ಮಂಗಳೂರು : ಮಾಲಿನ್ಯ ನಿಯಂತ್ರಣ ಮಂಡಳಿ ವಾರ್ಷಿಕ ಕ್ರೀಡಾಕೂಟ

Spread the love

ಮಂಗಳೂರು : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ 3 ನೇ ವಾರ್ಷಿಕ ಕ್ರೀಡಾಕೂಟ ಸುರತ್ಕಲ್ ಎನ್.ಐ,ಟಿ.ಕೆ. ಕ್ರೀಡಾಂಗಣದಲ್ಲಿ ಇಂದು ಚಾಲನೆಗೊಂಡಿತು.

ಕ್ರೀಡಾಕೂಟವನ್ನು ಅರಣ್ಯ, ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಾಲಿನ್ಯವನ್ನು ನಿಯಂತ್ರಿಸಿ ಪರಿಸರ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಸಿಬ್ಬಂದಿಗಳಿಗೆ ಈ ಕ್ರೀಡಾಕೂಟವು ಮಾನಸಿಕ ಹಾಗೂ ಶಾರೀರಿಕ ಬಲವನ್ನು ನೀಡಲಿದೆ ಎಂದು ಹೇಳಿದರು.

sports

ಪರಿಸರವು ಜಾಗತಿಕ ಚರ್ಚಾ ವಿಚಯವಾಗಿದೆ. ಪರಿಸರ ರಕ್ಷಣೆಯಲ್ಲಿ ಯಾವುದೇ ಕಾರಣಕ್ಕೆ ರಾಜಿ ಸಲ್ಲದು. ಮುಂದಿನ ಭವಿಷ್ಯದ ರಕ್ಷಣೆಯ ದೃಷ್ಠಿಯಲ್ಲಾದರೂ, ನಾವು ಈ ವಿಷಯದಲ್ಲಿ ಕಟ್ಟುನಿಟ್ಟಾಗಿರಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಉತ್ತರ ಶಾಸಕ ಮೊಹಿದೀನ್ ಬಾವಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಂಗಳೂರಿನಲ್ಲಿ ಅನೇಕ ಪ್ರಮುಖ ಕ್ರೀಡಾಕೂಟಗಳು ನಡೆಯುತ್ತಿರುವುದು ಸಂತಸದ ವಿಷಯ. ಇದರಿಂದ ಜಿಲ್ಲೆಯ ಕ್ರೀಡಾಕ್ಷೇತ್ರದಲ್ಲಿ ಇನ್ನಷ್ಟು ಬೆಳವಣಿಗೆ ನಿರೀಕ್ಷಿಸಬಹುದು. ಜಿಲ್ಲೆಯಲ್ಲಿರುವ ಕೈಗಾರಿಕೆ, ಬೃಹತ್ ಉದ್ದಿಮೆಗಳು ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚು ಉದಾರವಾಗಿ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಮಂಡಳಿಯ ಸದಸ್ಯ ಕಾರ್ಯದರ್ಶಿ ಎಸ್. ಶಾಂತಪ್ಪ ಸ್ವಾಗತಿಸಿದರು. ಮಂಡಳಿಯ ಸದಸ್ಯ ಕಾವೇರಿಯಪ್ಪ, ಎನ್.ಐ.ಟಿ.ಕೆ ಡೀನ್ ಉದಯಕುಮಾರ್ ಯರಗಟ್ಟಿ, ಉದ್ಯಮಿ ನಝೀರ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು. ಮಂಗಳೂರು ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ್ ವಂದಿಸಿದರು.

ಎರಡು ದಿನಗಳ ಈ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲಾ ಜಿಲ್ಲೆಗಳ ಸುಮಾರು 700 ಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದಾರೆ.

                    ಜಿಲ್ಲೆಯನ್ನು ಪೂರ್ಣ ಸೌರಶಕ್ತಿ ಜಿಲ್ಲೆಯನ್ನಾಗಿಸಲು ಯತ್ನ

ಮಂಗಳೂರು: ದೇಶದಲ್ಲಿ ದ.ಕ ಜಿಲ್ಲೆಯನ್ನು ಸಂಪೂರ್ಣ ಸೌರಶಕ್ತಿ ಜಿಲ್ಲೆಯನ್ನಾಗಿಸುವ ದಿಕ್ಕಿನಲ್ಲಿ ಪುತ್ತೂರು ತಾಲೂಕಿನ ಪೆರಾಜೆ ಗ್ರಾಮವನ್ನು ಸಂಪೂರ್ಣ ಸೌರಶಕ್ತಿ ಗ್ರಾಮವಾಗಿಸಲು ರೂ. 1,44,64000/- ಕ್ರಿಯಾಯೋಜನೆಯನ್ನು ಪೆರಾಜೆ ಸೌರದೀಪ ಅನುಷ್ಠಾನ ಸಮಿತಿ ತಯಾರಿಸಿ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಧಿಕಾರಿ ಪಿ.ಐ. ಶ್ರೀ ವಿದ್ಯಾರವರಿಗೆ ಸಲ್ಲಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಈ ಸಂಬಂಧ ನಡೆದ  ಸಭೆಯಲ್ಲಿ ಪೆರಾಜೆ ಸೌರದೀಪ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಯಮುನಾ ಎಸ್.ರೈ ಮತ್ತು ಜನಶಿಕ್ಷಣ ಟ್ರಸ್ಟ್‍ನ ಶೀನಾ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಅವರು ಈ ಬಗ್ಗೆ ಸಭೆಗೆ ಮಾಹಿತಿ ನೀಡಿದರು.

ಪೆರಾಜೆ ಗ್ರಾಮವನ್ನು ಸಂಪೂರ್ಣ ಸೌರಶಕ್ತಿ ಗ್ರಾಮವನ್ನಾಗಿ ಮಾರ್ಚ್ 15 ರೊಳಗೆ ಪರಿವರ್ತಿಸುವಂತೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ರವರು ಸಂಬಂಧಿಸಿದವರಿಗೆ ಸೂಚಿಸಿದರು.

ವಿದ್ಯುತ್ ಸಂಪರ್ಕವಿಲ್ಲದ 35 ಮನೆಗಳಿಗೆ ತಲಾ 10,000ರೂ ಗಳಲ್ಲಿ ಪ್ರತಿ ಮನಗೆ 2 ಎಲ್‍ಇಡಿ ಬಲ್ಬಗಳನ್ನು ಅಳವಡಿಕೆಗೆ ರೂ. 3.50 ಲಕ್ಷ  740 ಬಿಪಿಎಲ್ ಕುಟುಂಬಗಳಿಗೆ ರೂ. 74 ಲಕ್ಷ ವೆಚ್ಚದಲ್ಲಿ ತಲಾ 2 ಎಲ್‍ಇಡಿ ಬಲ್ಬ್‍ಗಳು ಅಂತ್ಯೋದಯ ಪಡಿತರ ಕಾರ್ಡುದಾರರ 73 ಮನೆಗಳಿಗೆ4 ತಲಾ 2 ಎಲ್‍ಇಡಿ ಬಲ್ಬ್ ಗಳನ್ನು ಅಳವಡಿಸಲು ರೂ. 7.30 ಲಕ್ಷ 118 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮನೆಗಳಿಗೆ ತಲಾ ಮನೆಗೆ 2 ಎಲ್‍ಇಡಿ ಬಲ್ಬ್‍ಗಳನ್ನು ರೂ. 11.80 ಲಕ್ಷ, ಎಂಡೋ ಪೀಡಿತರ 40 ಮನೆಗಳಿಗೆ ತಲಾ 2 ಎಲ್‍ಇಡಿ ಬಲ್ಬ್ ಮತ್ತು 1 ಫ್ಯಾನ್ ಅಳವಡಿಸಲು ರೂ. 8.36 ಲಕ್ಷ, 25 ಅಂಗವಿಕಲರ ಮನೆಗಳಿಗೆ 2 ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಲು ರೂ. 2.50 ಲಕ್ಷ, 100 ಬೀದಿ ದೀಪಗಳನ್ನು ಅಳವಡಿಕೆಗೆ ರೂ. 24 ಲಕ್ಷ, ಗ್ರಾಮದ ಗ್ರಂಥಾಲಯ ಕಟ್ಟಡಕ್ಕೆ 1.5 ಕೆ.ವಿ.ಎ. ಇನ್ವರ್ಟರ್ ಅಳವಡಿಸಲು ರೂ. 1.88 ಲಕ್ಷ ಗ್ರಾಮ ಪಂಚಾಯತ್ ಕಟ್ಟಡಕ್ಕೆ 2 ಕೆ.ವಿ.ಎ ಇನ್ವರ್ಟರ್ ಅಳವಡಿಸಲು ರೂ. 2.30 ಲಕ್ಷ ಮಿನಿಗ್ರಿಡ್ ನ್ನು ರೂ. 9. ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವುದಾಗಿ ಶೀನ ಶೆಟ್ಟಿ ಜಿಲ್ಲಾಧಿಕಾರಿ ಸಭೆಗೆ ತಿಳಿಸಿ ಇದಕ್ಕೆ ದಾನಿಗಳು ದೇಣಿಗೆ ನೀಡುವಂತೆ ವಿನಂತಿಸಿದರು.

ಸಭೆಯಲ್ಲಿ ಹಾಜರಿದ್ದ ವಿಧಾನ ಪರಿಷತ್ ನ ಸದಸ್ಯರಾದ ಐವನ್ ಡಿ’ಸೋಜಾ ಅವರು ಎಂಡೋ ಪೀಡಿತರ 40 ಮನೆಗಳಿಗೆ ಸೌರ ಶಕ್ತಿಯ ಎಲ್‍ಇಡಿ ಬಲ್ಬ್ ಮತ್ತು 1 ಫ್ಯಾನ್ ಅಳವಡಿಕೆಗೆ ರೂ. 8.36 ಲಕ್ಷ ಗಳನ್ನು ತಮ್ಮ ಶಾಸಕರ ಅನುದಾನದಿಂದ ನೀಡುವುದಾಗಿ ತಿಳಿಸಿದರು. ಇದೇ ರೀತಿ ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ರೂ. 5 ಲಕ್ಷ ನೀಡುವುದಾಗಿ ಸಂಸ್ಥೆಯ ಅಧಿಕಾರಿ ಸಭೆಗೆ ತಿಳಿಸಿದರು.

ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವತಿಯಿಂದ ಪೆರಾಜೆ ಗ್ರಾಮಕ್ಕೆ ಸೌರಶಕ್ತಿ ಅಔವಡಿಕೆಗೆ ಅನುದಾನ ನೀಡುವಂತೆ ಪೆರಾಜೆ ಸೌರದೀಪ ಅನುಷ್ಠಾನ ಸಮಿತಿಯವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದು, ಈ ಬಗ್ಗೆ ದೇವಾಲಯ ಸಮಿತಿಗೆ ಮನವಿ ನೀಡಿದಲ್ಲಿ ಸರ್ಕಾರದಿಂದ ಅನುಮೋದನೆ ಪಡೆಯಲು ಯತ್ನಿಸುವುದಾಗಿ ಮುಜರಾಯಿ ಇಲಾಖೆ ತಹಶೀಲ್ದಾರರಾದ ಪ್ರಭಾಕರ್ ಅವರು ಸಭೆಗೆ ಮಾಹಿತಿ ನೀಡಿದರು.

ಇನ್ನುಳಿದಂತೆ ಮೆಸ್ಕಾಂ ವತಿಯಿಂದ ಬೀದಿ ದೀಪಗಳ ಅಳವಡಿಕೆಗೆ ಮಂಡಳಿ ಸಭೆಯಲ್ಲಿ ವಿಷಯ ಚರ್ಚಿಸುವುದಾಗಿ ಮೆಸ್ಕಾಂ ಅಧಿಕಾರಿ ನಂಜಪ್ಪ ತಿಳಿಸಿದರು. ಸಭೆಯಲ್ಲಿ ಎಂಆರ್‍ಪಿಎಲ್, ನಬಾರ್ಡ್ ಇನ್ನಿತರ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದರು.


Spread the love