ರಾಜಕೀಯ, ಭಾಷೆಯ ಗಡಿ ದಾಟಿದ ಸಾಹಿತ್ಯ ಯುವ ಜನತೆಯ ಗುರಿಯಾಗಬೇಕು – ವಿವೇಕ ರೈ

Spread the love

ಮಂಗಳೂರು: ನಮ್ಮ ಯುವ ಸಾಹಿತಿಗಳು ರಾಜಕೀಯ, ಭಾಷಾ ಮಿತಿಯಿಂದ ಹೊರ ಬಂದು, ಸೌಜನ್ಯಯುತ ಸಾಹಿತ್ಯ ಕೃಷಿ ಮಾಡುವ ಮೂಲಕ, ಸಾಮಾಜಿಕ ಸಂಗತಿಗಳನ್ನು ಚರ್ಚಿಸುವ ಅಗತ್ಯವಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಬಿ ಎ ವಿವೇಕ ರೈ ಹೇಳಿದರು.

ಅವರು ಮಂಗಳೂರಿನಲ್ಲಿ ಅರೆಹೊಳೆ ಪ್ರತಿಷ್ಠಾನ, ರಂಗ ಸಂಗಾತಿ ಹಾಗೂ ಎಸ್‍ಡಿ ಎಂ ವಿದ್ಯಾಸಂಸ್ಥೆಗಳೊಂದಿಗೆ  ಆಯೋಜಿಸಿದ್ದ, ನಾ ದಾಮೋದರ ಶೆಟ್ಟಿ ಅಭಿನಂದನಾ ಸಮಾರಂಭ, ‘ನಾದಾ’ಭಿನಂದನೆಯಲ್ಲಿ  ಮಾತಾಡುತ್ತಿದ್ದರು. ದೈಹಿಕ ದುಡಿಮೆ ಮತ್ತು ಸೌಜನ್ಯಯುಕ್ತ ನಡವಳಿಕೆಗಳು ಓರ್ವ ಉತ್ತಮ ಸಾಹಿತಿಯನ್ನು ರೂಪಿಸಬಲ್ಲವು ಎಂದೂ ಅವರು ಹೇಳಿದರು.

image001nadabhinandane-20160316-001

ಕೇಂದ್ರ  ಸಾಹಿತ್ಯ ಅಕಾಡೆಮಿಯ 2015 ರ ಸಾಲಿನ ಅನುವಾದಕ್ಕಾಗಿ ಪ್ರಶಸ್ತಿಗೆ ಭಾಜನರಾದ ಡಾ. ನಾ ದಾಮೋದರ ಶೆಟ್ಟಿಯವರು ಮಲಯಾಳಂನಿಂದ ಅನುವಾದಿಸಿದ ಕೃತಿ, ‘ಕೊಚ್ಚರೇತ್ತಿ’ ಬಗ್ಗೆ ಮಾತಾಡುತ್ತಾ ಡಾ. ಆರ್ ನರಸಿಂಹ ಮೂರ್ತಿ, ಕೇರಳದ ಆದಿವಾಸಿಯೊಬ್ಬರ ತಮ್ಮದೇ ಶೈಲಿಯ ಕೃತಿಯನ್ನು ನಾದಾ, ಮೂಲ ಕೃತಿಗೆಲ್ಲಿಯೂ ಚ್ಯುತಿ ಬರದಂತೆ ಸಮರ್ಥವಾಗಿ ಅನುವಾದಿಸಿದ್ದಾರೆ ಎಂದು, ಕೃತಿಯ ಸಂಕ್ಷಿಪ್ತ ಪರಿಚಯ ಮಾಡಿದರು.

ಧರ್ಮದರ್ಶಿ ಹರಿಕೃಷ್ಣ ಪುನರೂರು ಅವರು ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಮತ್ತು ಲಿಯೋ ಕ್ಲಬ್ ಕದ್ರಿ ಹಿಲ್ಸ್, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್, ನಂದಗೋಕುಲ ಸಂಸ್ಥೆಗಳು ಹಾಗೂ ಸಾರ್ವಜನಿಕರು ನಾದಾ ಅವರನ್ನು ಸನ್ಮಾನಿಸಿದರು.

ಡಾ. ದೇವರಾಜ್, ಸುಮತಿ ದಾಮೋದರ ಶೆಟ್ಟಿ, ಪೂಜಾ ಪೈ, ಶ್ವೇತಾ ಅರೆಹೊಳೆ, ಎನ್ ಸುಬ್ರಾಯ ಭಟ್ ಮುಂತಾದವರು ಉಪಸ್ಥಿತರಿದ್ದರು.  ಅರೆಹೊಳೆ ಸದಾಶಿವ ರಾವ್ ಸ್ವಾಗತಿಸಿ, ರಘು ಇಡ್ಕಿದು ನಿರೂಪಿಸಿದರು. ರಂಗಸಂಗಾತಿಯ ಶಶಿರಾಜ್ ರಾವ್ ಕಾವೂರು ವಂದಿಸಿದರು.


Spread the love