ಶ್ರೀಕೃಷ್ಣ ಮಠದಲ್ಲಿ ಇಫ್ತಾರ್‌ ಕೂಟ ಸರಿಯಲ್ಲ: ಶೋಭಾ ಕರಂದ್ಲಾಜೆ, ಒಳ್ಳೆಯ ಕೆಲಸ: ಜಗದೀಶ ಶೆಟ್ಟರ್

Spread the love

ಶ್ರೀಕೃಷ್ಣ ಮಠದಲ್ಲಿ ಇಫ್ತಾರ್‌ ಕೂಟ ಸರಿಯಲ್ಲ: ಶೋಭಾ ಕರಂದ್ಲಾಜೆ, ಒಳ್ಳೆಯ ಕೆಲಸ: ಜಗದೀಶ ಶೆಟ್ಟರ್

ಹುಬ್ಬಳ್ಳಿ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ವಿಶ್ವೇಶತೀರ್ಥ ಸ್ವಾಮೀಜಿಯವರು ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪಡಿಸಿದ್ದ ಕ್ರಮವನ್ನು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ವಿರೋಧಿಸಿದ್ದರೆ, ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ಸ್ವಾಗತಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, ‘ಪೇಜಾವರ ಸ್ವಾಮೀಜಿ ಮಠದಲ್ಲಿ ಇಫ್ತಾರ್‌ ಕೂಟ ನಡೆಸಿದ್ದು ಸರಿಯಲ್ಲ. ಧಾರ್ಮಿಕ ಆಚರಣೆಗಳು ಆಯಾ ಧರ್ಮದ ಸಂಸ್ಥೆಗಳಲ್ಲಿ ಮಾತ್ರ ನಡೆದರೆ ಚೆನ್ನ’ ಎಂದು ಅಭಿಪ್ರಾಯಪಟ್ಟರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌, ‘ಕೋಮು ಸೌಹಾರ್ದ ಕಾಪಾಡುವ ಕೆಲಸವನ್ನು ಪೇಜಾವರ ಸ್ವಾಮೀಜಿ ಮಾಡಿದ್ದಾರೆ. ಪರಧರ್ಮ ಸಹಿಷ್ಣುತೆ ಹಿಂದೂಧರ್ಮದ ಆಶಯವಾಗಿದೆ. ಅದರಂತೆ ಶ್ರೀಗಳು ಮುಸ್ಲಿಮರಿಗೆ ಇಫ್ತಾರ್‌ ಕೂಟ ಏರ್ಪಡಿಸಿದ್ದಾರೆ. ಇದನ್ನು ವಿವಾದ ಮಾಡಬಾರದು’ ಎಂದು ಹೇಳಿದರು. ‘ಧರ್ಮ ಸಂರಕ್ಷಣೆ ವಿಷಯದಲ್ಲಿ ಪೇಜಾವರ ಶ್ರೀ ಈವರೆಗೂ ಯೋಗ್ಯ ನಿರ್ಧಾರವನ್ನೇ ಕೈಗೊಂಡಿದ್ದಾರೆ’ ಎಂದರು.

ಕೋಮು ದಳ್ಳುರಿಗೆ ಪೇಜಾವರರ ಮುಲಾಮು: ಆಂಜನೇಯ

ಬೆಂಗಳೂರು: ಶ್ರೀ ಕೃಷ್ಣ ಮಠದಲ್ಲಿ ಇಫ್ತಾರ್ ಕೂಟ ಏರ್ಪಡಿಸಿದ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ಕ್ರಮವನ್ನು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಬೆಂಬಲಿಸಿದ್ದಾರೆ.

ಕೋಮು ದಳ್ಳುರಿಯಿಂದ ಬೇಯುತ್ತಿರುವ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಾಯಕ್ಕೆ ಶ್ರೀಗಳು ನಡೆಸಿದ ಇಫ್ತಾರ್ ಕೂಟದಿಂದ ಮುಲಾಮು ಹಚ್ಚಿದಂತಾಗಿದೆ ಎಂದು ಅವರು ಹೇಳಿದ್ದಾರೆ.

‘ಪೇಜಾವರ ಶ್ರೀಗಳು ಯಾವುದೇ ತಪ್ಪು ಮಾಡಿಲ್ಲ. ಆರೋಗ್ಯಪೂರ್ಣ ಸಮಾಜ ನಿರ್ಮಾಣದಲ್ಲಿ 60 ವರ್ಷಗಳಿಂದ ದುಡಿಯುತ್ತಿರುವ ಶ್ರೀಗಳು, ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ ಸೌಹಾರ್ದಕ್ಕೆ ಕಾರಣರಾಗಿದ್ದಾರೆ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ತಿಳಿಸಿದರು.

‘ಪೇಜಾವರ ಶ್ರೀಗಳ ಕ್ರಮ ಭಾವೈಕ್ಯದ ಸಂಕೇತ. ಉಡುಪಿ ಮಠಕ್ಕೂ ಮುಸ್ಲಿಂ ಸಮುದಾಯಕ್ಕೂ ಅವಿನಾಭಾವ ಸಂಬಂಧವಿದೆ. ’ ಎಂದೂ ಸಚಿವರು ಅಭಿಪ್ರಾಯಪಟ್ಟರು.

ಮೈಸೂರಿನಲ್ಲಿ ಗೋಮಾಂಸ ಸೇವಿಸಿ ಕಾರ್ಯಕ್ರಮ ಉದ್ಘಾಟಿಸಿದ ಬಗ್ಗೆ ಕೇಳಿದಾಗ ‘ಆಹಾರ ಪದ್ಧತಿ ಎಲ್ಲರ ಹಕ್ಕು. ನೀವು ಇಂಥದ್ದನ್ನು ಮಾತ್ರ ತಿನ್ನಬೇಕು ಎಂದು ಯಾರಿಗೂ ಷರತ್ತು ವಿಧಿಸಲು ಸಾಧ್ಯವಿಲ್ಲ. ಬಿಜೆಪಿಯವರು ಅನಗತ್ಯ ವಿಷಯಗಳ ಬಗ್ಗೆ ವಿವಾದ ಸೃಷ್ಟಿಸುತ್ತಿದ್ದಾರೆ’ ಎಂದು ದೂರಿದರು. ‘ಡಾ. ಬಿ.ಆರ್‌. ಅಂಬೇಡ್ಕರ್ ಅವರ 125ನೇ ವರ್ಷಾಚರಣೆ ಅಂಗವಾಗಿ ಜುಲೈ 21 ರಿಂದ ಮೂರು ದಿನ ಅಂತರರಾಷ್ಟ್ರೀಯ ಮಟ್ಟದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಉದ್ದೇಶದಿಂದ ದಲಿತ ಸಂಘಟನೆಗಳು, ಹೋರಾಟಗಾರರ ಸಭೆ ನಡೆಸಲಾಯಿತು’ ಎಂದೂ ಅವರು ತಿಳಿಸಿದರು.

ನಮಾಜ್‌ ಮಾಡಲು ಅವಕಾಶ ನೀಡಿದ್ದು ಸರಿಯಲ್ಲ: ಡಿ.ವಿ. ಸದಾನಂದಗೌಡ

‘ಪೇಜಾವರ ಶ್ರೀಗಳು ಇಫ್ತಾರ್‌ ಕೂಟ ಆಯೋಜಿಸಿದ್ದು ಒಳ್ಳೆಯದು. ಆದರೆ, ಮಠದೊಳಗೆ ನಮಾಜ್‌ ಮಾಡಲು ಅವಕಾಶ ನೀಡಿದ್ದು ಸರಿಯಲ್ಲ’ ಎಂದು ಕೇಂದ್ರ ಸಾಂಖ್ಯಿಕ ಮತ್ತು ಯೋಜನೆ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಕೆಂಪೇಗೌಡ ಜಯಂತಿ ಅಂಗವಾಗಿ ಮೇಖ್ರಿ ವೃತ್ತದ ಬಳಿಯಿರುವ ಕೆಂಪೇಗೌಡ ಗಡಿಗೋಪುರ ಉದ್ಯಾನದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು. ‘ರಂಜಾನ್‌ ವೇಳೆ ರಾಜಕಾರಣಿಗಳು ಟೋಪಿ ಹಾಕಿಕೊಂಡು ಫೋಸು ಕೊಡುತ್ತೇವೆ. ಆದರೆ, ಪೇಜಾವರ ಸ್ವಾಮೀಜಿ ಭಾವನಾತ್ಮಕವಾಗಿ ಆಚರಣೆ ಮಾಡಿದ್ದಾರೆ. ಆಚರಣೆಗಳಲ್ಲಿ ವ್ಯತ್ಯಾಸ ಆಗಿರಬಹುದು. ಆದರೆ, ಉದ್ದೇಶ ಕೆಟ್ಟದ್ದಲ್ಲ’ ಎಂದು ಹೇಳಿದರು.

ಮೈಸೂರಿನ ಕಲಾಮಂದಿರದಲ್ಲಿ ಗೋಮಾಂಸ ಸೇವನೆ ಕುರಿತು ಪ್ರತಿಕ್ರಿಯಿಸಿದ ಸಚಿವರು, ‘ಅನೇಕ ಬುದ್ಧಿಜೀವಿಗಳು ತಮ್ಮ ಬುದ್ಧಿಯನ್ನು ತಲೆಯಲ್ಲಿ ಇಟ್ಟುಕೊಳ್ಳುವ ಬದಲು ಕೈಚೀಲದಲ್ಲಿ ಹಾಕಿಕೊಂಡಿರುತ್ತಾರೆ. ಅದನ್ನು ಇಂತಹದ್ದಕ್ಕೆ ಖರ್ಚು ಮಾಡುತ್ತಾರೆ’ ಎಂದು ಲೇವಡಿ ಮಾಡಿದರು.

ಜನರ ಆಹಾರ ಪದ್ಧತಿಯಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ದೇಶದ ಸಂಸ್ಕೃತಿ, ಸಂಸ್ಕಾರ ಉಳಿಸಲು ಕೆಲವು ನಿಯಮ ರೂಪಿಸಿದೆ. ಕೆಲವು ಬುದ್ಧಿಜೀವಿಗಳು ಸರ್ಕಾರದ ಸಭಾಂಗಣದಲ್ಲಿ ಗೋಮಾಂಸ ಭಕ್ಷಣೆ ಮಾಡಿರುವುದಕ್ಕೆ ಸರ್ಕಾರದ ಕುಮ್ಮಕ್ಕೂ ಇರುತ್ತದೆ. ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಈ ರೀತಿ ನಡೆದಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.


Spread the love