ಮಂಗಳೂರು: ಜೈಲು ಭದ್ರತೆ: ಸಿಸಿಟಿವಿ, ಮೊಬೈಲ್ ಜಾಮರ್ ಬಲಗೊಳಿಸಲು ಡಿಸಿ ಸೂಚನೆ

Spread the love

ಮಂಗಳೂರು: ಜೈಲಿನಲ್ಲಿ ಭದ್ರತೆ ತೀವ್ರಗೊಳಿಸಲು ಮೊಬೈಲ್ ಜಾಮರ್ ಸಾಮಥ್ರ್ಯವನ್ನು ಹೆಚ್ಚಿಸಬೇಕು ಮತ್ತು ಇನ್ನಷ್ಟು ಸಿಸಿಟಿವಿ ಅಳವಡಿಸುವಂತೆ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ.

 ಅವರು ಸೋಮವಾರ ಜಿಲ್ಲಾ ಕಾರಾಗೃಹ ಸಂದರ್ಶಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜೈಲಿನಲ್ಲಿ ಕೈದಿಗಳ ಗುಂಪುಗಳ ನಡುವೆ ಪದೇ ಪದೇ ಅಹಿತಕರ ಘಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಭದ್ರತೆಯಲ್ಲಿ ಯಾವುದೇ ರಾಜಿ ಇಲ್ಲ ಎಂದು ಅವರು ಹೇಳಿದರು.

 ನಗರದ ಹೊರವಲಯದಲ್ಲಿ ನೂತನ ಕಾರಾಗೃಹ ನಿರ್ಮಾಣ ಸಂಬಂಧ ಜಾಗ ಕಾದಿರಿಸಲಾಗಿದೆ. ಕಟ್ಟಡ ನಿರ್ಮಾಣ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದ ಅವರು, ಮಹಿಳಾ ಕೈದಿಗಳಿಗೆ ವೃತ್ತಿಪರ ತರಬೇತಿಯನ್ನು ಜೈಲಿನಲ್ಲಿ ನೀಡುವ ಸಂಬಂಧ ಕ್ರಮ ಕೈಗೊಳ್ಳಲು ಜೈಲು ಅಧಿಕಾರಿಗಳಿಗೆ ತಿಳಿಸಿದರು. ಜೈಲಿನಲ್ಲಿ ಶಿಕ್ಷಣ ನೀಡಲು ನಿವೃತ್ತ ಶಿಕ್ಷಕರ ಸೇವೆ ಬಳಸಿಕೊಳ್ಳಲು ಅವರು ತಿಳಿಸಿದರು.

 ಜೈಲು ಅಧೀಕ್ಷಕ ವಿ. ಕೃಷ್ಣಮೂರ್ತಿ ಮಾತನಾಡಿ, ಆರೋಪಿಯು ಜೈಲಿನಲ್ಲಿದ್ದ ಪ್ರಕರಣದಲ್ಲಿ ಜಾಮೀನು ದೊರೆತರೆ, ಬೇರೆ ಪ್ರಕರಣದ ಬಾಡಿ ವಾರಂಟ್ ಆಧಾರದಲ್ಲಿ ಜೈಲಿನಲ್ಲಿ ಬಂಧನದಲ್ಲಿಡಲು ಅವಕಾಶವಿಲ್ಲ ಎಂದು ಹೈಕೋರ್ಟ್ ನಿರ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆಯು ಇಂತಹ ಕೈದಿಗಳನ್ನು ಜೈಲಿನಲ್ಲಿ ಮುಂದುವರಿಸಲು ತಾಂತ್ರಿಕ ಸಮಸ್ಯೆ ಎದುರಿಸುತ್ತಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಮಾತನಾಡಿ, ಈ ಸಂಬಂಧ ಪೊಲೀಸ್ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

 ಸಭೆಗೂ ಮೊದಲು ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ಎಂ.ಜಿ. ಉಮಾ ಅವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ, ಎಸ್‍ಪಿಯವರು ಜೈಲಿನ ಎಲ್ಲಾ ಕೋಣೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

 ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love