ಶರತ್ ಹತ್ಯೆಗೆ ಕಾರಣವಾದ ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆ ನಿಷೇಧಿಸಿ – ಜಿಲ್ಲಾ ಬಿಜೆಪಿ ಯುವ ಮೋರ್ಚಾ

Spread the love

ಶರತ್ ಹತ್ಯೆಗೆ ಕಾರಣವಾದ ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆ ನಿಷೇಧಿಸಿ –  ಜಿಲ್ಲಾ ಬಿಜೆಪಿ ಯುವ ಮೋರ್ಚಾ

ಉಡುಪಿ: ರಾಜ್ಯದಲ್ಲಿ ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ರಾಜ್ಯ ಸರಕಾರಕ್ಕೆ ಜಿಲ್ಲಾಧಿಕಾರಗಳ ಮುಕಾಂತರ ಉಡುಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಗುರುವಾರ ಮನವಿ ಸಲ್ಲಿಸಲಾಯಿತು. ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಮನವಿಯನ್ನು ಸ್ವೀಕರಿಸಿದರು.

ಕಳೆದ 2 ವರ್ಷಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿಹಾಗೂ ಸಂಘಪರಿವಾರದ ಕಾರ್ಯಕರ್ತರ ಹತ್ಯೆ ಹಾಗೂ ಹಲ್ಲೆ ಪ್ರಕರಣಗಳಲ್ಲಿ ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಗಳು ನೇರವಾಗಿ ಭಾಗಿಯಾಗಿರುವುದು ರುಜುವಾತಾಗಿದೆ. ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಗಳು ನಿಷೇಧಿತ ಸಿಮಿ ಸಂಘಟನೆಯ ಜೊತೆ ಸಂಪರ್ಕ ಹೊಂದಿದ್ದು, ನಿಷೇಧಿತ ಸೀಮಿ ಸಂಘಟನೆಯ ಪದಾಧಿಕಾರಿಗಳೇ ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಯಲ್ಲೂ ಪದಾಧಿಕಾರಿಗಳಾಗಿರುವುದು ಕಾನೂನಿಗೆ ಮಾಡಿದ ಅಣಕದಂತಿದೆ. ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಗಳು ಹಲವು ರೀತಿಯ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಕೇರಳ, ತಮಿಳುನಾಡು, ಗೋವಾ ರಾಜ್ಯಗಳಲ್ಲಿ ಸಹ ತನ್ನ ಜಾಲವನ್ನು ಹರಡಿಕೊಂಡಿದೆ. ವಿಶೇಷವಾಗಿ ಕರ್ನಾಟಕದಲ್ಲಿ ಹಿಂದೂಗಳ ಕೊಲೆ, ಹಲ್ಲೆ, ಕೋಮು ದಳ್ಳುರಿಗೆ ಕುಮ್ಮಕ್ಕು ನೀಡುವುದು, ಶಾಂತಿ ಸೌಹಾರ್ದತೆಗೆ ಭಂಗ ತರುವಂತಹ ಕೃತ್ಯಗಳಲ್ಲಿ ನೇರವಾಗಿ ಭಾಗಿಯಾಗಿದೆ.

ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ನಡೆದಿರುವ ಕೊಲೆ, ಗಲಭೆಗಳಲ್ಲಿ ಭಾಗಿಯಾಗಿರುವ ಈ ಸಂಘಟನೆಗಳು ಮುಖ್ಯವಾಗಿ ಮೈಸೂರಿನ ಮಹಾಜನ್ ಕಾಲೇಜಿನ ಯುವಕರ ಅಪಹರಣ ಮತ್ತು ಹತ್ಯೆ, ಶಿವಮೊಗ್ಗದಲ್ಲಿ ನಡೆದ ಕೋಮು ಗಲಭೆ ಹಾಗೂ ಹತ್ಯೆಯಾದ ಇಬ್ಬರೂ ಹಿಂದೂ ಯುವಕರ ಹತ್ಯೆಯಲ್ಲಿ ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಯವರ ಕೈವಾಡ ಇರುವುದು ತನಿಖೆಯಿಂದಿ ಗೊತ್ತಾಗಿತ್ತು. ಅಲ್ಲದೆ ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದೂ ಸಂಘಟನೆಯ ಕಾರ್ಯಕರ್ತರ ಸರಣಿ ಹತ್ಯೆಯಲ್ಲಿ ಮೈಸೂರಿನ ರಾಜು, ಬೆಂಗಳೂರಿನ ರುದ್ರೇಶ್, ಮೂಡಬಿದ್ರೆಯ ಪ್ರಶಾಂತ್ ಪೂಜಾರಿ ಹೀಗೆ ನಡೆದಿರುವ ಕೊಲೆಗಳಲ್ಲಿ ಬಂಧಿತರಾಗಿರುವ ವ್ಯಕ್ತಿಗಳು ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿದ್ದಾರೆ. ಮಂಗಳೂರಿನ ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಖಲೀಲ್ ವುಲ್ಲಾ ಚಾಮರಾಜನಗರ ಜಿಲ್ಲೆಯ ಪಿ.ಎಫ್.ಐ. ಅಧ್ಯಕ್ಷನಾಗಿದ್ದು ಇನ್ನೊಬ್ಬ ಬಂಟ್ವಾಳದ ಅಬ್ದುಲ್ ಶಪಿ ಕೂಡ ಅದೇ ಸಂಘಟನೆಯವನು ಎನ್ನಲಾಗಿದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ನೇತೃತ್ವದ ಸರಕಾರ ಪಿ.ಎಫ್.ಐ ಮತ್ತು ಕೆ.ಎಫ್.ಡಿ ಸಂಘಟನೆಗಳ ಮೇಲಿನ ಎಲ್ಲಾ ಕೇಸುಗಳನ್ನು ಹಿಂಪಡೆಯುವ ಮೂಲಕ ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಅವಕಾಶ ಮಾಡಿಕೊಟ್ಟಿದ್ದು, ಇಂತಹ ಸಮಾಜ ದ್ರೋಹಿ ಕ್ರತ್ಯದಲ್ಲಿ ಭಾಗಿಯಾಗಿರುವ ದೇಶದ್ರೋಹಿ ಸಂಘಟನೆಗಳಾದ ಪಿ.ಎಫ್.ಐ ಮತ್ತು ಕೆ.ಎಫ್.ಡಿಯನ್ನು ರಾಜ್ಯದಲ್ಲಿ ನಿಷೇಧಿಸಬೇಕು, ಅಲ್ಲದೆ ಈ ಸಂಘಟನೆಗಳ ಬ್ಯಾಂಕ್ ಖಾತೆ ಹಾಗೂ ಚರಾಸ್ಥಿ ಮತ್ತು ಸ್ಥೀರಾಸ್ತಿ ಕೂಡಲೇ ಮುಟ್ಟುಗೋಲು ಹಾಕಿಕೊಳ್ಳಬೇಕು, 2008ರ ರಾಷ್ಟ್ರೀಯ ತನಿಖಾ ದಳ ಕಾಯಿದೆಯ ಸೆಕ್ಷನ್ 6ರ ಅನ್ವಯ ರಾಜ್ಯದಲ್ಲಿ ಹಿಂದೂಗಳ ಮೇಲಾಗಿರುವ ಎಲ್ಲಾ ಹತ್ಯೆ ಮತ್ತು ಹಲ್ಲೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕು ಮತ್ತು ಇಂತಹ ಸಮಾಜಘಾತುಕ ಸಂಘಟನೆಗಳಿಗೆ ಮತ್ತು ಕೋಮು ಹಿಂಸೆಗೆ ಕುಮ್ಮಕ್ಕು ನೀಡುತ್ತಿರುವ ಸಚಿವ ರಮಾನಾಥ ರೈಯವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ, ಮಾಜಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಶ್ರೀಶ ನಾಯಕ್, ಜಿಪಂ ಅಧ್ಯಕ್ಷ ದಿನಕರ ಬಾಬು, ಪ್ರಧಾನ ಕಾರ್ಯದರ್ಶಿಗಳಾದ ಗಿರೀಶ್ ಎಂ. ಅಂಚನ್, ಪ್ರತಾಪ್ ಚಂದ್ರ ಶೆಟ್ಟಿ, ನಗರ ಯುವ ಮೋರ್ಚಾ ಅಧ್ಯಕ್ಷ ಅಕ್ಷಿತ್ ಶೆಟ್ಟಿ ಹೆರ್ಗ, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಬಿಜೆಪಿ ನಾಯಕರಾದ ಕುಯಿಲಾಡಿ ಸುರೇಶ್ ನಾಯಕ್, ಯಶ್ಪಾಲ್ ಸುವರ್ಣ, ಕುತ್ಯಾರು ನವೀನ್ ಶೆಟ್ಟಿ, ವೀಣಾ ಶೆಟ್ಟಿ, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ರವಿ ಅಮೀನ್ ಹಾಗೂ ಇತರರು ಉಪಸ್ಥಿತರಿದ್ದರು.

 


Spread the love