ಸಂಘ ಪರಿವಾರ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಬಯಸುತ್ತಿಲ್ಲ – ಜಿ ವಿ ರೆಡ್ಡಿ

Spread the love

ಸಂಘ ಪರಿವಾರ ಜಿಲ್ಲೆಯಲ್ಲಿ ಕೋಮು ಸೌಹಾರ್ದತೆ ಬಯಸುತ್ತಿಲ್ಲ – ಜಿ ವಿ ರೆಡ್ಡಿ

ಮಂಗಳೂರು:ಜನರಲ್ಲಿ ಒಗ್ಗಟ್ಟು ಮತ್ತು ಭಾವೈಕ್ಯತೆ ಮೂಡಿಸುವ ನಿಟ್ಟಿನಲ್ಲಿ ಫೆಬ್ರವರಿ 25 ರಂದು ಕರಾವಳಿ ಸೌಹಾರ್ದ ರ್ಯಾಲಿಯನ್ನು ಆಯೋಜಿಸಿದ್ದು ಜಿಲ್ಲೆಯ ಹೆಚ್ಚಿನ ಸಂಖ್ಯೆ ಜನರು ಭಾಗವಹಿಸಬೇಕು ಎನ್ನುವುದು ನಮ್ಮ ಅಪೇಕ್ಷೆ. ಈ ನಡುವೆ ಸಂಘ ಪರಿವಾರ ಇದನ್ನು ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದು, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಕೊಲೆಗಡುಕ ಮುಖ್ಯಮಂತ್ರಿ ಎಂದು ಬಿಂಬಿಸುತ್ತಿದ್ದಾರೆ. ನಾವು ಎಂದಿಗೂ ಕೂಡ ಬೆದರಿಕೆಗಳಿಗೆ ಹೆದರುವುದಿಲ್ಲ. ಸಿಪಿಎಂ ಪಕ್ಷ ಎಂದಿಗೂ ಕೋಮು ಭಾವನೆ ಕೆರಳಿಸುವ ಪಕ್ಷವಲ್ಲ ಆದ್ದರಿಂದ ನಾವು ಯಾವುದೇ ರೀತಿಯ ಪಂಥಾಹ್ವಾನಕ್ಕೆ ಸಿದ್ದವಾಗಿದ್ದೇವೆ ಎಂದು ಸಿಪಿಐ(ಎಮ್) ರಾಜ್ಯ ಕಾರ್ಯದರ್ಶಿ ಜಿ ವಿ ರೆಡ್ಡಿ ಹೇಳಿದರು. ಅವರು ಶುಕ್ರವಾರ ಹೋಟೇಲ್ ವುಡ್ ಲ್ಯಾಂಡ್ ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಸಂಘ ಪರಿವಾರದವರು ಆಯೋಜಿಸಿದ ಪ್ರತಿಭಟನೆಯಲ್ಲಿ ಕೇರಳದ ಸಂಘಪರಿವಾರದ ನಾಯಕರೊಬ್ಬರು ಕೇರಳದ ಮುಖ್ಯಮಂತ್ರಿಯನ್ನು ಕೊಲೆಗಡುಕ ಎಂದು ಬಿಂಬಿಸಿದ್ದಾರೆ. ಆದರೆ ಅವರು ಇತಿಹಾಸವನ್ನು ಒದಿದರೆ ನಿಜವಾದ ಕೊಲೆ ಗಡುಕ ಯಾರು ಎನ್ನುವುದು ತಿಳಿಯುತ್ತದೆ. ಸಂಘಪರಿವಾರದವರಿಗೆ ಇತಿಹಾಸವನ್ನು ಮರೆಯುವ ಮತ್ತು ಬದಲಾಯಿಸುವುದು ಒಂದು ರೀತಿಯ ಚಾಳಿಯಾಗಿದೆ. ಮಹಾತ್ಮಾ ಗಾಂಧಿಯವರ ಹತ್ಯೆಯಿಂದ ಆರಂಭಿಸಿ ಗುಜರಾತ್ ನರಮೇಧದ ವರೆಗೆ ಸಾವಿನ ವ್ಯಾಪಾರಿ ಯಾರು ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತಿದೆ. ಬೆದರಿಕೆ ಧಾಳಿಗಳಿಂದ ಸಂಘಪರಿವಾರದವರು ಸಿಪಿಐಎಮ್ ಸಂಘಟನೆಯನ್ನು ಸೋಲಿಸಲು ಸಾಧ್ಯವಿಲ್ಲ. ನಾವು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ದವಾಗಿದ್ದೆವೆ. ಸಿಪಿಐಎಮ್ ಕಾರ್ಯಕರ್ತರು ತಮ್ಮ ಜೀವವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿ ನೀಡಿದ್ದಾರೆ. ನಾವು ಅವರ ಸವಾಲನ್ನು ಸ್ವೀಕರಿಸಿದ್ದು, ಪಿಣರಾಯಿ ವಿಜಯನ್ ಅವರನ್ನು ಮಂಗಳೂರಿನ ಸೌಹಾರ್ದ ರಾಲಿಗೆ ಕರೆದುಕೊಂಡು ಬಂದೇ ಬರುತ್ತೇವೆ ಎಂದರು.

ಪಿಣರಾಯಿ ವಿಜಯನ್ ಅವರು ಬಿಲ್ಲವ ಸಮುದಾಯದ ನಾಯಕರಾಗಿದ್ದು, ಬಿಲ್ಲವ ಸಮುದಾಯ ಕೂಡ ಅವರನ್ನು ಮಂಗಳೂರಿನ ಆಗಮನವನ್ನು ಸ್ವಾಗತಿಸಿದ್ದಾರೆ. ದಲಿತರು ಮತ್ತು ಹಿಂದುಳಿದವರು ಸಂಘಪರಿವಾರದವರಿಂದ ಶೋಷಣೆಗೆ ಒಳಗಾಗಿದ್ದಾರೆ. ಎಲ್ಲಿಯೇ ಆದರೂ ದಲಿತರು ಕಾರ್ಮಿಕರ ಮೇಲೆ ಧಾಳಿ ನಡೆದ ವೇಳೆ ಸಿಪಿಐಎಮ್ ಪಕ್ಷ ತನ್ನ ಧ್ವನಿಯನ್ನು ಎತ್ತಿದೆ. ಸಿಪಿಐಎಮ್ ಪಕ್ಷ ದಮನಿತರ ಧ್ವನಿಯಾಗಿದೆ, ನಾವು ಯಾರ ವಿರುದ್ದವೂ ಯುದ್ದವನ್ನು ಸಾರುತ್ತಿಲ್ಲ. ಸಂಘಪರಿವಾರದವರು ನಮ್ಮ ಪೋಸ್ಟರ್ ಬ್ಯಾನರ್ ಗಳನ್ನು ಸುಡಬಹುದೇ ವಿನಹ ನಮ್ಮ ರ್ಯಾಲಿ ಮತ್ತು ನಮ್ಮ ಉದ್ದೇಶಗಳನ್ನು ಬದಲಿಸಲು ಸಾಧ್ಯವಿಲ್ಲ.

ಸಂಘಪರಿವಾರದವರು ಸೌಹಾರ್ದ ರ್ಯಾಲಿಯನ್ನು ನಿಲ್ಲಿಸಲು ಸರ್ವರೀತಿಯ ಪ್ರಯತ್ನವನ್ನು ನಡೆಸುತ್ತಿದ್ದು ಅವರಿಗೆ ಜಿಲ್ಲೆಯಲ್ಲಿ ಶಾಂತಿಯ ಅಗತ್ಯವಿಲ್ಲ. ಅವರಿಗೆ ಸದಾ ಜಿಲ್ಲೆಯ ಕೋಮು ಸಂಘರ್ಷಗಳು ನಡೆಯಬೇಕು ಮತ್ತು ಜನರು ಸದಾ ಹೆದರಿಕೊಂಡು ಬದುಕಬೇಕು ಎಂದು ಅಪೇಕ್ಷೆ ಪಡುತ್ತಾರೆ. ಆರ್ ಎಸ್ ಎಸ್ ಯುವಕರಿಗೆ ಕೋಮು ಘರ್ಷಣೆಗೆ ಸಂಘಪರಿವಾದವರ ಮೂಲಕ ಪ್ರಚೋದನೆ ನೀಡುತ್ತದೆ. ಅದನ್ನು ಬಿಜೆಪಿ ಬೆಂಬಲಿಸುತ್ತಿದ್ದು, ದಕ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೌಹಾರ್ದ ರ್ಯಾಲಿಯಲ್ಲಿ ಭಾಗವಹಿಸುವಂತೆ ವಿನಂತಿಸಿದರು.


Spread the love