ಮಂಗಳೂರು: ಪಿಯು ಕಾಲೇಜುಗಳ ರಾಜ್ಯ ಮಟ್ಟದ ಕ್ರೀಡಾಕೂಟ

Spread the love

ಮಂಗಳೂರು: ಕ್ರೀಡಾಪಟುಗಳಿಗೆ ಮತ್ತೊಂದು ಸುವರ್ಣಾವಕಾಶ ಲಭ್ಯವಾಗಲಿದ್ದು ಇದೇ ಡಿಸೆಂಬರ್ 3 ರಿಂದ 6 ವರೆಗೆ ನಾಲ್ಕು ದಿನಗಳ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ ಮಂಗಳ ಕ್ರೀಡಾಂಗಣದಲ್ಲಿ ನಗರದ ರಾಮಕೃಷ್ಣ ಪದವಿ ಪೂರ್ವ ಕಾಲೇಜು ಪ್ರಾಯೋಜಕತ್ವದಲ್ಲಿ ಏರ್ಪಡಿಸಲಾಗುವುದೆಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಪಿ.ವಿ.ಜೊಸೆಫ್ ಅವರು ತಿಳಿಸಿದ್ದಾರೆ.

 ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಈ ಸಂಬಂದ ನಡೆದ ಸಭೆಯಲ್ಲಿ ಈ ವಿಷಯ ತಿಳಿಸಿದರು.

ಈ ಕ್ರೀಡಾಕೂಟದಲ್ಲಿ ರಾಜ್ಯದ ಎಲ್ಲಾ ಪದವಿ ಪೂರ್ವ ಕಾಲೇಜುಗಳ 1240 ವಿದ್ಯಾರ್ಥಿಗಳು ಹಾಗೂ 1240 ವಿದ್ಯಾರ್ಥಿನಿಯರು ಸೇರಿದಂತೆ ಸುಮಾರು 2800ಕ್ಕೂ ಹೆಚ್ಚಿನ ಕ್ರೀಡಾಪಟುಗಳು ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ|ಕಿಶೋರ್ ಕುಮಾರ ರೈ ಅವರು ತಿಳಿಸಿದರು.

ಸಭೆಯಲ್ಲಿ ಹಾಜರಿದ್ದ ಆರೋಗ್ಯ ಸಚಿವ ಯು.ಟಿ.ಖಾದರ್ ಹಾಗೂ ಶಾಸಕರಾದ ಜೆ.ಆರ್.ಲೋಬೊ ಅವರು ಮಾತನಾಡಿ ಕ್ರೀಡಾಕೂಟ ಯಶಸ್ಸಿಗೆ ಜಿಲ್ಲೆಯವರೆ ಆದ ಯುವಜನಸೇವಾ ಮತ್ತು ಕ್ರೀಡಾ ಸಚಿವರ ಮಾರ್ಗದರ್ಶನದಲ್ಲಿ ಅಗತ್ಯವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದರು.

ಕ್ರೀಡಾಕೂಟಕ್ಕೆ ಆರೋಗ್ಯ ಇಲಾಖೆಯಿಂದ ಸಂಪೂರ್ಣ ಸಹಕಾರವನ್ನು ನೀಡುವಂತೆ ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|ರಾಜೇಶ್ವರಿ ದೇವಿ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಮಾತನಾಡಿ ಜಿಲ್ಲೆಯ ಹೊರಗಡೆಯಿಂದ ಬರುವ ಕ್ರೀಡಾಪಟುಗಳಿಗೆ ತೊಂದರೆಯಾಗದಂತೆ ವಸತಿ, ಆಹಾರ, ಕ್ರೀಡಾಪಟುಗಳ ಸುರಕ್ಷತೆ ಮುಂತಾದ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನ ಹರಿಸಲು ವಿವಿಧ ಸಮಿತಿಗಳನ್ನು ರಚಿಸುವಂತೆ ಸಲಹೆ ನೀಡಿದರು.

ಸಭಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಜ್ ಕಿಶೋರ್, ಮೇಘನಾಥ ಶೆಟ್ಟಿ, ಹೇಮನಾಥ ಶೆಟ್ಟಿ, ರಾಮಕೃಷ್ಣ ಕಾಲೇಜಿನ ಪ್ರಾಂಶುಪಾಲರಾದ ಡಾ|ನವೀನ್ ಶೆಟ್ಟಿ ಮುಂತಾದವರು ಹಾಜರಿದ್ದರು.

ಡಿಸೆಂಬರ್‍ನಲ್ಲಿ ಪಿಲಿಕುಳದಲ್ಲಿ ಆಯುಷ್ ಉತ್ಸವ

ಮಂಗಳೂರು :  ಜನಸಾಮಾನ್ಯರಲ್ಲಿ ಆಯುರ್ವೇದ ಚಿಕಿತ್ಸೆ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಬರುವ ಡಿಸೆಂಬರ್ 25 ಮತ್ತು 26 ರ ಎರಡು ದನಗಳ “ಆಯುಷ್ ಉತ್ಸವ”ವನ್ನು ಆಯೋಜಿಸಲಾಗುವುದೆಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ತಿಳಿಸಿದ್ದಾರೆ.

ಅವರು ಮಂಗಳವಾರ ಸಂಜೆ ಈ ಸಂಬಂಧ ತಮ್ಮ ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ. ಆಯುಷ್ ಉತ್ಸವದಲ್ಲಿ ಆಯುರ್ವೇದ ಪದ್ದತಿಯ ಆಹಾರೋತ್ಸವ, ವಿವಿಧ ಔಷಧಿ ಸಸ್ಯಗಳ ಪ್ರದರ್ಶನ ಮಾರಾಟ, ತಾಳೆಗರಿ ಗ್ರಂಥಗಳ ಪ್ರದರ್ಶನ,ಔಷಧಿ ಸಸ್ಯಗಳ ಬೆಳೆಗಾರರ ಮತ್ತು ಆಯುರ್ವೇದ ಔಷಧಿ ತಯಾರಕರ ಸಮಾವೇಶ ಮುಂತಾದ ಕಾರ್ಯಕ್ರಮಗಳನ್ನು ಈ ಸಂಧರ್ಭದಲ್ಲಿ ಹಮ್ಮಿಕೊಳ್ಳಲಾಗುವುದೆಂದು ಆಯುರ್ವೇದ ಫೌಂಡೇಶನ್ನನ ಡಾ|ಆಶಾಜ್ಯೋತಿ ತಿಳಿಸಿದರು.

ಆರೋಗ್ಯ ಸಚಿವರ ವಿಶೇóಷಾಧಿಕಾರಿ ಡಾ|ಮೊಹ್ಮದ್ ಇಕ್ಬಾಲ್ ಅವರು ಮಾತನಾಡಿ ಕಳೆದ ವರ್ಷ ದ.ಕ.ಜಿಲ್ಲೆಯಲ್ಲಿ ಆಯುಷ್ ಉತ್ಸವ ಯಶಸ್ವಿಯಾಗಿ ನಡೆಸಲಾಗಿದ್ದ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ತಿಳಿಸಿ ಅವಿಭಜಿತ ದ.ಕ.ಜಿಲ್ಲೆ (ದ.ಕ. ಮತ್ತು ಉಡುಪಿ)ಯಲ್ಲಿ 50ಕ್ಕೂ ಹೆಚ್ಚು ಆಯುರ್ವೇದ ಔಷದ ತಯಾರಕರು ಇದ್ದಾರೆ, ದ.ಕ.ಜಿಲ್ಲೆಯಲ್ಲಿ 9 ಆಯುಷ್ ಸರ್ಕಾರಿ ಚಿಕಿತ್ಸಾಲಯಗಳು ಇವೆ, ಜಿಲ್ಲೆಯಲ್ಲಿ ಶೇ.25%ಕ್ಕೂ ಹೆಚ್ಚಿನ ಜನರು ಆಯುರ್ವೇದ ಚಿಕಿತ್ಸೆಗಳನ್ನು ಅವಲಂಬಿಸಿದ್ದಾರೆ, 10 ಆಯುರ್ವೇದ ಕಾಲೇಜುಗಳು ಇದ್ದು ಸುಮಾರು 4000 ವಿದ್ಯಾರ್ಥಿಗಳು ಆಯುರ್ವೇದ ಶಾಸ್ತ್ರ ಅಭ್ಯಸ ಮಾಡುತ್ತಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.

ಆಯುಷ್ ಉತ್ಸವದ ಅಂಗವಾಗಿ ಪಿಲಿಕುಳದಲ್ಲಿ ಸಾಮೂಹಿಕ ಯೋಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದೆಂದು ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ ಅವರು ಸಭೆಯಲ್ಲಿ ತಿಳಿಸಿದರು.

ಉತ್ಸವದ ನಿಮಿತ್ತ ಪ್ರೌಡಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವದೆಂದು ಜಿಲ್ಲಾ ಆಯುಷ್ ಅಧಿಕಾರಿ ಡಾ|ದೇವದಾಸ್ ತಿಳಿಸಿದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|ರಾಮಕೃಷ್ಣ ರಾವ್, ಪಿಲಿಕುಳ ನಿಸರ್ಗದಾಮದ ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಶರ್ಮಾ ಮುಂತಾದವರು ಹಾಜರಿದ್ದರು.

ಮಂಗಳೂರಿಗೆ  ವಿಧಾನ ಮಂಡಲದ ಮಹಿಳಾ-ಮಕ್ಕಳ ಕಲ್ಯಾಣ ಸಮಿತಿ

ಮಂಗಳೂರು : ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಮಾಲಿಕಯ್ಯ ವಿ ಗುತ್ತೇದಾರ್ ಅವರ ಅಧ್ಯಕ್ಷತೆಯಲ್ಲಿ 20ಜನ ಸಮಿತಿ ಸದಸ್ಯರು ಅಕ್ಟೋಬರ್ 14ರಂದು  ಮಂಗಳೂರಿಗೆ ಆಗಮಿಸಿ ದ.ಕ.ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಮೈಸೂರು ವಿಭಾಗದ ದಕ್ಷಿಣ ಕನ್ನಡ, ಉಡುಪಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ 9 ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರು ತಿಳಿಸಿದ್ದಾರೆ.

 ಅವರು ಇಂದು ತಮ್ಮ ಕಚೇರಿಯಲ್ಲಿ ಈ ಕುರಿತು ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಗೃಹ ಮತ್ತು ಅಬಕಾರಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ವೈಧ್ಯಕೀಯ ಶಿಕ್ಷಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಕಂದಾಯ ಇಲಾಖೆ ಮತ್ತು ನಗರಾಭಿವೃದ್ಧಿ ಇಲಾಖೆಗಳ ಪ್ರಗತಿ ಪರಿಶೀಲನೆಯನ್ನು ನಡೆಸಲಿದ್ದಾರೆ. ದ.ಕ ಜಿಲ್ಲೆಯ ಈ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ  ಕಳೆದ 2 ವರ್ಷಗಳ ಅವಧಿಯ ಪ್ರಗತಿ ಮಾಹಿತಿಗಳನ್ನು ಸಿದ್ಧಿಪಡಿಸಿ ಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸುಂದರ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.


Spread the love