ರಸ್ತೆ ವಿಭಾಜಕಕ್ಕೆ ಬೈಕ್ ಡಿಕ್ಕಿ; ತಲ್ಲೂರಿನ ಫ್ಲೇಮಿಂಗ್ ಸಾವು; ಇನ್ನೋರ್ವ ಗಂಭೀರ

Spread the love

ರಸ್ತೆ ವಿಭಾಜಕಕ್ಕೆ ಬೈಕ್ ಡಿಕ್ಕಿ; ತಲ್ಲೂರಿನ ಫ್ಲೇಮಿಂಗ್ ಸಾವು; ಇನ್ನೋರ್ವ ಗಂಭೀರ

ಕುಂದಾಪುರ: ವೇಗವಾಗಿ ಧಾವಿಸುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ರಾಷ್ಟ್ರಿಯ ಹೆದ್ದಾರಿಯ ವಿಭಾಜಕಕ್ಕೆ ಢಿಕ್ಕಿ ಹೊಡೆದ ಪರಿಣಾಮ ಒರ್ವ ಯುವಕ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಭಾನುವಾರ ರಾತ್ರಿ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತ್ರಾಸಿ ಬೀಚ್ ಬಳಿ ಸಂಭವಿಸಿದೆ.

ತಲ್ಲೂರು ನಿವಾಸಿ ಫ್ರಾನ್ಸಿಸ್ ಮೆಂಡೋನ್ಸಾ ಎಂಬವರ ಪುತ್ರ ಫ್ಲೆಮಿಂಗ್ ಸೊನಾಲ್ ಮೆಂಡೋನ್ಸಾ(20) ಅಪಘಾತದಲ್ಲಿ ಸಾವನ್ನಪ್ಪಿದ ಯುವಕ. ಘಟನೆಯಲ್ಲಿ ಫ್ಲೆಮಿಂಗ್ ಸಹೋದರ ಸಂಬಂಧಿ ಜಾಯ್ಸ್ಟನ್(18) ಗಂಭೀರ ಗಾಯಗೊಂಡಿದ್ದಾರೆ.

ಈರ್ವರೂ ಯುವಕರು ಭಾನುವಾರ ಸಂಜೆ ಕೆಟಿಎಂ ಡ್ಯೂಕ್ ಬೈಕ್‌ನಲ್ಲಿ ಜಾಲಿ ರೈಡ್‌ಗೆ ತೆರಳಿದ್ದ ವೇಳೆ ಈ ಅವಘಡ ನಡೆದಿದೆ ಎನ್ನಲಾಗಿದೆ. ಬೈಂದೂರು ಕಡೆಯಿಂದ ಶರವೇಗದಲ್ಲಿ ಧಾವಿಸುತ್ತಿದ್ದ ಬೈಕ್ ಸವಾರನ ನಿಯಂತ್ರಣ ತಪ್ಪಿ ರಾಷ್ಟ್ರಿಯ ಹೆದ್ದಾರಿಯ ವಿಭಾಜಕಕ್ಕೆ ಗುದ್ದಿದ ಪರಿಣಾಮ ಬೈಕ್ ಪಲ್ಟಿ ಹೊಡೆದಿತ್ತು. ಇಬ್ಬರೂ ರಸ್ತೆಗಪ್ಪಳಿಸಿದ್ದರಿಂದ ಇಬ್ಬರ ತಲೆಭಾಗಗಳಿಗೆ ಗಂಭೀರವಾದ ಗಾಯಗಳಾಗಿತ್ತು. ಕೂಡಲೇ ಸ್ಥಳೀಯರು ಆಂಬುಲೆನ್ಸ್‌‍ಗೆ ಫೋನಾಯಿಸಿದ್ದು, ಗಂಗೊಳ್ಳಿಯ ಆಪತ್ಬಾಂಧವ 24×7 ಆಂಬುಲೆನ್ಸ್ ಸೇರಿದಂತೆ ಎರಡು ಆಂಬುಲೆನ್ಸ್‌ಗಳ ಮೂಲಕ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.  ಫ್ಲೆಮಿಂಗ್ ತಲೆ ಹಾಗೂ ಮುಖಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇನ್ನು ಜಾಯ್ಸ್ಟನ್ ತಲೆಗೂ ಗಂಭೀರ ಗಾಯಗಳಾಗಿದ್ದು, ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಸಾವನ್ನಪ್ಪಿದ ಫ್ಲೆಮಿಂಗ್ ತಂದೆ ಫ್ರಾನ್ಸಿಸ್ ಈ ಹಿಂದೆ ವಿದೇಶದಲ್ಲಿ ಉದ್ಯೋಗಲ್ಲಿದ್ದು ಇದೀಗ ನಿವೃತ್ತಿ ಹೊಂದಿ ತಲ್ಲೂರಿನ ತಮ್ಮ ಮನೆಯಲ್ಲಿ ವಾಸವಾಗಿದ್ದಾರೆ. ಫ್ಲೆಮಿಂಗ್ ತಾಯಿ ಇಸ್ರೇಲ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಸೆಪ್ಟೆಂಬರ್ 6 ರಂದು ಪ್ಲೆಮಿಂಗ್‌ಗೆ ಹೊಚ್ಚಹೊಸ ಕೆಟಿಎಮ್ ಡ್ಯೂಕ್ ಬೈಕ್ ಕೊಡಿಸಿದ್ದರು. ಇಬ್ಬರೂ ಕೂಡ ಮಣಿಪಾಲ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜೊತೆಯಾಗಿ ವಿದ್ಯಾಭ್ಯಾಸ ನಡೆಸುತ್ತಿದ್ದರು ಎನ್ನಲಾಗಿದೆ.

ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.


Spread the love