ಮೋದಿಗೆ ಯಡಿಯೂರಪ್ಪ ಅಥವಾ ಜಯ್ ಶಾ ಭ್ರಷ್ಟಾಚಾರ ಕಾಣಿಸುತ್ತಿಲ್ಲ: ರಾಹುಲ್ ಗಾಂಧಿ

Spread the love

ಮೋದಿಗೆ ಯಡಿಯೂರಪ್ಪ ಅಥವಾ ಜಯ್ ಶಾ ಭ್ರಷ್ಟಾಚಾರ ಕಾಣಿಸುತ್ತಿಲ್ಲ: ರಾಹುಲ್ ಗಾಂಧಿ

ಚಿಕ್ಕಮಗಳೂರು: ಭ್ರಷ್ಟಾಚಾರ ನಿಗ್ರಹದ ಬಗ್ಗೆ ಮಾತನಾಡುವ ಪ್ರಧಾನಿಯವರು, ತಮ್ಮದೇ ಪಕ್ಷದ ಭ್ರಷ್ಟಾಚಾರ ನಡೆಸಿದ ನಾಯಕರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ. ಅವರಿಗೆ ಯಡಿಯೂರಪ್ಪ, ಜಯ್ ಶಾ, ನೀರವ್ ಮೋದಿ ಮೊದಲಾದವರಲ್ಲಿ ಭ್ರಷ್ಟಾಚಾರ ಕಾಣುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ರಫೆಲ್ ವಿಮಾನದ ಬೆಲೆ ಎಷ್ಟು ಎಂದು ಪ್ರಧಾನಿಯವರು ಹೇಳುವುದಿಲ್ಲ ಮತ್ತು ಅದನ್ನು ತಮ್ಮ ಕೈಗಾರಿಕೋದ್ಯಮಿ ಮಿತ್ರನಿಗೆ ಕೊಟ್ಟಿದ್ದೇಕೆ ಎಂದು ಕೂಡ ಬಹಿರಂಗಪಡಿಸುವುದಿಲ್ಲ. ನೆರೆಯ ದೇಶ ಚೀನಾ ದೋಕ್ಲಮ್ ಗಡಿಯಲ್ಲಿ ಹೆಲಿಪ್ಯಾಡ್ ಮತ್ತು ವಿಮಾನ ನಿಲ್ದಾಣಗಳನ್ನು ನಿರ್ಮಿಸುತ್ತಿದೆ. ಆದರೆ ಮೋದಿಯವರು ಮೌನವಾಗಿದ್ದಾರೆ. ದೇಶದ ಗಂಭೀರ ವಿಷಯಗಳನ್ನು ಪ್ರಧಾನಿಯವರು ಚರ್ಚಿಸುವುದೇ ಇಲ್ಲ ಎಂದು ಆರೋಪಿಸಿದರು.

3 ನೇ ಹಂತದ “ಜನಾಶೀರ್ವಾದ ಯಾತ್ರೆ” ಯ 2ನೇ ದಿನವಾದ ಇಂದು ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಆಯೋಜಿಸಲಾಗಿರುವ ಸಮಾವೇಶವನ್ನು ಉದ್ಘಾಟಿಸಿ ಬಳಿಕ ಕಾರ್ಯಕರ್ತರನ್ನುದ್ದೇಶಿಸಿ ಎಐಸಿಸಿ ಮಾತನಾಡಿದ ಅವರು, ನನ್ನ ಅಜ್ಜಿಯ ಕಷ್ಟದ ದಿನಗಳಲ್ಲಿ ನೀವು ಸಹಾಯ ಮಾಡಿದ್ದೀರಿ. ರಾಜಕೀಯ ವಿರೋಧಿಗಳು ಅವರನ್ನು ಸೋಲಿಸಲು ಪ್ರಯತ್ನಿಸಿದಾಗ ಅವರ ಜೊತೆ ನೀವು ನಿಂತು ಅವರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದೀರಿ. ಅಂತಹ ಸ್ಥಳಕ್ಕೆ ನಾನಿಂದು ಬಂದಿದ್ದೇನೆ, ಚಿಕ್ಕಮಗಳೂರಿಗೆ ಬಂದಿರುವುದು ನನಗೆ ಅತೀವ ಸಂತೋಷ ನೀಡಿದೆ, ನೀವು ಮಾಡಿರುವ ಉಪಕಾರವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ ಎಂದು ಸ್ಮರಿಸಿಕೊಂಡರು.

ನನ್ನ ಅಜ್ಜಿ ಇಂದಿರಾ ಗಾಂಧಿಯವರನ್ನು ರಾಜಕೀಯವಾಗಿ ದಮನ ಮಾಡುವ ಸಂದರ್ಭದಲ್ಲಿ ಐತಿಹಾಸಿಕ ಗೆಲುವು ನೀಡಿ ನೀವು ಅವರನ್ನು ಗೆಲ್ಲಿಸಿದ್ದೀರಿ. ಇಂದು ನಿಮ್ಮಲ್ಲಿ ಮತ್ತೊಮ್ಮೆ ನಾನು ಬಂದು ವಿನಂತಿ ಮಾಡಿಕೊಳ್ಳುತ್ತಿದ್ದೇನೆ. ಬಿಜೆಪಿ, ಆರ್ ಎಸ್ಎಸ್ ನವರು ದೇಶವನ್ನು ಒಡೆದು ಆಳುತ್ತಿದ್ದಾರೆ. ಅವರಿಂದ ರಕ್ಷಿಸಿಕೊಳ್ಳಲು ನಮಗೆ ಅಧಿಕಾರ ನೀಡಿ. ಅದನ್ನು ಭಾರತವನ್ನು ಜೋಡಿಸುವ ಕೆಲಸಕ್ಕೆ ಬಳಸಿಕೊಳ್ಳುತ್ತೇವೆ. ಯಾವಾಗ ನಿಮಗೆ ನನ್ನ ಅವಶ್ಯಕತೆ ಇದೆಯೋ ಆಗ ಒಂದು ಸಣ್ಣ ಬೇಡಿಕೆ, ಸಣ್ಣ ಸುದ್ದಿಯನ್ನು ನೀಡಿದರೆ ಸಾಕು ನಿಮ್ಮ ಬಳಿ ಹಾಜರಾಗುತ್ತೇನೆ ಎಂದು ರಾಹುಲ್ ಗಾಂಧಿ ಅಭಯ ನೀಡಿದರು.

ಅಂದು ಇಂದಿರಾ ಗಾಂಧಿಯವರಿಗೆ ನೀವು ಅಧಿಕಾರ ನೀಡಿದ್ದರಿಂದ ಭಾರತ ದೇಶದ ಶೋಷಿತ ವರ್ಗ, ಬಡವರು, ದೀನದಲಿತರ ಪರ ಕೆಲಸ ಮಾಡಿದರು. ಇಂದಿರಾ ಗಾಂಧಿಯವರಿಗೆ ನಿಮ್ಮಿಂದ ದೊಡ್ಡ ಶಕ್ತಿ ಸಿಕ್ಕಿತ್ತು. ಅವರ ರಾಜನೀತಿಯಲ್ಲಿ ಬಡವರು, ರೈತರುಗಳಿದ್ದರು. ಮತ್ತೊಮ್ಮೆ ಇಂದು ನೀವು ನನಗೆ ಸಾರ್ವಜನಿಕ ಬದುಕಿನಲ್ಲಿ ಏನೇ ಶಕ್ತಿ ಕೊಟ್ಟರೂ ಅದನ್ನು ಭಾರತ ದೇಶದ ಬಡವರ, ಶೋಷಿತ ವರ್ಗದವರು, ದೀನ ದಲಿತರು ಮತ್ತು ರೈತರ ಒಳಿತಿಗಾಗಿ ಬಳಸಿಕೊಳ್ಳುತ್ತೇನೆ ಎಂದರು.


Spread the love