ಮಂಗಳೂರು: ಡಿವೈಎಸ್ಪಿ ಅನುಪಮಾ ಶೆಣೈ ಪ್ರಕರಣ ; ತವರು ನೆಲದ ದಕ್ಷ ಅಧಿಕಾರಿಯ ಬೆಂಬಲಕ್ಕೆ ನಿಲ್ಲದ ಕರಾವಳಿಯ ಕಾಂಗ್ರೆಸ್ ಶಾಸಕರು

Spread the love

ಮಂಗಳೂರು: ಕೂಡ್ಲಿಗಿಯ ದಕ್ಷ ಡಿವೈಎಸ್ಪಿ ಅನುಪಮಾ ಶೆಣೈ ಅವರ ವರ್ಗಾವಣೆ ಮಾಡಿದ್ದ ಪ್ರಕರಣ ಸಂಬಂಧ,ಕರೆ ಸ್ವೀಕರಿಸದಿದ್ದಕ್ಕೆ ನಾನೇ ಡಿವೈ ಎಸ್ ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಿದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಇದೀಗ ಸತ್ಯ ಬಾಯ್ಬಿಟ್ಟಿದ್ದರೂ ಕೂಡ ಕರಾವಳಿಯ ನಾಲ್ಕು ಮಂದಿ ಸಚಿವರೂ ತಮ್ಮದೇ ಕರಾವಳಿಯ ದಕ್ಷ ಅಧಿಕಾರಿಯೋರ್ವಳ ಪರ ನಿಲ್ಲದೆ ಮೌನ ವಹಿಸಿದ್ದಾರೆ.

dysp-anupama-31-01-2016

ಕೂಡ್ಲಿಗಿಯ ದಕ್ಷ ಡಿವೈಎಸ್ಪಿ ಅನುಪಮಾ ಶೆಣೈ ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಪಣಿಯೂರಿನ ರಾಧಾಕೃಷ್ಣ ಶೈಣೆಯವರ ಮೂವರು ಮಕ್ಕಳಲ್ಲಿ ಒಬ್ಬರಾಗಿದ್ದಾರೆ. ರಾಧಾಕೃಷ್ಣ ದಂಪತಿಗೆ ಮೂವರು ಮಕ್ಕಳು, ಇಬ್ಬರು ಗಂಡು ಮಕ್ಕಳು ಇನ್ನೊಬ್ಬರು ಅನುಪಮಾ. ಕಡು ಬಡತನ ಇದ್ದುದರಿಂದ ಅನುಪಮಾ ತನ್ನ ಮಂಗಳೂರಿನ ಅಜ್ಜಿ ಮನೆಯಿಂದ ಶಾಲೆಗೆ ಹೋಗಿ ವಿದ್ಯಾಭ್ಯಾಸ ಮಾಡಿದ್ದರು. ಮೂರು ಮಕ್ಕಳು ಸೆಟೆಲ್ ಆದ್ರೂ ರಾಧಾಕೃಷ್ಣ ಶೆಣೈ ಇಗಲೂ ಕ್ಯಾಂಟೀನ್ ಇಟ್ಟುಕೊಂಡು ಸ್ವಾವಲಂಭಿಯಾಗಿ ಜೀವನ ನಡೆಸುತ್ತಿದ್ದಾರೆ.

ಜನವರಿ 18 ರಂದು ರಾಜ್ಯದ ಕಾರ್ಮಿಕ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಸಚಿವ ಪಿ.ಟಿ ಪರಮೇಶ್ವರ್ ನಾಯಕ್ ಡಿವೈಎಸ್ಪಿಯವರಿಗೆ ಕರೆ ಮಾಡಿದ್ದು, ಅವರ ದೂರವಾಣಿ ಕರೆಗೆ ಸ್ಪಂದಿಸಲಿಲ್ಲ ಎಂಬ ಕಾರಣಕ್ಕೆ ಕೂಡ್ಲಿಗಿಯ ದಕ್ಷ ಡಿವೈಎಸ್ ಪಿ ಅನುಪಮಾ ಶೆಣೈ ಅವರನ್ನು ವರ್ಗಾವಣೆ ಮಾಡಲಾಗಿತ್ತು.

ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಕರೆ ಬಂದ ಹಿನ್ನಲೆ, ಸಚಿವರ ಕರೆಯನ್ನು ಹೋಲ್ಡ್ ನಲ್ಲಿರಿಸಿ, ಅಧಿಕಾರಿಯೊಂದಿಗೆ ಮಾತನಾಡಿದ್ದಾರೆ. ನಂತರ ಸಚಿವರ ಕರೆಯನ್ನು ಕನೆಕ್ಟ್ ಮಾಡಿಕೊಂಡಿದ್ದಾರೆ.  ಇದರಿಂದ ಕುಪಿತರಾದ ಸಚಿವರು  ಡಿವೈ ಎಸ್ ಪಿ ಅನುಪಮಾ ಶೆಣೈ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಿದ್ದರು ಎನ್ನುವ ಮಾಹಿತಿ ಹಬ್ಬಿತ್ತು.

ಮಾಧ್ಯಮಗಳಲ್ಲಿ ಸುದ್ದಿ ಹಬ್ಬಿದಾಗ ಜನವರಿ 21ರಂದು ಪ್ರತಿಕ್ರಿಯಿಸಿದ್ದ ಪರಮೇಶ್ವರ್ ನಾಯ್ಕ್ ,ನನಗೂ ವರ್ಗಾವಣೆಗೂ ಯಾವುದೇ ಸಂಬಂಧವಿಲ್ಲ.ಒಂದು ವೇಳೆ ವರ್ಗಾವಣೆಗೆ ನಾನೇ ಕಾರಣ ಎಂಬುದು ಸಾಬೀತಾದರೇ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದ್ದರು. ಆದರೆ ಬಳಿಕ ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯೊಂದರಲ್ಲಿ ಪರಮೇಶ್ವರ್ ನಾಯಕ್ ನನ್ನ ಕರೆಯನ್ನ 40 ಸೆಕೆಂಡ್ ಹೋಲ್ಡ್ ಮಾಡಿದ್ದ ಡಿವೈಎಸ್ಪಿಯನ್ನ ಕೇವಲ ಒಂದು ನಿಮಿಷದಲ್ಲಿ ವರ್ಗಾವಣೆ ಮಾಡಿದ್ದೇನೆ, ನನಗೆ ಯಾರ ಭಯವೂ ಇಲ್ಲ ಎಂದು  ಸಭೆಯಲ್ಲಿ ಹೇಳಿಕೆ  ನೀಡಿದ್ದರು.

ಸತತ ಸುದ್ದಿಯನ್ನು ಪ್ರಕಟಿಸಿ ಪರಮೇಶ್ವರ್ ನಾಯಕ್ ರಾಜೀನಾಮೆಗೆ ಪಟ್ಟು ಹಿಡಿದ ಮಾಧ್ಯಮಗಳು ಹಾಗೂ ಕೂಡ್ಲಿಗಿ ಜನತೆಯ ಕೂಗಿಗೆ ಎಳ್ಳಷ್ಟು ಮಾನ್ಯತೆ ನೀಡದ ರಾಜ್ಯದ ಸಿದ್ದರಾಮಯ್ಯ ಸರಕಾರ ಸಚಿವರ ವಿರುದ್ದ ಯಾವುದೇ ರೀತಿಯ ಕ್ರಮವನ್ನು ಕೂಡ ಕೈಗೊಳ್ಳದೆ ಜಾಣ ಕುರುಡು ಪ್ರದರ್ಶಿಸುತ್ತಿದೆ. ಈ ಸುದ್ದಿ ಇನ್ನಷ್ಟು ಹಬ್ಬಿ ರಾಷ್ಟ್ರಿಯ ಮಾಧ್ಯಮಗಳಾದ ಟೈಮ್ಸ್ ನೌ, ಎಬಿಪಿ ನಿವ್ಸ್ ಇನ್ನಿತರ ಮಾಧ್ಯಮಗಳಲ್ಲಿ ಪ್ರಚಾರ ಪಡೆದಾಗ, ಎಚ್ಚರಗೊಂಡ ಕಾಂಗ್ರೆಸ್ ಹೈಕಮಾಂಡ್  ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರಿಂದ ವರದಿಯನ್ನು ಕೇಳಿದೆ. ಪ್ರಕರಣವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ ಎನ್ನುವ ಮಾಹಿತಿ ಇದೆ.

ಸದಾ ನಿಷ್ಟಾವಂತತೆ, ಭ್ರಷ್ಟಾಚಾರ ರಹಿತ ಸರಕಾರ ನೀಡುವ ವಾಗ್ದಾನ ನೀಡುತ್ತಾ ಬಂದಿರುವ ಕಾಂಗ್ರೆಸ್ ಸರಕಾರವನ್ನು ಕರಾವಳಿಯಿಂದ ಏಳು ಮಂದಿ ಶಾಸಕರು, ಇಬ್ಬರು ವಿಧಾನಪರಿಷತ್ ಸದಸ್ಯರೊಂದಿಗೆ ನಾಲ್ಕು ಮಂದಿ ಸಚಿವರನ್ನು ಕರಾವಳಿ ಜಿಲ್ಲೆಗಳು ಹೊಂದಿದೆ. ತಮ್ಮದೇ ಕರಾವಳಿಯ ಒರ್ವ ನಿಷ್ಟಾವಂತ ಹೆಣ್ಣು ಅಧಿಕಾರಿಗೆ ಅನ್ಯಾಯವಾದಾಗ ಕನಿಷ್ಟ ಅದನ್ನು ಪ್ರತಿಭಟಿಸುವ ಸೌಜನ್ಯವನ್ನು ಕೂಡ ತೋರಿಲ್ಲ ಎನ್ನುವುದು ಪ್ರಜ್ಞಾವಂತ ನಾಗರಿಕರ ಅಭಿಪ್ರಾಯ. ಇದಲ್ಲದೆ ತಮ್ಮದೇ ಕ್ಷೇತ್ರದ ಡಿವೈಎಸ್ಪಿ ಹುದ್ದೆಯಲ್ಲಿರುವ ಒರ್ವ ಹೆಣ್ಣು ಮಗಳಾಗಿ ಆಕೆಯ ಸಮಸ್ಯೆಯ ಬಗ್ಗೆ ಕಾಪು ಕ್ಷೇತ್ರದ ಶಾಸಕ ಹಾಗೂ ರಾಜ್ಯದ ನಗರಾಭಿವೃದ್ಧಿ ಸಚಿವರ ಬಳಿ ಘಟನೆಯ ಕುರಿತು ಪ್ರತಿಕ್ರಿಯೆ ಕೇಳಿದಾಗ ಘಟನೆಯ ಕುರಿತು ಸರಿಯಾದ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

ಆದರೆ ತನ್ನ  ನೇರ ಹಾಗೂ ನಿಷ್ಟುರ ಮಾತುಗಳಿಂದ ಪಕ್ಷದ ನಿದ್ದೆಗಡೆಸಿದ ಕಾಂಗ್ರೆಸ್ ಹಿರಿಯ ನಾಯಕ ಜನಾರ್ದನ ಪೂಜಾರಿ ಕಾರ್ಮಿಕ ಸಚಿವ ಪರಮೇಶ್ವರ್ ನಾಯಕ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಬಳ್ಳಾರಿಯಲ್ಲಿ ರೆಡ್ಡಿಗಳು ಸರ್ವಾಧಿಕಾರ ಮನೋಭಾವ ತೋರುತ್ತಿದ್ದಾರೆ ಎಂಬ ಉದ್ದೇಶದಿಂದ ಅಲ್ಲಿನ ಜನತೆ ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿತ್ತು ಆದರೆ ಅಧಿಕಾರ ಪಡೆದ ಬಳಿಕ ಅದೇ ಮಾದರಿಯಲ್ಲಿ ಮುಂದುವರೆಯುತ್ತಿರುವುದು ನಾಚಿಕೆಗೇಡು. ಇದೇ ರೀತಿ ದಕ್ಷ ಅಧಿಕಾರಿಗಳನ್ನು ಪಕ್ಷ ವರ್ಗಾವಣೆ ಮಾಡುತ್ತಾ ಹೋದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಸರ್ವಾನಾಶವಾಗಲಿದ್ದು, ಗೃಹ ಸಚಿವ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಮೇಶ್ವರ್ ನಾಯಕ್ ವಿರುದ್ದ ಕೂಡಲೇ ಸೂಕ್ತ ಕ್ರಮ ಕೈಗೊಳ್ಳೂವಂತೆ ಅವರು ಒತ್ತಾಯಿಸಿದ್ದಾರೆ.

ಒಟ್ಟಾರೆ ಉತ್ತಮ ಆಡಳಿತ ನೀಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೆಸ್ ಪಕ್ಷ ದಿನಕ್ಕೊಂದು ಸಮಸ್ಯೆಗಳಿಂದ ಸುದ್ದಿಯಾಗುತ್ತಿರುವುದಂತೂ ಸತ್ಯ. ಇನ್ನಾದರೂ ಕೂಡ ಕರಾವಳಿಯ ಕಾಂಗ್ರೆಸ್ ಶಾಸಕರು ಅನುಪಮಾ ಶೆಣೈ ವಿಚಾರದಲ್ಲಿ ಮೌನ ಮುರಿಯುವರೋ ಎನ್ನುವುದನ್ನು ಕಾದು ನೋಡಬೇಕಾಗಿದೆ.


Spread the love