ರಾಜಕೀಯ ಬದಿಗಿಟ್ಟು ಯೋದರನ್ನು ರಕ್ಷಿಸಿ -ಸಿಪಿಐ ಕರೆ

Spread the love

ರಾಜಕೀಯ ಬದಿಗಿಟ್ಟು ಯೋದರನ್ನು ರಕ್ಷಿಸಿ -ಸಿಪಿಐ ಕರೆ

ಮಂಗಳೂರು: ಭಾರತ ಮತ್ತು ಪಾಕಿಸ್ತಾನದ ಆಡಳಿತದಾರರ ರಾಜಕೀಯ ಕುಟಿಲತೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದಿನಿಂದಲೂ ನಿರಂತರ ಅಶಾಂತಿ ಏರ್ಪಟ್ಟಿದೆ. ಇತ್ತೀಚೆಗಿನ ಎರಡು ತಿಂಗಳಿಂದ ಬಿಕ್ಕಟ್ಟು ಮತ್ತು ಅಶಾಂತಿ ಮತ್ತಷ್ಟು ಉಲ್ಬಣಗೊಂಡಿದೆ. ಕಳೆದ ರವಿವಾರ ಕಾಶ್ಮೀರದ ಉರಿ ಸೇನಾ ನೆಲೆಯಲ್ಲಿ ಮಲಗಿದ್ದ ಯೋಧರ ಮೇಲೆ ನಸುಕಿನ ಜಾವ ಸುಮಾರು ನಾಲ್ಕು ಗಂಟೆಯ ವೇಳೆ ಉಗ್ರಗಾಮಿಗಳು ಗ್ರೇನೈಟ್ ಮತ್ತು ಗುಂಡಿನ ದಾಳಿ ನಡೆಸಿ ಹದಿನೆಂಟು ಸೈನಿಕರನ್ನು ಹತ್ಯೆ ಮಾಡಿದ್ದಾರೆ. ಅಲ್ಲದೆ ಹಲವಾರು ಸೈನಿಕರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಗುಪ್ತಚರ ಇಲಾಖೆಯ ವೈಫಲ್ಯವೇ ಇದಕ್ಕೆ ಮುಖ್ಯ ಕಾರಣವಾಗಿದೆಯೆಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಏಕಾಧಿಪತ್ಯ ಮಾಡದೆ ಎಲ್ಲಾ ರಾಜಕೀಯ ಪಕ್ಷ ಮತ್ತು ರಾಜ್ಯ ಸರಕಾರದ ಮುಖ್ಯ ಮಂತ್ರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಜಕೀಯ ಬದಿಗಿಟ್ಟು ಯೋಧರನ್ನು ರಕ್ಷಿಸಿ ದೇಶವನ್ನು ಉಳಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಆಗ್ರಹಿಸಿದರು.

cpim-protest

ಜಮ್ಮು ಕಾಶ್ಮೀರದಲ್ಲಿ ಯೋಧರ ಮೇಲೆ ನಡೆದ ದಾಳಿಯನ್ನು ಖಂಡಿಸಿ ಮಂಗಳೂರಿನ ದ.ಕ ಜಿಲ್ಲಾಧಿಕಾರಿ ಕಛೆರಿಯೆದುರು ನಡೆದ ಪ್ರತಿಭಟನಾ ಪ್ರದರ್ಶನವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಹೆಚ್.ವಿ ರಾವ್ ಮಾತನಾಡುತ್ತಾ ಈ ಕೃತ್ಯದಲ್ಲಿ ಪಾಕಿಸ್ತಾನ ಭಾಗಿಯಾಗಿರುವುದು ಸ್ಪಷ್ಠವಾಗಿದೆ. ಅಂತರಾಷ್ಟ್ರೀಯವಾಗಿ ಪಾಕಿಸ್ತಾನವನ್ನು ಏಕಾಂಗಿ ಮಾಡುವ ರಾಜತಾಂತ್ರಿಕತೆಯನ್ನು ಭಾರತ ಸರಕಾರ ಮಾಡಬೇಕು. ವಿಶ್ವಸಂಸ್ಥೆಯಿಂದ ಛೀಮಾರಿ ಹಾಕಿಸಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವವರನ್ನು ದಂಡಿಸುವ ಬಗ್ಗೆ ಸರಕಾರ ಕಾರ್ಯಪ್ರವೃತ್ತವಾಗಬೇಕಾಗಿದೆ. ಅಲ್ಲದೆ ಈ ¨ಗ್ಗೆ ಸರಕಾರ ದುಡುಕದೆ ಏಕಾಂಗಿ ತೀರ್ಮಾನ ತೆಗೆಯದೆ ಎಲ್ಲಾ ವಿಭಾಗದ ಅಧಿಕೃತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಿ ಶಾಂತಿ ನೆಲೆಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಆಗ್ರಹಿಸಿದರು.

ಪ್ರಾರಂಭದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹುತಾತ್ಮರಾದ ಸೈನಿಕರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಿ ಸರಕಾರಿ ಕೆಲಸದ ಭದ್ರತೆ ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪಕ್ಷದ ಮಂಗಳೂರು ತಾಲೂಕು ಕಾರ್ಯದರ್ಶಿ ವಿ. ಎಸ್ ಬೇರಿಂಜ ಸ್ವಾಗತಿಸಿ, ಪ್ರಾಸ್ತಾವಿಸಿದರು. ಬಂಟ್ವಾಳ ತಾಲೂಕು ಕಾರ್ಯದರ್ಶಿ ಬಿ. ಶೇಖರ್ ವಂದಿಸಿದರು. ಪ್ರತಿಭಟನೆಯ ನೇತೃತ್ವವನ್ನು ಜಿಲ್ಲಾ ನಾಯಕರಾದ ಎ. ಪ್ರಭಾಕರ ರಾವ್, ಎಂ. ಕರುಣಾಕರ್, ಸುರೇಶ್ ಕುಮಾರ್, ಬಾಬು ಭಂಡಾರಿ, ಯು. ಭಾಸ್ಕರ್, ಕೆ. ಈಶ್ವರ್, ಚಂದ್ರಾವತಿ, ಸುಧಾಕರ್ ಕಲ್ಲೂರು, ಚಿತ್ರಾಕ್ಷಿ ಕುಂಜತ್ತ್‍ಬೈಲ್, ಭಾರತಿ ನರಿಕೊಂಬು, ಶಿವಪ್ಪ ಕೋಟ್ಯಾನ್, ಸರಸ್ವತಿ ಕಡೇಶಿವಾಲಯ ಮುಂತಾದವರು ವಹಿಸಿದ್ದರು.


Spread the love