ರೈತರು ಕೃಷಿ ನಿಲ್ಲಿಸಿದರೆ ಪರಿಸ್ಥಿತಿ ಊಹಿಸಲೂ ಅಸಾಧ್ಯ ಕ್ರೈಸ್ತ ಕೃಷಿಕರ ಸಮಾವೇಶದಲ್ಲಿ ಪಿಯುಸ್ ಎಲ್. ರೊಡ್ರಿಗಸ್

Spread the love

ರೈತರು ಕೃಷಿ ನಿಲ್ಲಿಸಿದರೆ ಪರಿಸ್ಥಿತಿ ಊಹಿಸಲೂ ಅಸಾಧ್ಯ ಕ್ರೈಸ್ತ ಕೃಷಿಕರ ಸಮಾವೇಶದಲ್ಲಿ ಪಿಯುಸ್ ಎಲ್. ರೊಡ್ರಿಗಸ್

ಮೂಡುಬಿದಿರೆ: ಸರಕಾರ ಸೂಕ್ತ ಕೃಷಿ ನೀತಿ, ಮಾರುಕಟ್ಟೆ ನೀತಿ ರೂಪಿಸದೆ ಇರುವುದರಿಂದ ಮತ್ತು ಕೃಷಿ ಉತ್ಪನ್ನಗಳ ಮಾರಾಟದ ಬಗ್ಗೆ ಸಂಘಟನಾತ್ಮಕ ಕೆಲಸ ಆಗದಿರುವುದರಿಂದ ರೈತರು ಸೂಕ್ತ ಆದಾಯ ಪಡೆಯಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ದೇಶದ ರೈತರು ಸಂಪೂರ್ಣವಾಗಿ ಕೃಷಿ ಮಾಡುವುದನ್ನು ನಿಲ್ಲಿಸಿದರೆ ದೇಶದ ಪರಿಸ್ಥಿತಿಯನ್ನು ಊಹಿಸುವುದೂ ಅಸಾಧ್ಯ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಪಿಯುಸ್ ಎಲ್. ರೊಡ್ರಿಗಸ್ ಹೇಳಿದರು.

ಅವರು ರವಿವಾರ ಮೂಡುಬಿದಿರೆಯ ಕೋರ್ಪುಸ್ ಕ್ರೀಸ್ತಿ ಚರ್ಚ್ ಸಭಾಂಗಣ ದಲ್ಲಿ ಮೂಡುಬಿದಿರೆ ವಲಯ ಕಥೋಲಿಕ್ ಸಭಾದ ಬೆಳ್ಳಿಹಬ್ಬ ವರ್ಷದ ಪ್ರಯುಕ್ತ ನಡೆದ ಕೃಷಿಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರೋತ್ಸಾಹದ ಕೊರತೆಯೂ ರೈತರ ಆತ್ಮಹತ್ಯೆಗೆ ಕಾರಣಗಳಲ್ಲೊಂದು. ಭೂಸುಧಾರಣೆಯ ನಂತರ ಭೂ ಮಾಲಿಕರ ಹಿಡಿತದಿಂದ ಭೂಮಿ ನಮಗೇ ಸಿಕ್ಕಿದ್ದರೂ ಆಧುನಿಕ ರೀತಿಯ ಕೃಷಿಗೆ ನಾವಿನ್ನೂ ಒಗ್ಗಿಕೊಂಡಿಲ್ಲ. ಕೃಷಿಯನ್ನು ಕಡೆಗಣಿಸಿದರೆ ನೀರಿನ ಬರದಂತೆ ಮುಂದೆ ಅನ್ನಕ್ಕಾಗಿಯೂ ನಾವು ಪರದಾಡಬೇಕಾದ ಪರಿಸ್ಥಿತಿ ಬರಬಹುದು. ಕೃಷಿಕರು ಹಸಿರು ಉಳಿಸುವ ಸಮಾಜ ಸೇವಕರು ಎಂಬ ಮನೋಭಾವವನ್ನೂ ಬೆಳೆಸಿಕೊಳ್ಳಬೇಕಿದೆ ಎಂದರು.

ರಾಷ್ಟ್ರಮಟ್ಟದ ಸಾಧಕ ಕೃಷಿಕ ಕುದಿ ಶ್ರೀನಿವಾಸ ಭಟ್ ಅವರು ಮುಖ್ಯ ಅತಿಥಿಯಾಗಿ ಮಾತನಾಡಿ ಕೃಷಿಕರಿಗೆ ಸೂಕ್ತ ಮಾರುಕಟ್ಟೆ ದರ ಸಿಗದಿರುವುದು ದುಸ್ಥಿತಿ. ಆದರೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಿ ಹೆಚ್ಚಿನ ಆದಾಯ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

ಮೂಡುಬಿದಿರೆ ವಲಯ ಕಥೋಲಿಕ್ ಸಭಾ ಅಧ್ಯಕ್ಷ ಹೆರಾಲ್ಡ್ ರೇಗೋ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಹಾಯಕ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಅವರು ಮಾತನಾಡಿ ಇಂದು ಕೃಷಿಕರು ಗೊಂದಲದ ಕವಲು ದಾರಿಯಲ್ಲಿದ್ದಾರೆ. ಪೂರ್ಣ ಮನಸ್ಸಿನಿಂದ ಕೃಷಿ ಮಾಡಿದರೆ ಪ್ರಗತಿ, ಆರೋಗ್ಯ ಮತ್ತು ನೆಮ್ಮದಿಯ ಬದುಕು ಸಾಧ್ಯ ಎಂದು ಕಿವಿಮಾತು ಹೇಳಿದರು.

ಈ ಸಂದರ್ಭ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಲಾರೆನ್ಸ್ ಪಿಂಟೊ ಅಲಂಗಾರು, ಸಂತೋಷ್ ಮಿರಾಂದಾ ಗಂಟಾಲ್ಕಟ್ಟೆ, ಆಲ್ಬರ್ಟ್ ಮಿನೇಜಸ್ ಹೊಸ್ಪೆಟ್, ಸಿರಿಲ್ ಸೆರಾವೋ ಮೂಡುಬಿದಿರೆ, ಪಾವ್ಲ್ ಕೊರ್ಡೇರೋ ನೆಲ್ಲಿಕಾರ್, ವಿಕ್ಟರ್ ಕಾರ್ಡೋಜಾ ಪಾಲಡ್ಕ, ಫೆಡ್ರಿಕ್ ಸಾಂಕ್ತಿಸ್ ಸಂಪಿಗೆ, ಗಾಬ್ರಿಯೆಲ್ ವಲೇರಿಯನ್ ಪಿಂಟೊ ಸಾವೆರಪುರ, ರೊನಾಲ್ಡ್ ಫೆರ್ನಾಂಡಿಸ್ ಸಿದ್ಧಕಟ್ಟೆ, ಜೇಸನ್ ವಿಟಲಿಸ್ ಲೋಬೊ ಶಿರ್ತಾಡಿ, ಇಗ್ನೇಶಿಯಸ್ ಲೋಬೊ ತಾಕೊಡೆ ಅವರನ್ನು ಕಥೋಲಿಕ್ ಸಭಾ ವತಿಯಿಂದ ಸನ್ಮಾನಿಸಲಾಯಿತು.

ಪ್ರಶಸ್ತಿವಿಜೇತ, ಪ್ರಗತಿಪರ ಕೃಷಿಕ ಎಡ್ವರ್ಡ್ ರೆಬೆಲ್ಲೊ ತಾಕೊಡೆ ಮಾತನಾಡಿ, ವಾಣಿಜ್ಯ ಬೆಳೆಗಳೊಂದಿಗೆ ಹಣ್ಣುಗಳನ್ನು ಬೆಳೆಸುವುದರಿಂದ ಕೃಷಿ ಲಾಭದಾಯಕವಾಗುತ್ತದೆ ಎಂದರು.

ಮೂಡುಬಿದಿರೆ ವಲಯ ಕಥೋಲಿಕ್ ಸಭಾದ ಅಧ್ಯಾತ್ಮಿಕ ನಿರ್ದೇಶಕ ವಂ| ಸ್ವಾಮಿ ಪೌಲ್ ಸಿಕ್ವೇರಾ, ಕಥೋಲಿಕ್ ಸಭಾ ಕೇಂದ್ರೀಯ ಅಧ್ಯಕ್ಷ ಅನಿಲ್ ಲೋಬೊ ಫೆರ್ಮಾಯ್, ಕಥೋಲಿಕ್ ಸಭಾ ವಲಯ ಕಾರ್ಯದರ್ಶಿ ಲೋಯ್ಡ್ ರೇಗೊ ತಾಕೊಡೆ ಉಪಸ್ಥಿತರಿದ್ದರು.

ಬೆಳ್ಳಿಹಬ್ಬ ಆಚರಣಾ ಸಮಿತಿಯ ಸಂಚಾಲಕ ಜೆರಾಲ್ಡ್ ಡಿಕೋಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರೊನಾಲ್ಡ್ ಸೆರಾವೋ ಬೈಬಲ್ ವಾಚಿಸಿದರು. ಮನು ಹೊಸ್ಪೆಟ್ ಕಾರ್ಯಕ್ರಮ ನಿರೂಪಿಸಿದರು. ನಿಕಟಪೂರ್ವಾಧ್ಯಕ್ಷ ಮೆಲ್ವಿನ್ ಡಿಕೋಸ್ತಾ ವಂದಿಸಿದರು.

 


Spread the love