ಮಂಗಳೂರು: ಫೆ. 7ರಂದು ಜಿಲಾದ್ಯಂತ ಡಿವೈಎಫ್‍ಐ ಸಾಮೂಹಿಕ ಸದಸ್ಯತ್ವ ಅಭಿಯಾನ

Spread the love

ಮಂಗಳೂರು: ಇಂದು ನಮ್ಮ ದೇಶ ಗಂಭೀರ ಹಲವಾರು ಸಮಸ್ಯೆಗಳಲ್ಲಿ ಸಿಕ್ಕಿ ತೊಳಲಾಡುತ್ತಿದೆ. ಆಳುವ ಸರಕಾರಗಳ ತಪ್ಪಾದ ನೀತಿಗಳಿಂದಾಗಿ ಬಡತನ ತಾಂಡವವಾಡುತ್ತಿದೆ. ಉದ್ಯೋಗವಕಾಶಗಳ ಕೊರತೆ, ಶಿಕ್ಷಣ, ಆರೋಗ್ಯ, ಕುಡಿಯುವ ನೀರಿನ ವ್ಯವಸ್ಥೆಗಳ ಖಾಸಗೀಕರಣ ವಸತಿಯ ಸಮಸ್ಯೆಗಳು ಜನರು ಘನತೆಯಿಂದ ಬದುಕುವ ಹಕ್ಕನ್ನು ನಿರಾಕರಿಸುತ್ತಿದೆ. ಭಯೋತ್ಪಾದನೆ, ಕೋಮುವಾದ ಪ್ರತ್ಯೇಕವಾದ ಮುಂತಾದ ಛಿದ್ರಕಾರಿ ಶಕ್ತಿಗಳು ಹತಾಶ ಯುವಜನತೆಯನ್ನು ದಾರಿ ತಪ್ಪಿಸಿ ಬಲಿ ಪಡೆಯುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯನ್ನು ಕೂಡಾ ಇಂದು ದೇಶವನ್ನು ಕಾಡುತ್ತಿರುವ ಸಮಸ್ಯೆಗಳು ನೇರವಾಗಿ ಬಾಧಿಸುತ್ತಿದೆ. ಈ ಎಲ್ಲಾ ಸಮಸ್ಯೆಗಳಿಗೆ ಎದುರಾಗಿ ಡಿವೈಎಫ್‍ಐ ಜಿಲ್ಲೆಯಲ್ಲಿ ಸಮರಧೀರ ಚಳುವಳಿಯನ್ನು ಸಂಘಟಿಸುತ್ತಾ ಬಂದಿದೆ. ಹೀಗೆ ಜನರ ಬದುಕುವ ಹಕ್ಕನ್ನೇ ಕಸಿಯುವ ಆಳುವ ವರ್ಗಗಳ ಹುನ್ನಾರಗಳಿಗೆ ಎದುರಾಗಿ ನಿತ್ಯ ಸಂಘರ್ಷವನ್ನು ನಡೆಸುತ್ತಿರುವಾಗಲೇ ಇಲ್ಲಿನ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ, ಜನರ ನೈಜ ಸಮಸ್ಯೆಗಳಿಂದ ಅವರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ನಡೆಯುತ್ತಿದೆ.

ಕಂಪೆನಿಗಳು ದಿನನಿತ್ಯ ಶಬ್ದ ಹಾಗೂ ವಾಯುಮಾಲಿನ್ಯ ಮಾಡುತ್ತಾ ಜನರ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಉಂಟುಮಾಡುತ್ತದೆ. ಜನರ ನೆಮ್ಮದಿಯ ಬದುಕನ್ನು ಹಾಳುಮಾಡುತ್ತಿದೆ. ಮತ್ತೊಂದೆಡೆ ಜಿಲ್ಲೆಯಲ್ಲಿ ಬ್ಲೇಡ್‍ಕಂಪೆನಿಗಳು ಕಾನೂನುಬಾಹಿರವಾಗಿ ಹಣವನ್ನು ಸಂಗ್ರಹಿಸಿ ದಿನಾ ಜನರನ್ನು ಮೋಸಗೊಳಿಸುತ್ತಿದೆ. ಜಾತಿ ತಾರತಮ್ಯ, ಅನಿಷ್ಟ ಪದ್ಧತಿಗಳು ನಿರಂತರವಾಗಿ ನಡೆಯುತ್ತಿದೆ. ಹಾಗಾಗಿ ನಮ್ಮೆದುರಿಗಿನ ಸಮಸ್ಯೆಗಳು, ಸವಾಲುಗಳು ಬೃಹದಾಕಾರವಾಗಿ ಬೆಳೆಯುತ್ತಿರುವಾಗಲೆ ಡಿವೈಎಫ್‍ಐ ಸಂಘಟನೆಯನ್ನು ಪರ್ಯಾಯಶಕ್ತಿಯಾಗಿ ಬೆಳೆಸಬೇಕಾಗಿದೆ.

ಈ ಹಿನ್ನಲೆಯಲ್ಲಿ ಡಿವೈಎಫ್‍ನ ಸದಸ್ಯತ್ವವನ್ನು ಯುವಜನತೆ ಪಡೆಯುವ ಮುಖಾಂತರ ಜನರ ನೆಮ್ಮದಿಯ ಬದುಕಿಗಾಗಿ ನಿರಂತರ ಹೋರಾಟದ ಕಣದಲ್ಲಿರುವ ಡಿವೈಎಫ್‍ಐನೊಂದಿಗೆ ಜೋಡಿಸಬೇಕೆಂಬ ನಿಟ್ಟಿನಲ್ಲಿ ತಾ. ಫೆ.7ರಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ ಸದಸ್ಯತ್ವ ಅಭಿಯಾನ ನಡೆಯಲಿದೆ. ಈ ಅಭಿಯಾನದಲ್ಲಿ ಎಲ್ಲಾ ಯುವಜನತೆ ಪಾಲ್ಗೊಳ್ಳಬೇಕೆಂದು ಡಿವೈಎಫ್‍ಐ ದ.ಕ. ಜಿಲಾ ಸಮಿತಿ ಕರೆ ನೀಡಿದೆ ಎಂದು ಡಿವೈಎಫ್‍ಐನ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.


Spread the love