ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಬದ್ಧ – ಪ್ರಮೋದ್ ಮಧ್ವರಾಜ್

Spread the love

ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಬದ್ಧ – ಪ್ರಮೋದ್ ಮಧ್ವರಾಜ್

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್‍ರವರು ಮರಳು ಗುತ್ತಿಗೆದಾರರ, ಲಾರಿ ಮಾಲಕರ, ಕ್ರೆಡಾೈ ಪದಾಧಿಕಾರಿಗಳ, ಕಟ್ಟಡ ಕಾರ್ಮಿಕರ ಸಭೆಯಲ್ಲಿ ಕ್ರೆಡಾೈ ಪದಾಧಿಕಾರಿಗಳು ಕಟ್ಟಡ ಕಟ್ಟುವಾಗ ಪಾವತಿ ಮಾಡುವ ಕಾರ್ಮಿಕರ ನಿಧಿಯ ಸೆಸ್‍ನ ಸದ್ಬಳಕೆಯಾಗುತ್ತಿಲ್ಲ ಎಂದು ಆರೋಪಿಸಿದರು. ಮುಂದಿನ ದಿನಗಳಲ್ಲಿ ಆ ನಿಧಿಯ ವಿನಿಯೋಗ ಸಮರ್ಪಕವಾಗಿ ಆಗುವಂತೆ ಒತ್ತಾಯಿಸಿದರು.

ಲಾರಿ ಮಾಲಕರ ಪದಾಧಿಕಾರಿಗಳು ಮಾತನಾಡುತ್ತಾ ಮಂಗಳೂರು ಹಾಗೂ ಉತ್ತರ ಕನ್ನಡದಲ್ಲಿ ಸರಾಗವಾಗಿ ಮರಳು ಸಿಗುತ್ತದೆ ಉಡುಪಿಯಲ್ಲಿ ಏಕೆ ಸಿಗುತ್ತಿಲ್ಲ ಎಂದು ಪ್ರಶ್ನಿಸಿದರು. ಉಡುಪಿಯಲ್ಲಿ ಮರಳು ಸಿಗದಿರಲು ಪ್ರಮೋದ್ ಮಧ್ವರಾಜರೇ ಕಾರಣ ಎಂದು ಆರೋಪಿಸಿದರು.

ಆಗ ಪ್ರಮೋದ್ ಮಧ್ವರಾಜ್‍ರವರು ಉತ್ತರಿಸುತ್ತಾ ಹಾರಡಿಯ ಕುಕ್ಕುಡೆಯ ಗ್ರಾಮಸ್ಥರೊಬ್ಬರು ಅಕ್ರಮ ಮರಳುಗಾರಿಕೆ ವಿರುದ್ದ ಹಸಿರು ಪೀಠ ನ್ಯಾಯಾಧಿಕರಣಕ್ಕೆ ದೂರು ಸಲ್ಲಿಸಿರುವುದರಿಂದ ಸಿ.ಆರ್.ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಹಸಿರು ನ್ಯಾಯಪೀಠ ತಡೆಯಾಜ್ಞೆ ನೀಡಿತ್ತು. ಹಲವು ತಿಂಗಳುಗಳ ಕಾಲ ಮರಳು ಸಿಗದೆ ಕಟ್ಟಡ ಕಾರ್ಮಿಕರಿಗೆ ಹಾಗೂ ಜನರಿಗೆ ತುಂಬಾ ತೊಂದರೆ ಆಗಿತ್ತು. ಅದನ್ನು ಮನಗಂಡು ಆಗಿನ ರಾಜ್ಯದ ಕಾನೂನು ಮಂತ್ರಿ ಟಿ.ಬಿ. ಜಯಚಂದ್ರ ಹಾಗೂ ರಾಜ್ಯ ಸರಕಾರದ ವಕೀಲರಾದ ಅಶೋಕ್ ಹಾರ್ನಳ್ಳಿಯವರಲ್ಲಿ ನಿರಂತರ ಸಂಪರ್ಕವಿರಿಸಿ ಸಿ.ಆರ್.ಝಡ್. ಮರಳುಗಾರಿಕೆಗೆ ಇದ್ದ ತಡೆಯಾಜ್ಞೆಯನ್ನು ತೆರವುಗೊಳಿಸುವಲ್ಲಿ ಪ್ರಮೋದ್ ಮಧ್ವರಾಜ್ ಯಶಸ್ವಿಯಾಗಿದ್ದಾರೆ ಎಂದರು. 2017-18ರಲ್ಲಿ 27 ಮರಳು ದಿಬ್ಬಗಳನ್ನು ಗುರುತಿಸಿ 9 ಲಕ್ಷ ಟನ್ ಮರಳು ತೆರವುಗೊಳಿಸುವ ಕಾರ್ಯ ಪ್ರಾರಂಭಗೊಂಡು 165 ಗುತ್ತಿಗೆದಾರರನ್ನು ಗುರುತಿಸಿ ಸುಮಾರು 6 ಲಕ್ಷ ಟನ್ ಮರಳು ತೆರವುಗೊಳಿಸುವಲ್ಲಿ ತಾನು ಯಶಸ್ವಿಯಾಗಿದ್ದನೇನೆ ಎಂದು ಹೇಳಿದರು.

ರಘುಪತಿ ಭಟ್ಟರು ವಿಧಾನಸಭಾ ಚುನಾವಣೆಯ ಮೊದಲು ತಾನು ಶಾಸಕನಾದರೆ ಒಂದು ತಿಂಗಳ ಒಳಗೆ ಮರಳು ಮನೆ ಬಾಗಿಲಿಗೆ ತಂದು ಕೊಡುತ್ತೇನೆ ಎಂದು ಹೇಳಿದವರು ಇಂದು 11 ತಿಂಗಳಾದರು ಕೂಡಾ ಮರಳು ಜನರಿಗೆ ಲಭ್ಯವಾಗುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ದೋಣಿ ಹಾಗೂ ಲಾರಿಗಳಿಗೆ ಹಾಕಿದ ಜಿ.ಪಿ.ಎಸ್ ಅನ್ನು ಪ್ರಮೋದ್ ಮಧ್ವರಾಜರ ಮನೆಗೆ ತಂದು ಬಿಸಾಡಿ ಎಂದು ಹೇಳಿದ್ದಾರೆ. ಜಿ.ಪಿ.ಎಸ್. ಜಾರಿಯಾಗಿದ್ದು 2012ರಲ್ಲಿ ಆಗ ರಘುಪತಿ ಭಟ್‍ರವರು ಶಾಸಕರಾಗಿದ್ದರು. ನಾನು ಶಾಸಕನಾಗಿದ್ದು 2013ರಲ್ಲಿ ಎಂದು ನೆನಪಿಸಿದರು.

ಈ ವರ್ಷ ಕೇವಲ 7 ಮರಳು ದಿಬ್ಬಗಳನ್ನು ಗುರುತಿಸಿ ಕೇವಲ 45 ಗುತ್ತಿಗೆದಾರರನ್ನು ನೇಮಿಸಿ, ಕೇವಲ 17,000 ಟನ್ ಮರಳು ಮಾತ್ರ ತೆರವುಗೊಳಿಸಲಾಗಿದೆ. ಮರಳು ಜನರಿಗೆ ಸಿಗುವಂತೆ ಮಾಡಲು ರಘುಪತಿ ಭಟ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಾನು ಮಾಡಿದ ಉಪಕಾರಕ್ಕೆ ತಾವು ಪ್ರತಿಯಾಗಿ ಉಡುಪಿಯಲ್ಲಿ ಮರಳು ಸಿಗದಿರಲು ಪ್ರಮೋದ್ ಮಧ್ವರಾಜರೇ ಕಾರಣ ಎಂದು ಅಪಪ್ರಚಾರ ಮಾಡಿ ನಾನು ಸೋಲುವಂತೆ ಮಾಡಿ ಒಳ್ಳೆಯ ಉಡುಗೊರೆ ನೀಡಿದ್ದೀರಿ ಎಂದು ಖಾರವಾಗಿ ಉತ್ತರಿಸಿದರು.

ತಾ. 18.01.2019ರಂದು ಬಿಜೆಪಿ ನೇತೃತ್ವದ ಕೇಂದ್ರ ಎನ್.ಡಿ.ಎ. ಸರಕಾರ ದೇಶವ್ಯಾಪಿ ಕರಾವಳಿ ಪ್ರದೇಶಗಳಲ್ಲಿ ಮರಳು ದಿಬ್ಬ ತೆರವುಗೊಳಿಸುವುದಕ್ಕೆ ಯಾವುದೇ ರಿಯಾಯಿತಿ ನೀಡದೆ ಆದೇಶವನ್ನು ಮಾಡಿದೆ. ಕರಾವಳಿ ಜಿಲ್ಲೆಗಳಲ್ಲಿಯ ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಸಿ.ಆರ್.ಝಡ್. ಪ್ರದೇಶದಲ್ಲಿ ಈಗಿರುವ ಮರಳು ದಿಬ್ಬ ತೆರವು ಕಾನೂನಿಗೆ ಬದಲಾಗಿ ಮರಳು ಸಂಗ್ರಹ ತೆರವು ಕಾನೂನನ್ನು ಮತ್ತು ನಾನ್ ಸಿ.ಆರ್.ಝಡ್ ನದಿಗಳಲ್ಲಿ ನೀರಿನ ಒಳಗೆ ಮರಳು ತೆಗೆಯುವ ಅವಕಾಶದ (in stream mining) ಕಾನೂನನ್ನು ಜಾರಿಗೊಳಿಸಲು ಗರಿಷ್ಠ ಪ್ರಯತ್ನ ಮಾಡುತ್ತೇನೆ. ನಾನು ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ ಕಾನೂನಿಗೆ ತಿದ್ದುಪಡಿ ತಂದು ಕರಾವಳಿ ಪ್ರದೇಶದಲ್ಲಿನ ಮರಳು ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಗರಿಷ್ಟ ಪ್ರಯತ್ನ ಮಾಡುತ್ತೇನೆ ಎಂದು ಪ್ರಮೋದ್ ಮಧ್ವರಾಜ್‍ರವರು ಹೇಳಿದರು.


Spread the love