ಮಲ್ಪೆ ಬೀಚ್ ನಲ್ಲಿ ಹಟ್ ಗಳ ನಿರ್ಮಾಣ- ಜಿಲ್ಲಾಧಿಕಾರಿ

Spread the love

ಮಲ್ಪೆ ಬೀಚ್ ನಲ್ಲಿ ಹಟ್ ಗಳ ನಿರ್ಮಾಣ- ಜಿಲ್ಲಾಧಿಕಾರಿ

ಉಡುಪಿ: ಪ್ರವಾಸಿಗರ ಅನುಕೂಲಕ್ಕಾಗಿ ಮಲ್ಪೆ ಬೀಚ್‍ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಟ್ ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.

ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಡಿದರು.
ಮಲ್ಪೆ ಬೀಚ್ ನಲ್ಲಿ ಈಗಾಗಲೇ 6 ಹಟ್ ಗಳಿದ್ದು, ಅವುಗಳಲ್ಲಿ ದುಸ್ಥಿತಿಯಲ್ಲಿರುವ ಹಟ್ ಗಳನ್ನು ದುರಸ್ತಿಗೊಳಿಸುವಂತೆ ಮತ್ತು ಹೊಸದಾಗಿ 9 ಹಟ್ ಗಳನ್ನು ನಿರ್ಮಾಣ ಮಾಡುವಂತೆ ನಗರಸಭೆಯ ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

dc-meeting-malpe

ಬೀಚ್ ನಲ್ಲಿ ರುವ 24 ಗೂಡಂಗಡಿಗಳನ್ನು, ಏಕರೂಪದಲ್ಲಿ ನಿರ್ಮಾಣ ಮಾಡುವ ಕುರಿತಂತೆ, ಗೂಡಂಗಡಿಗಳ ಮಾಲೀಕರು ಸಲ್ಲಿಸಿರುವ ಅಂದಾಜು ಪಟ್ಟಿ ಮತ್ತು ನೀಲ ನಕ್ಷೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ನಿರ್ಮಾಣದ ವೆಚ್ಚವನ್ನು, ಗೂಡಂಗಡಿ ಮಾಲೀಕರು ಶೇ.50 ಮತ್ತು ಮಲ್ಪೆ ಅಭಿವೃದ್ಧಿ ಸಮಿತಿ ವತಿಯಿಂದ ಶೆ.50 ರಷ್ಟು ಜಂಟಿಯಾಗಿ ಭರಿಸುವಂತೆ ಸೂಚಿಸಿದರು. ಅಲ್ಲದೇ ಗೂಡಂಗಡಿಗಳನ್ನು ಒಳಬಾಡಿಗೆ ನೀಡದಂತೆ ಮತ್ತು ನಿರ್ದಿಷ್ಟ ಪಡಿಸಿದ ಉತ್ತಮ ಗುಣಮಟ್ಟದ ವಸ್ತುಗಳನ್ನು ಮಾರುವಂತೆ, ಪಾದಚಾರಿ ಮಾರ್ಗವನ್ನು ಆಕ್ರಮಿಸಿಕೊಳ್ಳದಂತೆ ಹಾಗೂ ಸ್ವಚ್ಛತೆಯನ್ನು ಕಾಪಾಡುವ ಕುರಿತಂತೆ ನಿಯಮಿತವಾಗಿ ಪರಿಶೀಲಿಸುವಂತೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಬೀಚ್‍ನಲ್ಲಿ ಬಿ.ಎಸ್.ಎನ್.ಎಲ್ ವತಿಯಿಂದ ಈಗಾಗಲೇ ಅಳವಡಿಸಿರುವ ವೈ.ಫೈ ವ್ಯವಸ್ಥೆಗೆ 3 ತಿಂಗಳಿಗೆ 1.80 ಲಕ್ಷದ ಬಿಲ್ ಬಂದಿದೆ ಅಲ್ಲದೇ ಬೀಚ್‍ನಲ್ಲಿ ಸರಿಯಾದ ಸಂಪರ್ಕ ಸಿಗುತ್ತಿಲ್ಲ ಎಂದು ದೂರುಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ಇದನ್ನು ರದ್ದುಪಡಿಸಿ, ಉಚಿತ ವೈ.ಫ್ಯೆ ಸೌಲಭ್ಯ ನೀಡುವ ಕುರಿತಂತೆ ಬಿ.ಎಸ್.ಎನ್.ಎಲ್ ಅಧಿಕಾರಿಗಳೊಂದಿಗೆ ಚರ್ಚಿಸುವಂತೆ ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.

ಮಲ್ಪೆ ಬೀಚ್ ನಲ್ಲಿ ಪೊಲೀಸ್ ಇಲಾಖೆಯ ಕೋರಿಕೆಯಂತೆ, ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಪೊಲೀಸ್ ಅಂಬ್ರೆಲ್ಲಾ, ಬ್ಯಾರಿಕೇಡ್‍ಗಳ ಸರಬರಾಜು ಮತ್ತು ಹಂಪ್ ರಿಫ್ಲೆಕ್ಟರ್ ಗಳನ್ನು ಒದಗಿಸುವಂತೆ ಸೂಚಿಸಿದರು.

ಬೀಚ್ ನಲ್ಲಿರುವ ಹೈಮಾಸ್ಟ್ ದೀಪಗಳಲ್ಲಿ ಎಲ್.ಇ.ಡಿ ಲೈಟ್ ಗಳನ್ನು ಬಳಸುವಂತೆ ಮತ್ತು ಮಲ್ಪೆ ಬೀಚ್ ಕೂಡುವ ರಸ್ತೆಗಳಲ್ಲಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು.

ಬೀಚ್ ಸಮೀಪವಿರುವ ಮನೆಗಳ ಬಳಿ, ಕೆಲವರು ಅಕ್ರಮವಾಗಿ ಕೊಠಡಿಗಳನ್ನು ನಿರ್ಮಾಣ ಮಾಡುತ್ತಿರುವ ಕುರಿತ ದೂರು ಆಲಿಸಿದ ಜಿಲ್ಲಾಧಿಕಾರಿಗಳು, ಕೂಡಲೇ ಅಂತಹ ನಿರ್ಮಾಣ ಕಾರ್ಯವನ್ನು ತೆರವುಗೊಳಿಸುವಂತೆ ಹಾಗೂ ಅಗತ್ಯ ಬಿದ್ದಲ್ಲಿ ಪೊಲೀಸ್ ಸಹಕಾರ ಪಡೆಯುವಂತೆ ಪೌರಾಯುಕ್ತರಿಗೆ ಸೂಚಿಸಿದರು.

ಬೀಚ್‍ನಲ್ಲಿ ಇತ್ತೀಚೆಗೆ ಕಡಲಕೊರೆತದಿಂದ ಹಾನಿಯಾದ ಇಂಟರ್ ಲಾಕ್ ವ್ಯವಸ್ಥೆಯನ್ನು ಸರಿಪಡಿಸುವಂತೆ ಸೂಚಿಸಿದ ಅವರು, ಬೀಚ್ ಬಳಿ ಪಾರ್ಕಿಂಗ್ ವ್ಯವಸ್ಥೆಯ ಸುಧಾರಣೆ ಮತ್ತು ಆಟೋ ರಿಕ್ಷಾ ನಿಲ್ದಾಣ ನಿರ್ಮಾಣ ಕುರಿತಂತೆ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

ಸಭೆಯಲ್ಲಿ ನಗರಸಭೆಯ ಅಧ್ಯಕ್ಷೆ ಮೀನಾಕ್ಷಿ ಮಾಧವ, ಉಪಾಧ್ಯಕ್ಷೆ ಸಂಧ್ಯಾ, ಮೀನುಗಾರಿಕಾ ಫೆಡರೇಶನ್ ನ ಯಶಪಾಲ್ ಸುವರ್ಣ, ನಗರಸಭೆಯ ಸದಸ್ಯ ಪ್ರಶಾಂತ್ ಅಮೀನ್, ನಾರಾಯಣ ಕುಂದರ್, ಜಿ.ಪಂ. ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್, ಪೌರಾಯುಕ್ತ ಮಂಜುನಾಥಯ್ಯ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜನಾರ್ಧನ್, ಕೆ.ಆರ್.ಐ.ಡಿ.ಎಲ್ ನ ಕೃಷ್ಣ ಹೆಪ್ಸೂರು, ನಿರ್ಮಿತಿ ಕೇಂದ್ರದ ನಿರ್ದೇಶಕ ಅರುಣ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.


Spread the love