ವಿದ್ಯಾರ್ಥಿಗಳು ಆಕರ್ಷಣೆಗಳಿಗೆ ಮರುಳಾಗಬಾರದು – ಎಸ್. ಗಣೇಶ್ ರಾವ್

Spread the love

ಮಂಗಳೂರು: ವಿದ್ಯಾರ್ಥಿಗಳು ವಿವಿಧ ಆಕರ್ಷಣೆ ಮತ್ತು ಟ್ರೆಂಡ್‍ಗಳಿಗೆ ಮರುಳಾಗಿ ಕೋರ್ಸುಗಳನ್ನು ಆಯ್ಕೆ ಮಾಡಬಾರದು. ಬದಲಾಗಿ ವಾಸ್ತವಿಕತೆಯ ಅರಿವಿನೊಂದಿಗೆ ತಮ್ಮ ಒಲವು ಮತ್ತು ಪ್ರತಿಭೆಗಳಿಗೆ ಅನುಗುಣವಾಗಿ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕರಾವಳಿ ಕಾಲೇಜುಗಳ ಸಮೂಹ ಸಂಸ್ಥೆಯ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ತಿಳಿಸಿದರು. ಅವರು ಇಂದು ನಗರದ ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್ ಸಂಸ್ಥೆಯು ಸಿಇಟಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಕೌನ್ಸಿಲಿಂಗ್ ಪೂರ್ವ ಮಾರ್ಗದರ್ಶನ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

CET Guidance

ನಗರದ ಬದ್ರಿಯಾ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ, ಸೌದಿ ಅರೇಬಿಯಾದ ದಕ್ಷಿಣ ಕರ್ನಾಟಕ ಮುಸ್ಲಿಮ್ ಒಕ್ಕೂಟ (ಡಿಕೆಎಂಒ)ದ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ ಮಂಗಳೂರು ನೆಪ್ರೊ ಯುರೋಲಜಿ ಚಾರಿಟೆಬಲ್ ಟ್ರಸ್ಟ್‍ನ ಅಧ್ಯಕ್ಷ ಡಾ. ಮುಹಮ್ಮದ್ ಸಲೀಂ ಹಾಗೂ ವಿ. ಎಂ. ರಿಯಾಝ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕೆರಿಯರ್ ಗೈಡೆನ್ಸ್ ಎಂಡ್ ಇನ್ಫೊರ್ಮೇಶನ್ ಸೆಂಟರ್‍ನ ಅಧ್ಯಕ್ಷ ಉಮರ್ ಯು.ಹೆಚ್. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ವೈದ್ಯಕೀಯ, ದಂತ ವೈದ್ಯಕೀಯ, ಇಂಜಿನಿಯರಿಂಗ್, ಆಯುರ್ವೇದ, ಯುನಾನಿ, ಹೋಮಿಯೋಪಥಿ, ಯೋಗ – ನ್ಯಾಚುರಾಪಥಿ, ಬಿ ಫಾರ್ಮ, ಫಾರ್ಮ ಡಿ. ಹಾಗೂ ಬಿಎಸ್ಸಿಯ ವಿವಿಧ ಕೋರ್ಸುಗಳಿಗೆ ನಡೆಯಲಿರುವ ಆನ್‍ಲೈನ್ ಸಿಇಟಿ ಕೌನ್ಸಿಲಿಂಗ್‍ನ ವಿಧಾನ, ದಾಖಲಾತಿ ಪರಿಶೀಲನೆಗೆ ಬೇಕಾಗಿರುವ ಅಗತ್ಯ ಕಾಗದಪತ್ರಗಳು, ಸೀಟುಗಳ ಆಯ್ಕೆ ಪ್ರಕಿೃಯೆ ಮತ್ತು ಇತರ ಪೂರಕ ಮಾಹಿತಿ ನೀಡಿದರು.


Spread the love