ಮಂಗಳೂರು: ಪುರಭವನ ಕಾಮಗಾರಿ ವಿಳಂಬ ಗಣೇಶ್ ಕಾರ್ಣಿಕ್ ಪ್ರತಿಭಟನೆಯ ಎಚ್ಚರಿಕೆ

Spread the love

ಮಂಗಳೂರು:  ಪುರಭವನದ ನವೀಕರಣ ಕಾಮಗಾರಿಯನ್ನು ಮುಂದಿನ ಪಾಲಿಕೆಯ ಸಾಮಾನ್ಯ ಸಭೆಯ ಒಳಗೆ ಪೂರ್ತಿಗೊಳಿಸದೆ ಹೋದಲ್ಲಿ ಬಿಜೆಪಿ ವತಿಯಿಂದ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಅವರು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು  ಐತಿಹಾಸಿಕ ಹಿನ್ನಲೆಯುಳ್ಳ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಕೀರೀಟದಂತಿರುವ ಮಂಗಳೂರಿನ ಪುರಭವನಕ್ಕೆ ಕಳೆದ ವರ್ಷ ಡಿಸೆಂಬರ್ 26 ರಂದು 50 ವರ್ಷ ತುಂಬುವಂತಹ ಸಂದರ್ಭದಲ್ಲಿ ನವೀಕರಣಗೊಳಿಸಿ ಆಧುನಿಕ ಶೈಲಿಯಲ್ಲಿ ಸಾರ್ವಜನಿಕರಿಗೆ ಒದಗಿಸಿ ಕೊಡಬೇಕೆಂಬ ಉದ್ದೇಶದಿಂದ ಮಾಜಿ ಮಹಾಪೌರರಾದ  ಮಹಾಬಲ ಮಾರ್ಲರವರು ಸೆಪ್ಟೆಂಬರ್ 19, 2014 ರಂದು ಬಂದ್ ಮಾಡಿ ಡಿಸೆಂಬರ್ 26ಕ್ಕೆ ನವೀಕರಣಗೊಳಿಸಿ ಉದ್ಘಾಟನೆ ಮಾಡುತ್ತೇವೆ ಎಂಬ ಹೇಳಿಕೆಯನ್ನು ನೀಡಿದ್ದರು.

ಇದಕ್ಕಾಗಿ ಸುಮಾರು ನಾಲ್ಕು ಕೋಟಿ ವೆಚ್ಚ ಮಾಡುವುದೆಂದು ಅಂದಾಜಿಸಲಾಗಿತ್ತು.  ಈ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡುವ ನಿಟ್ಟಿನಲ್ಲಿ ಸರಕಾರಿ ಅಂಗ ಸಂಸ್ಥೆಯಾದ ನಿರ್ಮಿತಿ ಕೇಂದ್ರಕ್ಕೆ ನೀಡುವುದೆಂದು ತೀರ್ಮಾನಿಸಲಾಗಿತ್ತು.  ಈ ಕಾಮಗಾರಿಗೆ ಮ.ನ.ಪಾದ ಸಾಮಾನ್ಯ ಸಭೆಯಲ್ಲಿ ಮೊದಲ ಹಂತದ ಕಾಮಗಾರಿಗೆ ದಿನಾಂಕ 29.09.2014 ರಂದು ನಡೆದ ಸಾಮಾನ್ಯ ಸಭೆಯಲ್ಲಿ 99.75 ಲಕ್ಷ ರೂಪಾಯಿಯನ್ನು ಅಂದಿನ ಮಾನ್ಯ ಮೇಯರ್ ಆದ ಮಹಾಬಲ ಮಾರ್ಲಾರವರು ಪೂರ್ವಭಾವಿ ಮಂಜೂರಾತಿಯನ್ನು ನೀಡಿ ಕೆಲಸ ಪ್ರಾರಂಭಿಸಿದರು.  ಮುಂದಿನ ಸಾಮಾನ್ಯ ಸಭೆ ದಿನಾಂಕ 29.10.2014 ರಂದು ಪುನ: 98 ಲಕ್ಷ ರೂಪಾಯಿ ಪೂರ್ವಭಾವಿ ಮಂಜೂರಾತಿಯನ್ನು ನೀಡಿ ಸ್ಥಿರೀಕರಿಸಲಾಯಿತು.  ದಿನಾಂಕ 26.11.2014 ರಂದು ನಿರ್ಮಿತಿ ಕೇಂದ್ರದ ಅಧ್ಯಕ್ಷರಾದ ಜಿಲ್ಲಾಧಿಕಾರಿಗಳು ಸಿಬ್ಬಂದಿಯ ಕೊರತೆ ಇರುವ ಕಾರಣ ನಮ್ಮಿಂದ ಈ ಕಾಮಗಾರಿಯನ್ನು ಮಾಡಲಿಕ್ಕೆ ಆಗುವುದಿಲ್ಲ ವೆಂಬ ಕಾರಣ ನೀಡಿ ಎರಡನೇ ಹಂತದ 98 ಲಕ್ಷ ರೂಪಾಯಿಗಳ ಕಡತವನ್ನು ಮ.ನಪಾ.ಕ್ಕೆ ಹಿಂದಿರುತಿಸಿರುತ್ತಾರೆ.  ಇನ್ನೊಂದು ಕಡೆ ಮೊದಲ ಹಂತದ ರೂ. 99.75 ಲಕ್ಷ ರೂಪಾಯಿಗಳ ಕಾಮಗಾರಿಯಲ್ಲಿ ಆಗಿರುವಂತಹದು ಕೇವಲ ರೂ. 30 ಲಕ್ಷ ಗಳು ಮಾತ್ರ.  ನಂತರ ಯಾವುದೇ ಕಾಮಗಾರಿಗಳು ನಡೆದಿರುವುದಿಲ್ಲ.  ಈ ಬಗ್ಗೆ ಮ.ನ.ಪಾ. ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಹಲವು ಬಾರಿ ಪ್ರಸ್ತಾಪಿಸಿದ್ದರೂ ಸಮರ್ಪಕವಾದ ಉತ್ತರ ಸಿಗದ ಕಾರಣ ಮಂಗಳೂರಿನ ನಾಟಕ ಕಲಾವಿದರ, ಯಕ್ಷಗಾನ ಕಲಾವಿದರೊಂದಿಗೆ ಸಾಂಸ್ಕೃತಿಕ, ಸಾಮಾಜಿಕ, ಸರಕಾರ, ಶಾಲಾ ವಾರ್ಷಿಕೋತ್ಸವ ಈ ಎಲ್ಲಾ ಕಾರ್ಯಕ್ರಮ ನಡೆಸಲು ಅನಾನುಕೂಲವಾಗುವುದನ್ನು ಮನಗಂಡು ಅನಿವಾರ್ಯವಾಗಿ ದಿನಾಂಕ 30.05.2015 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಭಟಿಸಿ ಸಭೆಯನ್ನು ಮೊಟಕುಗೊಳಿಸುವಂತೆ ಮಾಡಿ ಕಾಮಗಾರಿಯನ್ನು ಪ್ರಾರಂಭಿಸಿದ ನಂತರವೇ ಸಭೆ ನಡೆಸಿ ಎಂದು ಆಗ್ರಹಿಸಿದ್ದಾರೆ.  ಅಲ್ಲದೆ ಮುಂದಿನ ಸಾಮಾನ್ಯ ಸಭೆಯೊಳಗೆ ಕಾಮಗಾರಿ ಪ್ರಾರಂಭಿಸದೇ ಇದ್ದರೆ ಇದೇ ರೀತಿ ಪ್ರತಿಭಟನೆಯನ್ನು ಮುಂದುವರಿಸುತ್ತೇವೆ ಎಂಬ ಎಚ್ಚರಿಕೆಯನ್ನು ಬಿಜೆಪಿ ಸದಸ್ಯರು ನೀಡಿರುತ್ತಾರೆ.

ಮಹಾನಗರ ಪಾಲಿಕೆಯಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ.  ಬಿಜೆಪಿ ಆಡಳಿತ ಅವಧಿಯಲ್ಲಿ ಮುಖ್ಯ ಮಂತ್ರಿಗಳ ವಿಶೇಷ ಅನುದಾನದ ಎರಡನೇ ಹಂತದ 110 ಕಾಮಗಾರಿಗಳಲ್ಲಿ 77 ಕಾಮಗಾರಿ ಪೂರ್ಣಗೊಂಡಿದ್ದು, 29 ಕೋಟಿ ಮಾತ್ರ ಖರ್ಚಾಗಿದ್ದು, ಬಾಕಿ ಉಳಿದ 33 ಕಾಮಗಾರಿಯ ರೂ. 71 ಕೋಟಿ ಉಳಿಕೆಯಾಗಿರುತ್ತದೆ.

ಮೂರನೇ ಹಂತದ 100 ಕೋಟಿ ವಿಶೇಷ ಅನುದಾನದಲ್ಲಿ ಯಾವುದೇ ಕಾಮಗಾರಿ ಪ್ರಾರಂಭವಾಗಿಲ್ಲ ಇದಕ್ಕೆ ಕಾರಣ ಈ ಜಿಲ್ಲೆಯ ಉಸ್ತುವಾರಿ ಮಂತ್ರಿಗಳಾದಂತಹ ಶ್ರೀ ಬಿ. ರಮಾನಾಥ ರೈಯವರು ಪಾಲಿಕೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸದೆ ಇರುವುದು ಕಾರಣವಾಗಿದೆ.

ನಮ್ಮ ಬಿಜೆಪಿ ಆಡಳಿತದ ಅವಧಿಯಲ್ಲಿ ರೂ.10 ಲಕ್ಷ ಇದ್ದ ಸದಸ್ಯರ ಕ್ಷೇತ್ರಾಭಿವೃದ್ಧಿ ಅನುದಾನವನ್ನು ರೂ. 25 ಲಕ್ಷಕ್ಕೆ ಏರಿಸಿ ಪ್ರತಿಯೊಂದು ಮಹಾನಗರ ಪಾಲಿಕಾ ಸದಸ್ಯರ ವಾರ್ಡಿನ ಅಭಿವೃದ್ಧಿಗಾಗಿ ವಿನಿಯೋಗಿಸಲಾಗಿತ್ತು. ಆದರೆ ಕಾಂಗ್ರೇಸ್‍ನ ಅವಧಿಯಲ್ಲಿ ರೂ.25 ಲಕ್ಷ ಮ.ನ.ಪಾ. ಸದಸ್ಯರ ಕ್ಷೇತ್ರಾಭಿವೃದ್ಧಿ ನಿಧಿಯನ್ನು ರೂ. 15 ಲಕ್ಷಕ್ಕೆ ಇಳಿಸಿರುತ್ತಾರೆ.

ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಶೇ.15 ರಷ್ಟು ಏರಿಸುವುದರ ಮೂಲಕ ಜನರಿಗೆ ವಂಚನೆ ಮಾಡಿದ್ದಾರೆ.

ಘನತ್ಯಾಜ್ಯ ವಿಲೇವಾರಿಕರವನ್ನು ಜಾರಿಗೆ ತರುವ ಮೂಲಕ ಜನರಿಗೆ ಮತ್ತಷ್ಟು ಹೊರೆಯನ್ನು ಹಾಕಿದಂತಾಗಿದೆ.

ಕುಡ್ಸೆಂಪ್ ಯೋಜನೆಯ ನೀರು ಸರಬರಾಜು ಮತ್ತು ಒಳ ಚರಂಡಿ ಯೋಜನೆಗೆ ಈಗಾಗಲೇ ರೂ. 380 ಕೋಟಿ ಸಾಲ ಪಡೆದಿದ್ದು, ಈ ಕಾಮಗಾರಿಯನ್ನು ಪೂರ್ಣಗೊಳಿಸದೇ ಅರ್ಧದಲ್ಲಿ ಬಿಟ್ಟು 2ನೇ ಹಂತದ ನೀರು ಸರಬರಾಜಿಗೆ ರೂ.160 ಕೋಟಿ ಸಾಲ, ಒಳಚರಂಡಿಗೆ ರೂ.120 ಕೋಟಿ ಸಾಲ ಕಾಮಗಾರಿಗೆ ಅನುಮೋದನೆ ಪಡೆಯಲು ವಿಶೇಷ ಸಭೆಯನ್ನು ಕರೆಯಲಾಗಿತ್ತು.  ಆದರೆ ಈ ಹಿಂದಿನ ಕಾಮಗಾರಿಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸದಿರುವುದಕ್ಕೆ ನಮ್ಮ ಆಕ್ಷೇಪ ವ್ಯಕ್ತಪಡಿಸುತ್ತೇವೆ.

ಅದಲ್ಲದೆ ಸ್ವಯಂಘೋಷಿತ ಆಸ್ತಿ ತೆರಿಗೆಯಿಂದ ಶೇಕಡಾ 15 ಹೆಚ್ಚಳ, ಘನತ್ಯಾಜ್ಯ ವಿಲೇವಾರಿ ಕರ ಅದರ ಜೊತೆಗೆ 536 ಕೋಟಿ ಸಾಲದಲ್ಲಿ ಹೆಚ್ಚುವರಿಯಾಗಿ ಪ್ರತಿಯೊಬ್ಬ ನಾಗರಿಕನ ಮೇಲೆ ರೂ. 1082 ಸಾಲದ ಹೊರೆಯನ್ನು ಹಾಕಲು ಈ ಕಾಂಗ್ರೇಸ್ ಆಡಳಿತ ಹೊರಟಿರುವುದನ್ನು ತೀವ್ರವಾಗಿ ಖಂಡಿಸಿದರು.


Spread the love