ಮಂಗಳೂರು: ಜಿಲ್ಲೆಯಲ್ಲಿ ಶಾಂತಿ ಭಂಗಕ್ಕೆ ಯತ್ನಿಸುವವರ ವಿರುದ್ದ ಕಠಿಣ ಕ್ರಮ: ಸಚಿವ ಯು.ಟಿ. ಖಾದರ್‌

Spread the love

ಮಂಗಳೂರು: ಉಳ್ಳಾಲ, ತಲಪಾಡಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಕಳೆದ ಹಲವು ದಿನಗಳಿಂದ ಅಮಾಯಕರ ಮೇಲೆ ಹಲ್ಲೆ ಹಾಗೂ ಶಾಂತಿಭಂಗ ಯತ್ನಗಳು ನಡೆಯುತ್ತಿದ್ದು, ದುಷ್ಕೃತ್ಯಗಳನ್ನು ನಡೆಸುವವರ ವಿರುದ್ಧ ಪೊಲೀಸ್‌ ಇಲಾಖೆ ಕಾರ್ಯಾಚರಣೆ ಸಂದರ್ಭ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ  ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡ ರಚಿಸಲು ಮಂಗಳೂರು ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ. ಖಾದರ್‌ ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರದೇಶಗಳಲ್ಲಿ ದುಷ್ಕರ್ಮಿಗಳು ಮುಸುಕುಧಾರಿಗಳಾಗಿ ಮೋಟಾರ್‌ಬೈಕ್‌ಗಳಲ್ಲಿ ಬಂದು ಅಮಾಯಕರಿಗೆ ಚೂರಿಯಿಂದ ಇರಿಯುವ, ಹಲ್ಲೆ ನಡೆಸುವ ಕೃತ್ಯಗಳು ನಡೆಯುತ್ತಿವೆ. ಈ ಮೂಲಕ ಸಮುದಾಯಗಳ ನಡುವೆ ಸಂಘರ್ಷ ಹುಟ್ಟುಹಾಕುವ ಯುತ್ನ ಈ ದುಷ್ಟ ಶಕ್ತಿಗಳಿಂದ ಆಗುತ್ತಿದೆ. ಪೊಲೀಸ್‌ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಾಜಘಾತುಕ ಶಕ್ತಿಗಳ ವಿರುದ್ಧ ಕಠಿನ ಕ್ರಮಕೈಗೊಂಡು ಜನರಲ್ಲಿ ವಿಶ್ವಾಸ ಮೂಡಿಸುವ ಕಾರ್ಯ ಮಾಡಬೇಕು ಎಂದರು.

ರಾಜ್ಯದ ಪ್ರಪ್ರಥಮ ‘ಮಕ್ಕಳ ಆರೋಗ್ಯ ಸಮಸ್ಯೆ ಶೀಘ್ರ ಗುರುತಿಸುವಿಕೆ ಚಿಕಿತ್ಸಾ ಕೇಂದ್ರ'(ಇಐಸಿ)ವನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆ ಆವರಣದಲ್ಲಿ ತಿಂಗಳೊಳಗೆ ಉದ್ಘಾಟಿಸಲಾಗುವುದು ಎಂದು ಖಾದರ್ ಹೇಳಿದರು.

ಇದಕ್ಕಾಗಿ ವೆನ್‌ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಕಟ್ಟಡ ಸಿದ್ಧಗೊಳ್ಳುತ್ತಿದೆ. ಅತ್ಯಾಧುನಿಕ ಸೌಲಭ್ಯಗಳು ಹಾಗೂ ಸಿಬ್ಬಂದಿಯನು ್ನನಿಯೋಜಿಸಿ ಹುಟ್ಟು ಮಗುವಿನಿಂದ 18 ವರ್ಷದ ವರೆಗಿನ ಮಕ್ಕಳಲ್ಲಿರುವ ನ್ಯೂನತೆಯನ್ನು ಆರಂಭದ ಹಂತದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಇಲ್ಲಿ ಕಲ್ಪಿಸಲಾಗುತ್ತದೆ ಎಂದರು.

ಮಕ್ಕಳಲ್ಲಿ ಬರುವ ಮೆದುಳು ಸಮಸ್ಯೆ, ಬೆನ್ನು ಹುರಿ ರಚನೆ ನ್ಯೂನತೆ, ಬುದ್ಧಿಮಾಂದ್ಯತೆ, ವಂಶವಾಹಿನಿ ಸಮಸ್ಯೆ, ಸೀಳ್ದುಟಿ, ವಕ್ರಪಾದ, ಕಣ್ಣಿನ ಪೊರೆ, ಅಕ್ಷಪಟಲದ ಕಾಯಿಲೆ, ರಕ್ತ ಹೀನತೆ, ಗಲಗಂಡ, ಶ್ರವನ ದೋಷ, ಹೃದಯ ಸಂಬಂಧಿ ಖಾಯಿಲೆ, ದಂತ ಸಂಬಂಧಪಟ್ಟ ಕಾಯಿಲೆ, ಕಿವುಡುತನ, ರಕ್ತಹೀನತೆ ಹೀಗೆ ನಾನಾ ರೋಗಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡಿ, ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮುಂದೆ ದೊಡ್ಡ ಪ್ರಮಾಣದಲ್ಲಿ ನ್ಯೂನತೆ ಆಗದಂತೆ ತಡೆಗಟ್ಟುವುದು ಮತ್ತು ಗುಣಪಡಿಸುವ ಕಾರ್ಯವನ್ನು ಇಲ್ಲಿ ಮಾಡಲಾಗುತ್ತದೆ. ಗ್ರಾಮಮಟ್ಟದಲ್ಲಿ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಇಂತಹ ಮಕ್ಕಳನ್ನು ಗುರುತಿಸಿ ಈ ಆಸ್ಪತ್ರೆಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಆರೋಗ್ಯ, ಸಾಮಾಜಿಕ ಅಭಿವೃದ್ಧಿ ಹಾಗೂ ಶಿಕ್ಷಣ ಇಲಾಖೆಗಳು ಜಂಟಿಯಾಗಿ ಇದಕ್ಕೆ ಕೆಲಸ ಮಾಡಲಿವೆ ಎಂದರು.

ಜಿಲ್ಲೆಯಲ್ಲಿ ಈಗಾಗಲೇ ಇಂತಹ ನ್ಯೂನತೆ ಇರುವ 622 ಮಕ್ಕಳನ್ನು ಗುರುತಿಸಲಾಗಿದೆ. ಅವರನ್ನು ಇಲ್ಲಿ ಪರೀಕ್ಷೆಗೆ ಒಳಪಡಿಸಿ , ಚಿಕಿತ್ಸೆ ನೀಡಲಾಗುವುದು. ನ್ಯಾಶನಲ್ ಬಾಲ ಸ್ವಾಸ್ಥ್ಯ ಮಿಷನ್‌ನಡಿ ಇದು ಕಾರ್ಯನಿರ್ವಹಿಸುತ್ತಿದ್ದು, ಚಿಕಿತ್ಸಾ ವೆಚ್ಚವನ್ನು ಅದು ಭರಿಸಲಿದೆ. ಈಗಾಗಲೇ ಒಂದು ಕೋಟಿ ರೂ.ಗಳಷ್ಟು ಹಣ ಇದಕ್ಕೆ ಬಂದಿದೆ ಎಂದರು.

ರೈತರ ಸಮಸ್ಯೆಗಳಿಗೆ ಕೇಂದ್ರ ಸರಕಾರದ ಸ್ಪಂದನೆ ಶೂನ್ಯವಾಗಿದೆ. ಕೇವಲ ಪ್ರಚಾರದಲ್ಲಿ ನಿರತರಾಗಿರುವ ಕೇಂದ್ರ ಸರಕಾರದಿಂದ ರೈತರ, ಜನಸಾಮಾನ್ಯರ ಏಳಿಗೆಗೆ ಯಾವುದೇ ಕಾರ್ಯಕ್ರಮಗಳು ಬಂದಿಲ್ಲ ಎಂದು ಟೀಕಿಸಿದರು.

ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿ ನಿರ್ಲಕ್ಷ್ಯವೇ ಕಾರಣ ಎಂಬುದಾಗಿ ದ.ಕನ್ನಡ ಸಂಸದರು ಟೀಕಿಸಿದ್ದಾರೆ. ಇದು ಸಂಸದರ ಸ್ಥಾನಕ್ಕೆ ಗೌರವ ತರುವಂತದ್ದಲ್ಲ. ರೈತರ ಏಳಿಗೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾಂಗ್ರೆಸ್‌ ಸರಕಾರ ನೀಡಿರುವಷ್ಟು ಕೊಡುಗೆಗಳನ್ನು ಯಾರೂ ಕೂಡ ನೀಡಿಲ್ಲ ಎಂದರು.

ಹಿಂದಿನ ಬಿಜೆಪಿ ಸರಕಾರ ರೈತರ 25,000 ರೂ.ವರೆಗೆ ರೈತರ ಸಾಲ ಮನ್ನಾ ಘೋಷಣೆ ಮಾಡಿ ಒಂದು ಚಿಕ್ಕಾಸು ನೀಡಿರಲಿಲ್ಲ. ಬಳಿಕ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರಕಾರ ಇದಕ್ಕೆ ಅನುದಾನ ಒದಗಿಸಿತು. ರೈತರ ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಒತ್ತು ನೀಡಿ ಶ್ರಮಿಸುತ್ತಿದೆ ಎಂದು ಅವರು ಹೇಳಿದರು.

ಕೇವಲ ಮಕ್ಕಳ ಜತೆ ಸೆಲ್ಫಿ ತೆಗೆಯುವುರಿಂದ ಅವರ ಉದ್ಧಾರವಾಗುವುದಿಲ್ಲ. ಅವರ ಏಳಿಗೆಗೆ ಸಾಮಾಜಿಕ ಭದ್ರತೆಗಳು ಆಗತ್ಯವಿದೆ ಎಂದ ಅವರು, ಕೇಂದ್ರ ಸರಕಾರ ನೀಡಿರುವ ಭರವಸೆಗಳಲ್ಲಿ ಒಂದೂ ಈಡೇರಿಲ್ಲ ಎಂದರು.


Spread the love