದ್ದೊಯಿದ್ದಾರೆ.

ಬ್ಯಾಂಕಿನ ಒಳ ಬಾಗದಲ್ಲಿ ಮೂರು ಲಾಕರ್‌ಗಳು ಇದ್ದು ಅದರಲ್ಲಿ ಒಂದು ಲಾಕರ್‌ನ್ನು ಮಾತ್ರ ಮುರಿದು ಚಿನ್ನವನ್ನು ಕದ್ದೊಯಿದ್ದಿದ್ದಾರೆ. ನಗದು ಹಣವನ್ನು ಕೂಡ ಕದ್ದೊಯ್ದಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ತಮಿಳುನಾಡಿನ ಬೆಂಕಿ ಪೊಟ್ಟಣವೊಂದು ಪತ್ತೆಯಾಗಿದ್ದು, ತಮಿಳುನಾಡಿನ ಕಳ್ಳರು ಭಾಗಿಯಾಗಿರುವ ಸಾಧ್ಯತೆ ಅಥವಾ ತನಿಖೆಯ ದಿಕ್ಕನ್ನು ಬದಲಾಯಿಸಲು ಈ ಬೆಂಕಿ ಪೊಟ್ಟಣವನ್ನು ಎಸೆದಿರಬಹುದೆಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕಾಗಮಿಸಿ ಮಾಹಿತಿ ಕಲೆ ಹಾಕಿದೆ. ಇದೊಂದು ವೃತ್ತಿಪರ ತಂಡದ ಕೃತ್ಯವೆಂದೇ ಪೊಲೀಸರು ಶಂಕಿಸಿದ್ದಾರೆ. ಚಿನ್ನಾಭರಣಗಳ ಮೌಲ್ಯ ಮಾಪನ ನಡೆದಿದೆ.

ಸ್ಥಳಕ್ಕೆ ಡಿಸಿಪಿ ಶಾಂತರಾಜು, ಕ್ರೈಮ್ ಡಿಸಿಪಿ ಸಂಜೀವ ಪಾಟೀಲ್, ಎಸಿಪಿ ಮದನ್ ಗಾಂವ್ಕರ್, ಎಎಸ್‌ಐ ವಾಮನ್ ಸಾಲಿಯಾನ್ ಭೇಟಿ ನೀಡಿ ಮೊಕದ್ದಮೆ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.


Spread the love